ಮಂತ್ರಾಲಯದಲ್ಲಿ 100 ಎಕರೆಯಲ್ಲಿ ‘ಜಲಾಶಯ’

KannadaprabhaNewsNetwork |  
Published : Jul 03, 2026, 02:00 AM IST
Mantralaya Swamiji | Kannada Prabha

ಸಾರಾಂಶ

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಶ್ರೀಮಠದ ಸುಮಾರು 100 ಎಕರೆ ಜಾಗದಲ್ಲಿ ‘ಜಲಾಶಯ’ ನಿರ್ಮಾಣ ಸೇರಿ ಹಲವು ಜನಪರ ಯೋಜನೆಗಳ ಅನುಷ್ಠಾನಕ್ಕೆ ಸಂಕಲ್ಪ ಮಾಡಿದೆ.

ಮೋಹನ್‌ ಹಂಡ್ರಂಗಿ

ಕನ್ನಡಪ್ರಭ ವಾರ್ತೆ ಮಂತ್ರಾಲಯ

ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದ ತುಂಗ-ಭದ್ರಾ ನದಿ ತಟದಲ್ಲಿರುವ ಪ್ರಮುಖ ಧಾರ್ಮಿಕ ಕ್ಷೇತ್ರ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠವು ಮಂತ್ರಾಲಯ ಸೇರಿ ಸುತ್ತಮುತ್ತಲ ಗ್ರಾಮಗಳ ನೀರಿನ ಬವಣೆ ನೀಗಿಸಲು ಶ್ರೀಮಠದ ಸುಮಾರು 100 ಎಕರೆ ಜಾಗದಲ್ಲಿ ‘ಜಲಾಶಯ’ ನಿರ್ಮಾಣ ಸೇರಿ ಹಲವು ಜನಪರ ಯೋಜನೆಗಳ ಅನುಷ್ಠಾನಕ್ಕೆ ಸಂಕಲ್ಪ ಮಾಡಿದೆ.

ಬೆಂಗಳೂರಿನಿಂದ ಶ್ರೀಮಠಕ್ಕೆ ಭೇಟಿ ನೀಡಿದ್ದ ಪತ್ರಕರ್ತರ ತಂಡದೊಂದಿಗೆ ರಾಘವೇಂದ್ರ ಸ್ವಾಮಿ ಮಠದ ಪೀಠಾಧ್ಯಕ್ಷ ಸುಬುದೇಂದ್ರ ತೀರ್ಥ ಸ್ವಾಮೀಜಿ ಅವರು ಮುಕ್ತವಾಗಿ ಮಾತನಾಡಿದರು. ಮಠದ ಇತಿಹಾಸ, ಗುರು ಪರಂಪರೆ, ಮಠದ ಧಾರ್ಮಿಕ ಕಾರ್ಯಗಳು, ಸಾಮಾಜಿಕ ಮತ್ತು ಶೈಕ್ಷಣಿಕ ಸೇವಾ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು.

ಹುಂಡಿ ಆದಾಯ, ಸೇವಾ ಕಾಣಿಕೆ, ಶ್ರೀ ಮಠದ ಜಮೀನುಗಳಿಂದ ಬರುವ ಆದಾಯದಿಂದ ರಾಘವೇಂದ್ರ ಸ್ವಾಮಿ ಮಠದ ನಿರ್ವಹಣೆ ಹಾಗೂ ಸೇವಾ ಕಾರ್ಯಗಳು ನಡೆಯುತ್ತಿವೆ. ಯಾವುದೇ ಸರ್ಕಾರಗಳಿಂದ ಮಠಕ್ಕೆ ನಿರ್ದಿಷ್ಟ ಅನುದಾನ ಬರುವುದಿಲ್ಲ. ಮಠದ ಆದಾಯದಿಂದಲೇ ಹಲವು ಜನಕಲ್ಯಾಣ ಕಾರ್ಯಗಳು ನಡೆಸುತ್ತಿದೆ. ಈ ನಡುವೆ 2009ರ ಪ್ರವಾಹದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪುನರ್ವಸತಿಗಾಗಿ ₹11 ಕೋಟಿ ಅನುದಾನ ನೀಡಿದ್ದರು. ಈ ಅನುದಾನದಿಂದ ಮಠದ ಆವರಣದಲ್ಲಿ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರು ಪೂರೈಕೆ:

ಮಂತ್ರಾಲಯ ಶ್ರೀಕ್ಷೇತ್ರವು ತುಂಗ-ಭದ್ರಾ ನದಿ ತೀರದಲ್ಲಿದ್ದರೂ ಮೂರು ತಿಂಗಳು ಮಾತ್ರ ಕುಡಿಯುವ ನೀರು ಲಭ್ಯವಾಗುತ್ತದೆ. ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದೆ. ಕೊಳವೆ ಬಾವಿಗಳಲ್ಲಿ ತೆಗೆಯುವ ನೀರಿನಲ್ಲಿ ಫ್ಲೊರೈಡ್‌ ಅಂಶ ಇರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಮಂತ್ರಾಲಯದಲ್ಲಿ ಶ್ರೀ ಮಠದಿಂದಲೇ ಕೊಳವೆ ಬಾವಿಗಳನ್ನು ಕೊರೆಸಿ ಆ ನೀರನ್ನು ಶುದ್ಧೀಕರಿಸಿ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

100 ಎಕರೆಯಲ್ಲಿ ಜಲಾಶಯ ನಿರ್ಮಾಣ:

ಮಂತ್ರಾಲಯ ಮತ್ತು ಸುತ್ತಮುತ್ತಲ ಹಳ್ಳಿಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ಶ್ರೀ ಮಠದ ಸುಮಾರು 100 ಎಕರೆ ಜಾಗದಲ್ಲಿ ಜಲ ಸಂಗ್ರಹಗಾರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ನೀರನ್ನು ಇಲ್ಲಿ ಶೇಖರಿಸಿ, ಬೇಸಿಗೆ ಸಂದರ್ಭದಲ್ಲಿ ಬಳಸುವುದು ಯೋಜನೆ ಉದ್ದೇಶ. ಈ ಯೋಜನೆಗೆ ಎಚ್‌ಎಎಲ್‌ ಸಂಸ್ಥೆಯು ಸಿಎಸ್‌ಆರ್‌ ನಿಧಿಯಿಂದ ಅನುದಾನ ನೀಡಲು ಮುಂದೆ ಬಂದಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ಸುಬುದೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಡೀಮ್ಡ್‌ ವಿಶ್ವವಿದ್ಯಾಲಯ:

ಶ್ರೀ ಮಠದಿಂದ ಮಂತ್ರಾಲಯದಲ್ಲಿ ಹಲವು ಶಾಲಾ-ಕಾಲೇಜುಗಳು, ಆಸ್ಪತ್ರೆಗಳನ್ನು ನಡೆಸಲಾಗುತ್ತಿದೆ. ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಮಂತ್ರಾಲಯ ಮಠದ ಸುಮಾರು 300 ಎಕರೆ ಜಾಗದಲ್ಲಿ ಡೀಮ್ಡ್‌ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಡ ಜನರಿಗಾಗಿ ಮಂತ್ರಾಲಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಬೆಂಗಳೂರು ಹೊರವಲಯ ಅಥವಾ ಉತ್ತರ ಕರ್ನಾಟಕ ಭಾಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿ ಭವಿಷ್ಯದಲ್ಲಿ ಮಠದಿಂದ ಕೈಗೊಳ್ಳಲಿರುವ ಹಲವು ಯೋಜನೆಗಳ ಬಗ್ಗೆ ಸ್ವಾಮೀಜಿ ಮಾಹಿತಿ ನೀಡಿದರು.

ಪಾರದರ್ಶಕ ಆಡಳಿತಕ್ಕೆ ಒತ್ತು:

ಮಠದ ಆಡಳಿತವು ಪಾರದರ್ಶಕವಾಗಿದೆ. ದಿನ ನಿತ್ಯದ ಲೆಕ್ಕ ಪರಿಶೋಧನೆ, ಮಾಸಿಕ ಲೆಕ್ಕ ಪರಿಶೋಧನೆ, ವಾರ್ಷಿಕ ಲೆಕ್ಕ ಪರಿಶೋಧನೆ ನಿಯಮಿತವಾಗಿ ನಡೆಯುತ್ತದೆ. ಮಠದಲ್ಲಿ ನಗದು ವ್ಯವಹಾರ ನಡೆಯುವುದಿಲ್ಲ. ಆನ್‌ಲೈನ್‌, ಚೆಕ್‌, ಡಿ.ಡಿ. ಮುಖಾಂತರವೇ ಹಣದ ವಹಿವಾಟು ನಡೆಸಲಾಗುತ್ತಿದೆ. ಮಠಕ್ಕೆ ಬರುವ ಭಕ್ತಾದಿಗಳಿಗೆ ಊಟ, ವಸತಿ, ದರ್ಶನ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಲಕ್ಷ ಜನ ಬಂದರೂ ಎರಡು ಬಾರಿ ಪ್ರಸಾದ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹಲವು ಯೋಜನೆಗಳು:

ಮಠವು ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮಂತ್ರಾಲಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಎಂಜಿನಿಯರಿಂಗ್‌ ಕಾಲೇಜು, ವೈದ್ಯಕೀಯ ಕಾಲೇಜು, ಬಡ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವ ಸಂಕಲ್ಪ ಮಾಡಿದೆ. ಈಗಾಗಲೇ ಮಠವು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ಶಾಖಾ ಮಠಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಕ್ರಮಬದ್ಧ ಮಾಡಲು ಶ್ರೀ ಮಠವು ತೀರ್ಮಾನಿಸಿದೆ ಎಂದು ಹೇಳಿದರು.

ಭಕ್ತಾದಿಗಳೇ ಸ್ವಚ್ಛತೆಕಾಪಾಡಿ: ಶ್ರೀ ಮನವಿ

ಮಂತ್ರಾಲಯ ಶ್ರೀಕ್ಷೇತ್ರದಲ್ಲಿ ಸ್ಚಚ್ಛತೆಗೆ ಆದ್ಯತೆ ನೀಡಿದ್ದೇವೆ. ದಿನಕ್ಕೆ ಮೂರು ಬಾರಿ ಶ್ರೀ ಮಠದ ಆವರಣ ಸ್ವಚ್ಛಗೊಳಿಸುತ್ತೇವೆ. ಇದರ ಜೊತೆಗೆ ಇಲ್ಲಿಗೆ ಬರುವ ಭಕ್ತಾದಿಗಳು ಸ್ವಚ್ಛತೆ ಕಾಪಾಡಬೇಕು. ನದಿಯಲ್ಲಿ ಬಟ್ಟೆಗಳು, ತ್ಯಾಜ್ಯಗಳನ್ನು ಎಸೆಯಬಾರದು. ನದಿಗಳಲ್ಲಿ ಬಟ್ಟೆ ಹರಿ ಬಿಡುವುದು ಶಾಸ್ತ್ರಕ್ಕೆ ವಿರೋಧ. ಇದರಿಂದ ಯಾವ ಫಲ ಅಥವಾ ಲಾಭ ಸಿಗುವುದಿಲ್ಲ. ಹೀಗಾಗಿ ಭಕ್ತರು ಕ್ಷೇತ್ರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಲು ಸಹಕರಿಸಬೇಕು ಎಂದು ಸುಬುದೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.----

-ಕೋಟ್‌-

ಮನುಕುಲಕ್ಕೆ ಒಳಿತಾಗಬೇಕು. ಇತರೆ ಧರ್ಮಗಳು ಅವರವರ ಧರ್ಮ ಪಾಲಿಸಿಕೊಂಡು ಪರಸ್ಪರ ಅಣ್ಣ-ತಮ್ಮಂದಿರ ರೀತಿ ಸಹಬಾಳ್ವೆಯಿಂದ ಬಾಳಬೇಕು.

- ಸುಬುದೇಂದ್ರ ತೀರ್ಥ ಸ್ವಾಮೀಜಿ, ಪೀಠಾಧ್ಯಕ್ಷ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಜನಪರ ಯೋಜನೆ ಜನರಿಗೆ ತಲುಪಿಸಿ
ಭವಿಷ್ಯದ ಪೀಳಿಗೆ ಆರೋಗ್ಯ ಕಾಪಾಡಲು ಪೋಲಿಯೋ ಲಸಿಕೆ ಹಾಕಿಸಿ: ಶಾಸಕ ಸಿ.ಎನ್.ಬಾಲಕೃಷ್ಣ ಕರೆ