ಕಾರಟಗಿ:
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ ಗುರುವಾರ ದಿಢೀರ್‌ನೆ ಭೇಟಿ ಪರಿಶೀಲಿಸಿದರು.ಇಲ್ಲಿನ ೨೦ನೇ ವಾರ್ಡ್‌ನಲ್ಲಿ ೧೫ನೇ ಹಣಕಾಸು ಯೋಜನೆಯಡಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣ, ಬಸ್ ನಿಲ್ದಾಣದ ಎದುರಗಡೆಯ ಹಳೆ ಸರ್ಕಾರಿ ಆಸ್ಪತ್ರೆ ಜಾಗೆಯ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ವೀಕ್ಷಿಸಿ ಬಾಕಿ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಸಂತೆ ಮಾರುಕಟ್ಟೆಯಲ್ಲಿ ನಗರೋತ್ಥಾನ ೪ನೇ ಹಂತದ ಯೋಜನೆಯಡಿ ಸಂತೆ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆ ವೀಕ್ಷಿಸಿದರು. ಕೊನೆಗೆ ವಿಶೇಷ ಎಪಿಎಂಸಿ ಯಾರ್ಡ್‌ನ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಆಡಳಿತ ಕಚೇರಿಯ ಸಮಸ್ಯೆ, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ ಸಿಬ್ಬಂದಿಗಳಿಂದ ಕಡತಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದರು.ಬೆಳೆ ಪರಿಹಾರ:
ಮುಂಗಾರು ಪೂರ್ವ ಆಲಿಕಲ್ಲು ಮಳೆಯಿಂದ ನಾಶವಾದ ಭತ್ತದ ಬೆಳೆಗೆ ಈ ವರೆಗೂ ಪರಿಹಾರ ನೀಡಿಲ್ಲವೆಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಪರಿಹಾರ ನೀಡಲು ಅನುಮೋದನೆಯಾಗಿದೆ. ಮ್ಯಾಫಿಂಗ್ ಎರರ್‌ನಂತಹ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಶೀಘ್ರದಲ್ಲಿಯೇ ಪರಿಹಾರದ ಹಣ ರೈತರ ಖಾತೆಗಳಿಗೆ ಜಮೆಯಾಗಲಿದೆ ಎಂದರು.ಪುರಸಭೆ ನಿರ್ಮಿಸಿದ ವಾಣಿಜ್ಯ ಸಂಕೀರ್ಣದ ಮಳಿಗೆಗೆ ಬಾಡಿಗೆಗೆ ಯಾರೂ ಬರುತ್ತಿಲ್ಲ ಎನ್ನುವ ಪ್ರಶ್ನೆಗೆ, ಈಗಾಗಲೇ ಮೂರು ಬಾರಿ ಹರಾಜು ಪ್ರತಿಕ್ರಿಯೆ ನಡೆಸಿದರೂ ಯಾರು ಬಂದಿಲ್ಲ. ಕೊನೆಗೆ ಶೇ. ೨೫ರಷ್ಟು ಬೇಸ್ ರೇಟ್ ಕಡಿಮೆ ಮಾಡಿ ಟೆಂಡರ್ ಕರೆದರೂ ಆಸಕ್ತಿ ತೋರಿಸಿಲ್ಲ. ಸರ್ಕಾರಕ್ಕೆ ಪತ್ರ ಬರೆದು ದರ ಕಡಿಮೆ ಮಾಡಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಹರಾಜು ಕರೆಯುವುದಾಗಿ ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ, ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಮುಖಂಡ ರಾಜಶೇಖರ ಆನೆಹೊಸೂರು, ಸದಸ್ಯರಾದ ಕೆ.ಎಚ್. ಸಂಗನಗೌಡ, ಮಂಜುನಾಥ ಮೇಗೂರು, ದೊಡ್ಡಬಸವರಾಜ ಬೂದಿ, ಎಂಜಿನಿಯರ್ ಮಂಜುನಾಥ್ ನಾಯಕ ಸೇರಿದಂತೆ ಇನ್ನಿತರರು ಇದ್ದರು.