ಶಿರಹಟ್ಟಿ: ಗುರು-ಶಿಷ್ಯರ ಪವಿತ್ರ ಸಂಬಂಧ ಸಮಾಜದಲ್ಲಿ ಅತಿ ಮುಖ್ಯವಾಗಿದೆ. ಇದರಿಂದ ಸುಂದರ ಸಾಮಾಜಿಕ ಸಂಸ್ಕೃತಿ ಕಂಡುಕೊಳ್ಳಲು ಸಾಧ್ಯವಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಟಿ. ಬಿಜ್ಜೂರ ಹೇಳಿದರು.
ಜಗತ್ತಿನಲ್ಲಿ ಗುರುವಿಗೆ ದೊಡ್ಡ ಸ್ಥಾನ ನೀಡಿದ ಏಕೈಕ ದೇಶ ಎಂದರೆ ಭಾರತ. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಸಿಗದ ಗೌರವ, ಮರ್ಯಾದೆ ಶಿಕ್ಷಣ ಇಲಾಖೆಯಲ್ಲಿ ಸಿಗುತ್ತದೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ವಿಜಯಕುಮಾರ ಹಡಗಲಿ, ವಿಶ್ವೇಶ್ವರಯ್ಯ ಹಿರೇಮಠ ಮಾತನಾಡಿ, ಬದುಕಿನಲ್ಲಿ ಯಾವುದೇ ಸಾಧನೆಯ ಹಿಂದೆ ಗುರುಗಳ ಮಾರ್ಗದರ್ಶನ ಜೀವನದುದ್ದಕ್ಕೂ ಅಗತ್ಯ. ಅದರಲ್ಲಿಯೂ ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನಂತೂ ಮರೆಯಲು ಅಸಾಧ್ಯ. ಗುರು-ಗುರಿ ಇಲ್ಲದಿದ್ದರೆ ಜೀವನ ಸಾರ್ಥಕ ದಡ ಮುಟ್ಟುವುದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.ನಿವೃತ್ತ ಶಿಕ್ಷಕ ಬಿ.ಎಂ. ಯರಕದ, ಕೆ. ಪತ್ರಯ್ಯ, ಮುಳಗುಂದ ಹಾಗೂ ಅಂದಿನ ವಿದ್ಯಾರ್ಥಿಗಳಾದ ಲೀಲಾ ವಿಭೂತಿ, ವಿಷ್ಣು ಮಾಂಡ್ರೆ, ಸುರೇಶ ಕೊಕ್ಕರಗುಂದಿ, ವಿ.ಆರ್. ಹಿರೇಮಠ, ನಿಂಗಪ್ಪ ಶಾಗೋಟಿ, ಡಾ. ಅನಂತ ರೆಡ್ಡರ, ಇಂದಿರಾ ಅಳವಂಡಿ, ನೀಲಕಂಠ ತುರಕಾಣಿ, ಲಕ್ಷ್ಮೀ ಮೇಟಿ, ಪುಷ್ಪಾ ಶಿವಶಂಪಿ ಇದ್ದರು.