ತನಿಖೆ ಪ್ರಗತಿಯಲ್ಲಿದೆ ಎಂಬುದಷ್ಟೇ ಅನ್ನ ಭಾಗ್ಯ ಅಕ್ಕಿ ಕಳ್ಳತನಕ್ಕೆ ಸಿಗೋ ಭಾಗ್ಯ ।
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಶಹಾಪುರದಲ್ಲಿ ನಡೆದ 2 ಕೋಟಿ ರು. ಮೌಲ್ಯದ 6 ಸಾವಿರ ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ನಾಪತ್ತೆ ಪ್ರಕರಣ ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ಇಂತಹ ಪ್ರಕರಣಗಳು ಪತ್ತೆಯಾಗಿ ಠಾಣೆಗಳಲ್ಲಿ ದೂರು ದಾಖಲಾಗಿವೆಯಾದರೂ, "ತನಿಖೆ ಪ್ರಗತಿಯಲ್ಲಿದೆ " ಹೆಸರಲ್ಲಿ ಧೂಳು ತಿನ್ನುತ್ತ ಮೂಲೆ ಸೇರಿವೆ.ಜಿಲ್ಲೆಯ ಗುರುಮಠಕಲ್ ಹಾಗೂ ಶಹಾಪುರ ಭಾಗದಲ್ಲಿ ಪಡಿತರ ಅಕ್ಕಿ ಅಕ್ರಮ ದಂಧೆ ಅತಿ ಹೆಚ್ಚು. ಬಹುತೇಕ ದೂರು ದಾಖಲಿಸಲಾಗುವುದೇ ಇಲ್ಲ. ಖಾಕಿಪಡೆಯ "ಕೈ " ಕಟ್ಟಿದಂತಿರುವ ಪ್ರಭಾವಿಗಳು ಇವುಗಳ ಬೆಳಕಿಗೆ ಬಾರದಂತೆ ನಿಗಾ ವಹಿಸಿ, ಠಾಣೆಯಲ್ಲೇ ಪಂಚಾಯ್ತಿ ನಡೆಸಿ ಬಿಡುತ್ತಾರೆ ಎನ್ನುವ ಮಾತುಗಳಿವೆ.
ಇದೇ ಮೇ 29ರಂದು ಶಹಾಪುರದ ಸರ್ಕಾರಿ ಗೋದಾಮು ಮುಂದೆ ನಿಲ್ಲಿಸಿದ್ದ ಲಾರಿಯೊಂದರಲ್ಲಿದ್ದ, ಸುಮಾರು ₹7.59 ಲಕ್ಷ ಮೌಲ್ಯದ 50 ಕೆಜಿಯ 450 ಪ್ಯಾಕೆಟ್‌ಗಳ ಸಮೇತ ಕಳವು ಮಾಡಿದ್ದರು. ಮರುದಿನ ಹೊರವಲಯದಲ್ಲಿ ಲಾರಿ ಸಿಕ್ಕಿತೇ ಹೊರತು, ಅದರಲ್ಲಿನ ದಾಸ್ತಾನು ಇರಲಿಲ್ಲ. ಈ ಕುರಿತು ಠಾಣೆಯಲ್ಲಿ ದೂರು (0114/2023) ದಾಖಲಾಗಿದರೂ ಈವರೆಗೆ ಅದರ ಸುಳಿವಿಲ್ಲ. ತನಿಖೆ ಪ್ರಗತಿಯಲ್ಲಿದೆ ಅನ್ನೋದಷ್ಟೇ ಅಧಿಕಾರಿಗಳ ಉತ್ತರ.
ಲಾರಿ ಚಾಲಕ ಹಾಗೂ ಕ್ಲೀನರ್‌ಗಳ ಮೇಲೆ ದೂರು ದಾಖಲಿಸಿಕೊಳ್ಳುವ ಅಧಿಕಾರಿಗಳು, ಮೂಲ ಆರೋಪಿಗಳ ಪತ್ತೆ ಮಾಡುವುದೇ ಇಲ್ಲ ಎನ್ನುವುದು ಸಾರ್ವಜನಿಕರ ಆರೋಪ. ಪಡಿತರ ದಾಸ್ತಾನು ಅಕ್ರಮವಾಗಿ ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ರೇಶನ್ ಅಕ್ಕಿ ಪಾಲಿಶ್ ಮಾಡಿ ಹೊಸ ರೂಪು ಕೊಟ್ಟು ಸಾವಿರಾರು ರು.ಗೆ ಮಾರಾಟ ಮಾಡಲಾಗುತ್ತದೆ ಎಂಬುದು ಈ ಕಳ್ಳತನ ಜಾಲದ ಹಿಂದಿನ ಮರ್ಮ.