ಹುಬ್ಬಳ್ಳಿ: ಸಿಎಂ ಬದಲಾವಣೆ ಕುರಿತು ಸಿಎಂ ಮತ್ತು ಡಿಸಿಎಂ ಇಬ್ಬರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆ ಅಪ್ರಸ್ತುತವಾಗಿದೆ ಎಂದು ಎಪಿಎಂಸಿ ಹಾಗೂ ಕೈಮಗ್ಗ ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದರು.ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಸಿಎಂ ಬದಲಾವಣೆ ವಿಚಾರ ಮಾಧ್ಯಮವೇ ಚರ್ಚೆಗೆ ತಂದಿದ್ದು. ಅದಕ್ಕೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಂತೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಡಿಸಿಎಂ ಶಿವಕುಮಾರ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂಬ ಸಿಎಂ ಹೇಳಿಕೆ ಕುರಿತು ನನಗೆ ಮಾಹಿತಿ ಇಲ್ಲ. ಸಿಎಂ ಏನಾದರೂ ಹೇಳಿದರೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ಸಿಎಂ ಮತ್ತು ಡಿಸಿಎಂ ಶೀಘ್ರದಲ್ಲೇ ತಮ್ಮ ತಮ್ಮ ಜಿಲ್ಲೆಗಳಿಗೆ ಭೇಟಿ ನೀಡಿ, ಹಲವು ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದೂ ತಿಳಿಸಿದರು.ಇತ್ತೀಚೆಗೆ ಸಚಿವ ಮಹೇದೇವಪ್ಪ ನಿವಾಸಕ್ಕೆ ಸಚಿವ ಸತೀಶ್ ಜಾರಕಿಹೂಳಿ ಭೇಟಿ ನೀಡಿದ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ ಅವರು, ಭೇಟಿಯಾದದ್ದು ಮತ್ತು ಅವರು ಯಾವ ಕುರಿತಂತೆ ಚರ್ಚೆ ಮಾಡಿದ್ದಾರೆ ಎನ್ನುವ ಕುರಿತಂತೆ ಅವರೇ ಪ್ರತಿಕ್ರಿಯೆ ನೀಡಬೇಕು. ಈ ಕುರಿತಂತೆ ನಾನು ಮಾತನಾಡುವುದಿಲ್ಲ ಎಂದರು.
ಇನ್ನು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರ ಅಹವಾಲು ಆಲಿಸಿದ್ದಾರೆ. ಬಹುತೇಕ ಶಾಸಕರು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ, ಸಚಿವರ ಬಗ್ಗೆ ನೇರವಾಗಿ ಯಾವುದೇ ರೀತಿಯ ದೂರು ನೀಡಿಲ್ಲ. ಕೆಲ ಶಾಸಕರು ಮಾತ್ರ ಕೆಲವು ಸಚಿವರ ಕುರಿತು ದೂರು ನೀಡಿದ್ದಾರೆ. ಆದರೆ, ಇದುವರೆಗೆ ಸುರ್ಜೇವಾಲಾ ಯಾರನ್ನೂ ಚರ್ಚೆಗೆ ಕರೆದಿಲ್ಲ. ಮುಂದಿನ ದಿನಗಳಲ್ಲಿ ಅವರು ಮತ್ತೊಮ್ಮೆ ಶಾಸಕರನ್ನು ಕರೆದು ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದರು.