ಧಾರವಾಡ:
ಅನನ್ಯ ಪ್ರಕಾಶನದ ವತಿಯಿಂದ ನಡೆದ ಸಮಾರಂಭದಲ್ಲಿ ಪಟ್ಟಣಶೆಟ್ಟಿ ಅವರ ‘ನೀನಾ 60’ ಜತೆಗೆ ಹೊಳೆಗೆ ಹೊಳೆದರ್ಥ, ಸಖ್ಯದ ಆಖ್ಯಾನ, ನುಡಿ ನೊಗಡು ಹಾಗೂ ಮುಗಿಯದ ಮಾತು ಕೃತಿಗಳನ್ನು ಸಾಹಿತಿ ರಘುನಾಥ ಚಹ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಸುಮಾರು 60 ವರ್ಷಗಳಿಂದ ಕಾವ್ಯ, ಕಥೆ, ನಾಟಕ ಹಾಗೂ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಕನ್ನಡದ ಪ್ರಮುಖ ಕವಿ. ವಿಶೇಷವಾಗಿ ಕಾವ್ಯ ಪ್ರಕಾರದಲ್ಲಿ ಪ್ರೀತಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಕಾವ್ಯ ರಚಿಸಿದ ಕವಿಗಳು ವಿರಳ. ಹೀಗಾಗಿ ಪಟ್ಟಣಶೆಟ್ಟಿ ಅವರ ಕಾವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ನೀನಾದಲ್ಲಿ 60 ವರ್ಷಗಳ ಹಿಂದೆ ಬರೆದ ಕವನಗಳು ಅವರ ವಿಸ್ತಾರವಾದ ಚಿಂತನೆಗೆ ಇಂದಿಗೂ ಪ್ರಸ್ತುತವಾಗಿವೆ. ಆ ಕವನಗಳ ಮಹತ್ವ ಕಡಿಮೆಯಾಗಿಲ್ಲ. ಪಟ್ಟಣಶೆಟ್ಟಿ ಅವರಲ್ಲಿರುವ ಪ್ರೀತಿ-ಮಮತೆ, ತಾಯ್ತನ ಗುಣ, ಮಮತೆ-ಕಾರುಣ್ಯ ವಿಶೇಷತೆಯು ಅವರ ಸಾಹಿತ್ಯದ ಸಾಲುಗಳಲ್ಲಿ ಕಂಡು ಬರುತ್ತದೆ ಎಂದರು.ಕೃತಿಕಾರ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ನೀನಾ ಕೃಷಿ ಎಷ್ಟು ಕಾಡುತ್ತದೆ ಎಂದರೆ ಈ ಕವನ ಸಂಕಲನದ ವ್ಯಕ್ತಿ ಯಾವಾಗಲೂ ನನ್ನ ಕಣ್ಣೆದುರಿಗೆ ಇರುತ್ತಾಳೆ. ನನ್ನೊಳಗೆ ಬರೆಯುವ ಪುಳಕವನ್ನು ತುಂಬಿದ ವ್ಯಕ್ತಿ ‘ನೀನಾ’ಗೆ ಕೃತಜ್ಞತೆ ಹೇಳಬೇಕು ಎಂದರು. ಬುಕ್ ಬ್ರಹ್ಮ ಸಂಪಾದಕ ದೇವುಪತ್ತಾರ ಮಾತನಾಡಿದರು.
ಅನನ್ಯ ಪ್ರಕಾಶನದ ಪ್ರಕಾಶಕಿ ಹೇಮಾ ಪಟ್ಟಣಶೆಟ್ಟಿ, ರವಿ ಕುಲಕರ್ಣಿ, ರಾಜಕುಮಾರ ಮಡಿವಾಳರ, ಮಾಜಿ ಶಾಸಕಿ ಸೀಮಾ ಮಸೂತಿ ಮತ್ತಿತರರು ಇದ್ದರು.