ದೊಡ್ಡಬಳ್ಳಾಪುರ: ಸಾಹಿತ್ಯಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸದೃಢಗೊಳಿಸುವುದು ಮತ್ತು ಸಾಂಸ್ಕೃತಿಕ ದನಿಯಾಗಿ ಕಟ್ಟುವ ಸಂಕಲ್ಪದೊಂದಿಗೆ ಮುಂಬರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಹೃದ್ರೋಗ ತಜ್ಞೆ, ವೈದ್ಯಕೀಯ ಲೇಖಕಿ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.
ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಈ ಬಗ್ಗೆ ಗಂಭೀರ ಹೋರಾಟಗಳು ಅಗತ್ಯವಾಗಿವೆ. ಕನ್ನಡಿಗರ ಹೃದಯದಲ್ಲಿ ಕನ್ನಡದ ಅಭಿಮಾನ ಮತ್ತು ಕಾಳಜಿಯನ್ನು ತುಂಬುವುದು ಹೇಗೆ ಎಂಬ ಬಗ್ಗೆ ಚಿಂತನೆ ನಡೆಯಬೇಕು. ಕನ್ನಡ ಶಾಲೆಗಳಿಗೆ ಮರುಜೀವ ತುಂಬಬೇಕು. ಇದಕ್ಕಾಗಿ ಪರಿವರ್ತನೆ ಅಗತ್ಯ ಎಂದು ಹೇಳಿದರು.
ಜಾತಿ, ಹಣ ಅಥವಾ ರಾಜಕಾರಣದ ಪ್ರಭಾವವನ್ನು ಬಳಸಿ ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಯಾಗುತ್ತಿಲ್ಲ. ವಿದ್ವತ್ತು, ಕನ್ನಡದ ಅಸ್ಮಿತೆಯ ರಕ್ಷಣೆಯ ಸಂಕಲ್ಪ ಹಾಗೂ ಜ್ಞಾನಾಧಾರಿತವಾಗಿ ಪರಿಷತ್ತಿನ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶದೊಂದಿಗೆ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದರು.ಕನ್ನಡ ವೈದ್ಯ ಬರೆಹಗಾರರ ಸಮಿತಿಯ ಡಾ.ಆರ್.ಇಂದಿರಾ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ 5 ದಶಕಗಳಿಂದ ಅವಿಸ್ಮರಣೀಯ ಕೊಡುಗೆಯನ್ನು ನೀಡಿರುವ ಡಾ.ವಿಜಯಲಕ್ಷ್ಮಿ ಅವರು, ಮಕ್ಕಳ ಹೃದಯರೋಗಗಳ ತಜ್ಞ ವೈದ್ಯರಾಗಿ ಮಹತ್ವದ ಕೊಡುಗೆ ನೀಡಿದ್ದಾರೆ. ತಮ್ಮ ವೈದ್ಯಕೀಯ ಬರೆಹಗಳ ಮೂಲಕ ನಿರಂತರ ಜಾಗೃತಿಯನ್ನು ಮೂಡಿಸುತ್ತಿರುವ ಅವರ ಸೇವೆ ಕನ್ನಡ ಸಾಹಿತ್ಯ ಪರಿಷತ್ತಿಗೂ ವಿಸ್ತಾರವಾಗುವುದು ಅಗತ್ಯ ಎಂದು ಹೇಳಿದರು.
26ಕೆಡಿಬಿಪಿ5- ದೊಡ್ಡಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಮಾತನಾಡಿದರು.