ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಜೆ.ಪಿ.ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ದೆಹಲಿಯ ಭಾರತ ಯಾತ್ರಾ ಟ್ರಸ್ಟ್ ಅಧ್ಯಕ್ಷ ಸುಧೀಂಧ್ರ ಬದೋರಿಯಾ, ಶಾಸಕ ಬಿ.ಆರ್.ಪಾಟೀಲ್ ಮತ್ತಿತರರು ಹಾಜರಿದ್ದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಇಂದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಬದಲಾವಣೆಗಾಗಿ ಇನ್ನೊಂದು ಕ್ರಾಂತಿಯಾಗುವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಭಾರತ ಯಾತ್ರಾ ಕೇಂದ್ರ ಮತ್ತು ಲೋಕನಾಯಕ ಜೆ.ಪಿ.ವಿಚಾರ ವೇದಿಕೆಯಿಂದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಜಯಪ್ರಕಾಶ್ ನಾರಾಯಣ್ ಹುಟ್ಟುಹಬ್ಬ ಹಾಗೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಜೆ.ಪಿ.ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿರುವ ಅಘೋಷಿತ ತುರ್ತು ಪರಿಸ್ಥಿತಿ, ಭ್ರಷ್ಟಾಚಾರದ ವಿರುದ್ಧ 3ನೇ ಸ್ವಾತಂತ್ರ್ಯಸಂಗ್ರಾಮದ ರೀತಿ ಹೋರಾಟ ನಡೆಸಬೇಕಿದೆ. ದೇಶದಲ್ಲಿ ಬದಲಾವಣೆ ಆಗಬೇಕು. ಇದಕ್ಕಾಗಿ ಕ್ರಾಂತಿ ನಡೆಯಬೇಕು. ಕಾಕ್ರೋಚ್ ಜನತಾ ಪಾರ್ಟಿಯವರು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ನಾವು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಇನ್ನೊಂದು ಸಂಪೂರ್ಣ ಕ್ರಾಂತಿಯಾಗುವ ಅವಶ್ಯಕತೆ ಇದೆ. ಹೋರಾಟದ ದಾರಿ ಹುಡುಕೋಣ ಎಂದು ಸಲಹೆ ನೀಡಿದರು.
ಬಿ.ಆರ್.ಪಾಟೀಲರಿಗೆ ಅನ್ಯಾಯ:
ನನಗೆ ಅವಕಾಶಗಳು ಲಭಿಸಿದ್ದರಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ. ಶಾಸಕ ಬಿ.ಆರ್.ಪಾಟೀಲರಿಗೆ ಸಚಿವರಾಗುವ ಅರ್ಹತೆ ಇದ್ದರೂ ಆಗಲಿಲ್ಲ. ಅನ್ಯಾಯವಾಗಿದೆ. ಏಕೆ ಸಚಿವರಾಗಲಿಲ್ಲ ಎಂದು ಹೇಳಲು ಆಗುವುದಿಲ್ಲ. ನನಗೆ ಈಗ 80 ವರ್ಷ, ಉಗ್ರಪ್ಪ ಅವರಿಗೆ ಇನ್ನೂ 70 ವರ್ಷ ಆಗಿರುವುದರಿಂದ ಮುಂದೆ ಅವಕಾಶಗಳು ಸಿಗಬಹುದು. ನನಗೆ ರಾಜ್ಯಸಭಾ ಸ್ಥಾನ ನೀಡುವುದಾಗಿ ರಾಹುಲ್ ಗಾಂಧಿ ಹೇಳಿದರು. ಆದರೆ ಅದನ್ನು ಒಪ್ಪಿಕೊಳ್ಳಲಿಲ್ಲ ಎಂದು ವಿವರಿಸಿದರು. ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ದೆಹಲಿಯ ಭಾರತ ಯಾತ್ರಾ ಟ್ರಸ್ಟ್ ಅಧ್ಯಕ್ಷ ಸುಧೀಂಧ್ರ ಬದೋರಿಯಾ, ಶಾಸಕ ಬಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಸಿದ್ದು ನೇತೃತ್ವಕ್ಕೆ ಉಗ್ರಪ್ಪ ಮನವಿ
ದೇಶದಲ್ಲಿ ಇಂದು ತುರ್ತು ಪರಿಸ್ಥಿತಿಯ ವಾತಾವರಣವಿದೆ. ಭ್ರಷ್ಟ ಚುನಾವಣಾ ವ್ಯವಸ್ಥೆ ಇದೆ. ರಿಯಲ್ ಎಸ್ಟೇಟ್ ವಿರುದ್ಧ ಹೋರಾಡುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಇದರ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಹಿಸಿಕೊಳ್ಳಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮನವಿ ಮಾಡಿದರು. ದೇಶದಲ್ಲಿ ಮೋದಿ ಅವರು ಪ್ರಧಾನಿಯಾದ ಬಳಿಕ ಸಾಲ ವಿಪರೀತ ಹೆಚ್ಚಳವಾಗಿದೆ. ರಾಮಮಂದಿರದ ಹಣ ಲೂಟಿ ಮಾಡಲಾಗುತ್ತಿದೆ. ಇಂದಿನ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ನಾನು, ಬಿ.ಎಲ್.ಶಂಕರ್, ಸಿದ್ದರಾಮಯ್ಯ ಅವರಂತಹವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹತಾಶರಾಗಬಾರದು. ಹೋರಾಟ ನಡೆಸಬೇಕು. ಇದರ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಿಕೊಳ್ಳಬೇಕು ಎಂದು ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.