ಗ್ರಾಮದಲ್ಲಿ ಶಾಲೆ ಇದ್ದರೆ ದೇವಸ್ಥಾನ ಇದ್ದಂತೆ: ಬಿ.ಕೆ.ನಾರಾಯಣಸ್ವಾಮಿ

KannadaprabhaNewsNetwork | Published : Nov 6, 2024 11:47 PM

ಸಾರಾಂಶ

ನರಸಿಂಹರಾಜಪುರ, ಗ್ರಾಮದಲ್ಲಿ ಶಾಲೆ ಇದ್ದರೆ ದೇವಸ್ಥಾನ ಇದ್ದಂತೆ. ಶಾಲೆಯ ಅಭಿವೃದ್ಧಿಗೆ ದಾನಿಗಳು ಕೈಜೋಡಿಸಬೇಕು ಎಂದು ದಾನಿ ಬಾಳೆ ಹಿತ್ತಲು ನಾರಾಯಣಸ್ವಾಮಿ ಕರೆ ನೀಡಿದರು.

ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಗ್ರಾಮದಲ್ಲಿ ಶಾಲೆ ಇದ್ದರೆ ದೇವಸ್ಥಾನ ಇದ್ದಂತೆ. ಶಾಲೆಯ ಅಭಿವೃದ್ಧಿಗೆ ದಾನಿಗಳು ಕೈಜೋಡಿಸಬೇಕು ಎಂದು ದಾನಿ ಬಾಳೆ ಹಿತ್ತಲು ನಾರಾಯಣಸ್ವಾಮಿ ಕರೆ ನೀಡಿದರು.

ಮಂಗಳವಾರ ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕದಕುಣಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಬಹಳ ‍ವರ್ಷಗಳ ಹಿಂದೆ ಕಾನೂರು ಸರ್ಕಾರಿ ಶಾಲೆಗೆ 1 ರಿಂದ 7 ನೇ ತರಗತಿ ಮಕ್ಕಳು ಇದ್ದರೂ ಒಬ್ಬರೇ ಶಿಕ್ಷಕರಿದ್ದರು. ಈಗ ಸರ್ಕಾರ ಶಿಕ್ಷಕರನ್ನು ನೀಡಿದೆ. ಮೂಲಭೂತ ಸೌಕರ್ಯ ನೀಡಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕು. ಸರ್ಕಾರಿ ಶಾಲೆ ಮುಚ್ಚಲು ಬಿಡಬಾರದು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಕಾನೂರು ಗ್ರಾಪಂ ಉಪಾಧ್ಯಕ್ಷೆ ಮೋಹಿನಿ ಮಾತನಾಡಿ, ಮಕ್ಕಳ ಪ್ರತಿಭಾ ಕಾರಂಜಿ ವಲಯ, ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ನಡೆಯುತ್ತಿದೆ. ಮಕ್ಕಳ ಪ್ರತಿಭೆ ಹೊರ ಹಾಕಲು ಸೂಕ್ತ ವೇದಿಕೆ ಸಿಕ್ಕುತ್ತಿದೆ. ಮಕ್ಕಳು ಬೆಳೆವಣಿಗೆ ಹೊಂದಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅಗತ್ಯವಾಗಿದೆ. ಮಕ್ಕಳಿಗೆ ಈಗ ಸೂಕ್ತ ಅವಕಾಶ ಸಿಕ್ಕುತ್ತಿದ್ದು ಅದನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಗೋವಿಂದೇಗೌಡ ಬಾಲ ಪುರಸ್ಕಾರ ಸಮಿತಿ ಅಧ್ಯಕ್ಷ ರಾಜಶೇಖರ ಮಾತನಾಡಿ, ಮಾಜಿ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡರು ಇದೇ ಗ್ರಾಮದವರು ಹಾಗೂ ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ದೇವರಾಜ ಅರಸು ಪ್ರಶಸ್ತಿ ಪಡೆದಿದ್ದ ಗೋವಿಂದೇಗೌಡರು ಅದರ ಜೊತೆ ಬಂದ ₹1 ಲಕ್ಷ ವನ್ನು ಇದೇ ಶಾಲೆಗೆ ದಾನವಾಗಿ ನೀಡಿದ್ದರು ಎಂದು ಸ್ಮರಿಸಿದರು.

ಶಿಕ್ಷಣ ಸಂಯೋಜಕ ರಂಗಪ್ಪ ಮಾತನಾಡಿ, ಸಂಕದ ಕುಣಿ ಕ್ಲಸ್ಟರ್‌ ನ 11 ಶಾಲೆಗಳ ಮಕ್ಕಳು ಇಂದು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುತ್ತಿದ್ದಾರೆ. ಹಿರಿ- ಕಿರಿಯ ಪ್ರಾಥಮಿಕ ವಿಭಾಗ ಎಂದು ಎರಡು ಹಂತಗಳಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. ಪ್ರಥಮ ಸ್ಥಾನ ಬಂದ ಮಕ್ಕಳು ಮಾತ್ರ ತಾಲೂಕು ಮಟ್ಟದಲ್ಲಿ ಭಾಗಹಿಸಬಹುದು ಎಂದರು.

ಸಭೆ ಅಧ್ಯಕ್ಷತೆಯನ್ನು ಶಾಲೆ ಎಸ್‌.ಡಿ.ಎಂ.ಸಿ.ಅಧ್ಯಕ್ಷ ಚಂದ್ರಶೇಖರ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ರತ್ನಾಕರ್‌, ಸದಸ್ಯರಾದ ಸುಮಲತ, ನಯನ, ವಿಜಯಕುಮಾರ್, ಸವಿತ, ಎಸ್‌.ಡಿ.ಎಂ.ಸಿ. ಉಪಾಧ್ಯಕ್ಷೆ ಸುನೀತ, ಪಿಡಿಒ ಶ್ರೀನಿವಾಸ್‌, ಶಿಕ್ಷಣ ಸಂಯೋಜಕಿ ಸಂಗೀತ, ಸರ್ಕಾರಿ ನೌಕರರ ಸಂಘದ ಸದಸ್ಯ ರಾಜಾನಾಯ್ಕ, ಪ್ರಾ.ಶಾ.ಶಿ. ಸಂಘದ ಆರ್‌.ನಾಗರಾಜ್‌, ಸಿಆರ್‌ಪಿ ಗಳಾದ ಓಂಕಾರಪ್ಪ, ಮಂಜುಶ್ರೀ, ದೇವರಾಜ್‌, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ, ಗ್ರಾಮದ ಮುಖಂಡರಾದ ರಮೇಶ್, ರಾಮಪ್ಪಪೂಜಾರಿ ಇದ್ದರು.

ದಾನಿಗಳಾದ ಬಿ.ಕೆ.ನಾರಾಯಣಸ್ವಾಮಿ, ಹೊಳೆಕೊಪ್ಪ ರಾಮಸ್ವಾಮಿ, ಕಾನೂರು ಶೈಲಾ ಅವರನ್ನು ಸನ್ಮಾನಿಸಲಾಯಿತು. ಶಿವರಾಜಕುಮಾರ್, ಪ್ರದೀಪ್ , ನಂತರ 11 ಶಾಲೆಯ ಮಕ್ಕಳಿಂದ ವಿವಿಧ ಸ್ಪರ್ಧೆಗಳು ನಡೆಯಿತು.

Share this article