ಹುಬ್ಬಳ್ಳಿ:
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಅವರ ಪಕ್ಷದ ಮುಖಂಡರೇ ಮಾಡುತ್ತಿದ್ದಾರೆ. ನವೆಂಬರ್ ಕ್ರಾಂತಿ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಕ್ರಾಂತಿಯಾಗುವುದಂತೂ ನಿಶ್ಚಿತ ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಇದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಭ್ರಷ್ಟಾಚಾರ ಮಾಡುವುದೇ ಒಂದು ಕಾಯಕವಾಗಿದೆ. ತಮ್ಮ ಅಧಿಕಾರದಾಸೆಗಾಗಿ ಈ ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ರಾಜ್ಯದ ಜನತೆಗೆ ಇನ್ನೂ ಎರಡು ವರ್ಷ ಸಂಕಷ್ಟ ಎದುರಿಸಲೇಬೇಕಾದ ದುಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ. ಬಿಹಾರ ಚುನಾವಣೆ ಕುರಿತ ಅವರ ಹೇಳಿಕೆಗೆ ಮಹತ್ವ ಕೊಡುವುದಿಲ್ಲ. ಅವರಲ್ಲಿ ನಿಜವಾದ ವಿಷಯಗಳು ಇಲ್ಲ. ಅವರು ಜನರ ಸಮೀಪವೇ ಹೋಗುವುದಿಲ್ಲ. ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಹೇಳಿಕೊಟ್ಟ ವಿಷಯದಂತೆ ಅವರು ಮಾತನಾಡುತ್ತಾರೆ. ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದಲ್ಲಿ ಆಗಿರುವ ದೊಡ್ಡ ಪ್ರಮಾಣದ ಬೆಳೆ ಹಾನಿ ಕುರಿತು ಪ್ರಸ್ತಾಪ ಮಾಡಲಾಗುವುದು ಎಂದ ಅವರು, ರಾಜ್ಯದಲ್ಲಿ ಖರೀದಿ ಕೇಂದ್ರಗಳು ಶುರುವಾಗಿಲ್ಲ, ಎರಡೂವರೆ ವರ್ಷದಲ್ಲಿ ಉದೋಗವಿಲ್ಲ, ಅಭಿವೃದ್ಧಿಯೂ ಶೂನ್ಯವಾಗಿದೆ. ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಎಫ್‌ಎಂಜಿಸಿ ಕ್ಲಸ್ಟರ್‌ಗೆ ಅನುಮತಿಸಲಾಗಿತ್ತು. ಆದರೆ, ಈ ಸರ್ಕಾರ ಇನ್ನೂ ಚಾಲನೆ ನೀಡಿಲ್ಲ. ಸೆಮಿಕಂಡಕ್ಟರ್ ಹಬ್, ಗ್ಲೋಬಲ್ ಕೆಪೆಬಿಲಿಟಿ ಸೆಂಟರ್ ಉತ್ತರ ಕರ್ನಾಟಕಕ್ಕೆ ತಂದಿಲ್ಲ ಎಂದು ಕಿಡಿಕಾರಿದರು.
ಕೃಷ್ಣ, ಭೀಮಾ, ತುಂಗಾಭದ್ರಾ ಸೇರಿ ಇತರ ನದಿ ವ್ಯಾಪ್ತಿಯ ನೀರಾವರಿ ಮತ್ತು ಅನುದಾನ ಹಂಚಿಕೆ ಕುರಿತು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.