ಉಡುಪಿ: 13ರಂದು ಶಿರೂರು ಮಠದಿಂದ ಕಟ್ಟಿಗೆ ಮುಹೂರ್ತ

KannadaprabhaNewsNetwork |  
Published : Jul 11, 2025, 11:48 PM IST
11ಕಟ್ಟಿಗೆ | Kannada Prabha

ಸಾರಾಂಶ

ಪರ್ಯಾಯೋತ್ಸವಕ್ಕೆ ಮೊದಲು ನಡೆಯುವ 4 ಮುಹೂರ್ತಗಳಲ್ಲಿ ಇದು 3ನೇಯದ್ದು. ಈಗಾಗಲೇ ಬಾಳೆ ಮುಹೂರ್ತ ಮತ್ತು ಅಕ್ಕಿ ಮುಹೂರ್ತಗಳನ್ನು ನಡೆಸಲಾಗಿದೆ. ಈಗ ಕಟ್ಟಿಗೆ ಮುಹೂರ್ತ ನಡೆಯಲಿದ್ದು, ಮುಂದೆ ಭತ್ತದ ಮುಹೂರ್ತ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ2026ರ ಜನವರಿಯಲ್ಲಿ ನಡೆಯಲಿರುವ ಶಿರೂರು ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಕಟ್ಟಿಗೆ ಮುಹೂರ್ತ ಜು.13ರಂದು ಬೆಳಗ್ಗೆ 9.15ಕ್ಕೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಪರ್ಯಾಯ ಸ್ವಾಗತ ಸಮಿತಿಯ ಕಚೇರಿಯ ಉದ್ಘಾಟನೆಯೂ ನಡೆಯಲಿದೆ.ಈ ಬಗ್ಗೆ ಶಿರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ ಮತ್ತು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.

ಪರ್ಯಾಯೋತ್ಸವಕ್ಕೆ ಮೊದಲು ನಡೆಯುವ 4 ಮುಹೂರ್ತಗಳಲ್ಲಿ ಇದು 3ನೇಯದ್ದು. ಈಗಾಗಲೇ ಬಾಳೆ ಮುಹೂರ್ತ ಮತ್ತು ಅಕ್ಕಿ ಮುಹೂರ್ತಗಳನ್ನು ನಡೆಸಲಾಗಿದೆ. ಈಗ ಕಟ್ಟಿಗೆ ಮುಹೂರ್ತ ನಡೆಯಲಿದ್ದು, ಮುಂದೆ ಭತ್ತದ ಮುಹೂರ್ತ ನಡೆಯಲಿದೆ. ಪರ್ಯಾಯದ 2 ವರ್ಷಗಳಲ್ಲಿ ಶ್ರೀಕೃಷ್ಣನಿಗೆ ಅರ್ಪಿಸುವ ನೈವೇದ್ಯವನ್ನು ಸಾಂಪ್ರದಾಯಿಕವಾಗಿ ತಯಾರಿಸಲು ಈ ಕಟ್ಟಿಗೆಗಳನ್ನು ಬಳಸಲಾಗುತ್ತದೆ. ಅದಕ್ಕಾಗಿ ಸುಮಾರು 25 ಲೋಡು ಕಟ್ಟಿಗೆ ಬೇಕಾಗುತ್ತದೆ. ಇದಕ್ಕೆ ಸುಮಾರು 20 ಲಕ್ಷ ರು. ವೆಚ್ಚವಾಗುತ್ತದೆ. ಈ ಕಟ್ಟಿಗೆಗಳನ್ನು ಮಳೆಗಾಳಿ, ಗೆದ್ದಲಿನಿಂದ ಕೆಡದಂತೆ 50 ಅಡಿ ಎತ್ತರ, 25 ಅಡಿ ಅಗಲದ ಬೃಹತ್ ರಥದ ಆಕಾರದಲ್ಲಿ ಸುಂದರವಾಗಿ ಜೋಡಿಸುವುದು ಈ ಸಂಪ್ರದಾಯದ ವಿಶೇಷತೆಯಾಗಿದೆ. ಈ ಕಾರ್ಯಕ್ಕೆ ಚಾಲನೆ ನೀಡುವುದೇ ಕಟ್ಟಿಗೆ ಮುಹೂರ್ತವಾಗಿದೆ.ಸಂಪ್ರದಾಯದಂತೆ ಪರ್ಯಾಯ ಮಠಕ್ಕೆ ಸಂಬಂಧಿಸಿದ ಜಮೀನಿನಲ್ಲಿರುವ ಕಾಡುಗಳಿಂದ ಖಾರ್‌ಮರ (ಕರ್ಮರ)ದ ಕಟ್ಟಿಗೆಗಳನ್ನಷ್ಟೇ 16 ವರ್ಷಕ್ಕೊಮ್ಮೆ ಕಡಿದು ತಂದು ಸಂಗ್ರಹಿಸಲಾಗುತ್ತದೆ. ಶಿರೂರು ಪರ್ಯಾಯೋತ್ಸವದಲ್ಲಿ ಭಕ್ತರೂ ಕೃಷ್ಣನ ಸೇವೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡಬೇಕು ಎಂಬ ಉದ್ದೇಶದಿಂದ ಭಕ್ತರೂ ಕಟ್ಟಿಗೆಗಳನ್ನು ತಂದೊಪ್ಪಿಸುವುದಕ್ಕೆ ಅವಕಾಶ ನೀಡಲಾಗಿದೆ. ಈ ಕಾರ್ಯದಲ್ಲಿ ಭಾಗವಹಿಸಲು ಅವಕಾಶವಾಗದವರು 1 ಸಾವಿರ ರು. ಕೊಟ್ಟು 1 ಹೊರೆ ಕಟ್ಟಿಗೆಯ ಸೇವೆಯನ್ನು ನೀಡಬಹುದಾಗಿದೆ ಎಂದರು.ವಿಶೇಷ ಎಂದರೆ ಈ ಕಟ್ಟಿಗೆಗಳನ್ನು ನಗರದ ಕಲ್ಸಂಕದಲ್ಲಿರುವ ಲಕ್ಷ್ಮೀ ತೋಟದಿಂದ ರಥಬೀದಿಗೆ ಎತ್ತಿನ ಗಾಡಿಗಳಲ್ಲಿ ಮೆರವಣಿಗೆಯಲ್ಲಿ ತಂದು ಪೂಜೆ, ಸಂಪ್ರದಾಯಗಳನ್ನು ನಡೆಸಿ, ಮಧ್ವಸರೋವರದ ಪಕ್ಕದ ನಿಗದಿತ ಸ್ಥಳದಲ್ಲಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.ಈ ಕಟ್ಟಿಗೆ ಮುಹೂರ್ತದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಇತರ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು, ಸ್ಥಳೀಯ ಜನಪ್ರತಿನಿಧಿಗಳು, ವಿದ್ವಾಂಸರು ಭಾಗವಹಿಸಲಿದ್ದಾರೆ. ನಂತರ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಎಂದು ಸರಳತ್ತಾಯರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಭಟ್, ವಾಸುದೇವ ಆಚಾರ್ಯ, ನಂದನ್ ಜೈನ್ ಉಪಸ್ಥಿತರಿದ್ದರು.

PREV