ಕನ್ನಡಪ್ರಭ ವಾರ್ತೆ ಮಡಿಕೇರಿ
ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿ ಹಾಗೂ ಪವಿತ್ರ ಕ್ಷೇತ್ರ ಶ್ರೀಭಗಂಡೇಶ್ವರ ದೇವಾಲಯಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಮತ್ತು ಕುಟುಂಬದವರು ಬುಧವಾರ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಎ.ಎಸ್.ಪೊನ್ನಣ್ಣ ಅವರ 51 ನೇ ಜನ್ಮ ದಿನದ ಪ್ರಯುಕ್ತ ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಮಹಾಸಂಕಲ್ಪ ಪ್ರಾರ್ಥನೆ ಸಲ್ಲಿಸಿದರು. ಮೊದಲಿಗೆ ಮಹಾ ಗಣಪತಿಗೆ ಪೂಜೆ, ನಂತರ ಶ್ರೀಭಗಂಡೇಶ್ವರ ದೇವಾಲಯದಲ್ಲಿ ನಾಡಿನ ಎಲ್ಲರಲ್ಲಿ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ಪ್ರಾರ್ಥಿಸಿದರು, ನಂತರ ಮಹಾವಿಷ್ಣು ಮತ್ತು ಸುಬ್ರಮಣ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಲಕಾವೇರಿಗೆ ತೆರಳಿ ಕುಂಕುಮಾರ್ಚನೆ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆಯನ್ನು ಶಾಸಕರಾದ ಪೊನ್ನಣ್ಣ ಅವರು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ತಾಯಿ ಕಾವೇರಿ ಮಾತೆ ಶಾಸಕರಿಗೆ ಒಳಿತು ಉಂಟುಮಾಡಲಿ, ಸರ್ಕಾರದಲ್ಲಿ ಮತ್ತಷ್ಟು ಅವಕಾಶ ದೊರೆಯಲಿ ಎಂದು ಪ್ರಾರ್ಥಿಸಿದರು. ವಿಶೇಷ ಪೂಜೆ ನಂತರ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹುಟ್ಟು ಹಬ್ಬದ ಪ್ರಯುಕ್ತ ಕೊಡಗಿನ ಜನತೆ ಹಾಗೂ ನಾಡಿನ ಜನರಿಗೆ ಸಮೃದ್ಧಿ ತರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು. ತಾಯಿ ಕಾವೇರಿ ಮಾತೆ ಇಡೀ ನಾಡಿಗೆ ಒಳಿತು ಮಾಡುವಂತಾಗಲಿ, ಕ್ಷೇತ್ರದ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕೆಂಬುದು ಆಶಯವಾಗಿದೆ. ಆ ನಿಟ್ಟಿನಲ್ಲಿ ಪ್ರಾರ್ಥಿಸಲಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಆಗಿದೆ. ಕಳೆದ 9 ದಶಕದಲ್ಲಿಯೇ ಕೆಆರ್‌ಎಸ್ ಜಲಾಶಯ ಜೂನ್ ತಿಂಗಳಲ್ಲಿ ಭರ್ತಿಯಾಗಿ ಮುಖ್ಯಮಂತ್ರಿ ಅವರು ಬಾಗಿನ ಅರ್ಪಿಸಿದ್ದು ವಿಶೇಷವಾಗಿದೆ ಎಂದರು. ಮುಂಗಾರು ಅಧಿವೇಶನ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಆಗಬೇಕಿರುವ ಕೆಲಸ ಕಾರ್ಯಗಳ ಸಂಬಂಧ ಕಂದಾಯ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕೆಲವು ತಿದ್ದುಪಡಿಗಳು ಆಗಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಗೆಯೇ ವನ್ಯಪ್ರಾಣಿ ಹಾಗೂ ಮಾನವ ಸಂಘರ್ಷ ತಡೆಯುವಲ್ಲಿ ಕೆಲವು ಕ್ರಮ ಕೈಗೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ಚರ್ಚೆಗಳು ನಡೆಯಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಎ.ಎಸ್. ಪೊನ್ನಣ್ಣ ಅವರ ಧರ್ಮಪತ್ನಿ ಕಾಂಚನ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ದೇವಾಲಯ ಸಮಿತಿ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯ ಇತರರು ಇದ್ದರು.