ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶಾಸಕ ರಮೇಶ್ ಬಂಡಿಸಿದ್ದೇಗೌಡರನ್ನು ಕಾಂಗ್ರೆಸ್‌ನ ಕಾರ್ಯಕರ್ತನೊಬ್ಬ ತರಾಟೆಗೆ ತೆಗೆದುಕೊಂಡು ಏರುಧ್ವನಿಯಲ್ಲಿ ಮಾತನ್ನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.ತಾಲೂಕಿನ ಕಪರನಕೊಪ್ಪಲು ಗ್ರಾಮದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಬಂದಿದ್ದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಗ್ರಾಮದ ಸ್ವಪಕ್ಷದ ಹನುಮಂತು ಅವರು ಅಡ್ಡಗಟ್ಟಿ ಏರು ದನಿಯಲ್ಲಿಯೇ ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾವು ಕಾಂಗ್ರೆಸ್‌ಗೆ ಬಂದ ವೇಳೆ ನನಗೆ ಕರೆ ಮಾಡಿ ಕಾಂಗ್ರೆಸ್‌ನಲ್ಲೇ ಉಳಿದುಕೊಳ್ಳುವಂತೆ ಹೇಳಿದ್ದೀರಿ. ನಿಮ್ಮ ಮಾತಿನಂತೆ ಉಳಿದುಕೊಂಡಿದ್ದೇನೆ. ಆದರೆ, ಹತ್ತು ಬಾರಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ ಏಕೆ. ಗೆದ್ದಾಗ ಬೇಕಿತ್ತು. ಈಗ ನಾವು ಬೇಡವಾ ಎಂದು ಪ್ರಶ್ನೆ ಮಾಡಿದ್ದಾನೆ.ನೀವು ಕಾಂಗ್ರೆಸ್‌ನಲ್ಲೇ ಉಳಿಯುವಂತೆ ಹೇಳಿದಕ್ಕೆ ಆ ಪಕ್ಷದಲ್ಲೇ ಇದ್ದೇನೆ. ಇಲ್ಲದಿದ್ದರೆ ನಾನು ಬೇರೆ ಪಕ್ಷಕ್ಕೆ ಹೋಗುತ್ತಿದ್ದೆ. ನಿಮಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಇದೀಗ ನಮ್ಮ ಗ್ರಾಮಕ್ಕೆ ಆಗಮಿಸಿದ್ದೀರಿ. ನಮಗೆ ಯಾವುದೇ ಮಾಹಿತಿಯೇ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಶಾಸಕ ರಮೇಶ್ ಬಂಡಿಸಿದ್ದೇಗೌಡರು ಹನುಮಂತನ್ನು ಸಮಾಧಾನ ಪಡಿಸಿ ಸೋಮಣ್ಣ ಅವರಿಗೆ ತಿಳಿಸುವಂತೆ ಹೇಳಿದ್ದೇನೆ ಎಂದು ಹೇಳಲು ಮುಂದಾಗುತ್ತಿದ್ದಂತೆ ಮತ್ತೆ ಕೋಪಗೊಂಡ ಹನುಮಂತು, ಸೊಮಣ್ಣ ಯಾರವನು, ಅವನ್ಯಾರೊ ನನಗೆ ಗೊತ್ತಿಲ್ಲ. ನಾನು ಕರೆ ಮಾಡಿದರೆ ಯಾಕೆ ಸ್ವೀಕರಿ ಮಾತನಾಡುವುದಿಲ್ಲ ಎಂದು ಏರು ಧ್ವನಿಯಲ್ಲೇ ಮರು ಪ್ರಶ್ನೆ ಹಾಕಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತು ನೋಡುವಂತಾಯಿತು.ನಂತರ ಕಾರ್ಯಕರ್ತರು ಹಾಗೂ ಶಾಸಕರ ಹಿಂಬಾಲಕರು ಹನುಮಂತು ಅವರೊಂದಿಗೆ ವಾಗ್ವಾದಕ್ಕಿಳಿಯುತ್ತಿದ್ದಂತೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ತಮ್ಮ ಹಿಂಬಾಲಕರು ಹಾಗೂ ಕಾರ್ಯಕರ್ತ ಹನುಮಂತುರನ್ನು ಸಮಾಧಾನ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಾಂಗ್ರೆಸ್‌ನ್ನು ಮುಜುಗರಕ್ಕೀಡು ಮಾಡಿದೆ.
ಇಂದು ಪ್ರಸನ್ನ ವೀರಾಂಜನೇಯಸ್ವಾಮಿ ದೇಗುಲ ಜೀರ್ಣೋದ್ಧಾರಮಂಡ್ಯ: ನಗರದ ಚಿಕ್ಕಮಂಡ್ಯದಲ್ಲಿ ಆ.11ರಂದು ನೂತನವಾಗಿ ನಿರ್ಮಿಸಿರುವ ಶ್ರೀಪ್ರಸನ್ನ ವೀರಾಂಜನೇಯಸ್ವಾಮಿ ನೂತನ ದೇವಾಲಯದ ಜೀರ್ಣೋದ್ಧಾರ ಹಾಗೂ ಆಂಜನೇಯಸ್ವಾಮಿಯ ವಿಗ್ರಹ ಪ್ರತಿಷ್ಠಾನಾ ಸಮಾರಂಭ ಆಯೋಜಿಸಲಾಗಿದೆ.
ದೇವಾಲಯದ ಉದ್ಘಾಟನೆ ಅಂಗವಾಗಿ ಭಾನುವಾರ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಸಂಜೆ ಶ್ರೀಗಣಪತಿ ಪ್ರಾರ್ಥನೆ, ಗಂಗಾಪೂಜೆ, ತೀರ್ಥ ಸಂಗ್ರಹಣ, ಯಾಗಶಾಲಾ ಪ್ರವೇಶ, ಶ್ರೀ ಮಹಾಗಣಪತಿ ಪೂಜೆ, ಮಹಾಸಂಕಲ್ಪ ಪುಣ್ಯಾಹ, ವಾಸ್ತು ರಕ್ಷೋಘ್ನ ಪೂಜೆ, ಶ್ರೀಮಹಾಗಣಪತಿ ಹೋಮ, ಶ್ರೀಮಹಾಸುದರ್ಶನ ಹೋಮ, ಶ್ರೀದುರ್ಗಾ ಹೋಮಗಳೊಂದಿಗೆ ಪೂರ್ಣಾಹುತಿ ವಿಜೃಂಭಣೆಯಿಂದ ಜರುಗಿತು.ಆ.11ರಂದು ಸೋಮವಾರ ಬೆಳಗ್ಗೆ 5 ಗಂಟೆಗೆ ಸುಪ್ರಭಾತ ಸೇವೆ, ಮಹಾಗಣಪತಿ ಪೂಜೆ, ವೇದಪಾರಾಯಣ, ಶ್ರೀಆಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠೆ ಜರುಗಲಿವೆ. 11 ಗಂಟೆಗೆ ತುಲಾ ಲಗ್ನದಲ್ಲಿ ಮಹಾ ಪೂರ್ಣಾಹುತಿ, ಕಳಸಗಳ ಮಂಗಳಾರತಿ, ಕುಂಬೋದ್ವಾಸನೆ, ಶ್ರೀಸ್ವಾಮಿಯವರಿಗೆ ಕುಂಭಾಭಿಷೇಕ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ.
ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧಿಕಾರಿ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆ ವಹಿಸುವರು. ಶಾಸಕ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್), ಮನ್ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್, ಹಳ್ಳಿಕೇಶ್ವರ ಬೋರೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ, ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಹಳ್ಳಿಕೇಶ್ವರ ಬೋರೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಡಾ.ವೆಂಕಟೇಶ್ ಮತ್ತಿತರರು ಭಾಗವಹಿಸಲಿದ್ದಾರೆ.