ಸ್ಮಶಾನ ಭೂಮಿಗೆ ಆಗ್ರಹ: ಗೆಜ್ಜಲೆಗೆರೆ ಕಾಲೋನಿ ನಿವಾಸಿಗಳಿಂದ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

KannadaprabhaNewsNetwork |  
Published : Aug 11, 2025, 12:30 AM IST
10ಕೆಎಂಎನ್ ಡಿ13 | Kannada Prabha

ಸಾರಾಂಶ

ಸ್ಮಶಾನ ಭೂಮಿಗಾಗಿ ಆಗ್ರಹಿಸಿ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿ ನಿವಾಸಿಗಳು ತಾಲೂಕು ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು. ಮಳೆ ನಡುವೆಯೂ ಗ್ರಾಮಸ್ಥರು ಶವವನ್ನು ತಾಲೂಕು ಕಚೇರಿಗೆ ತಂದು ಧರಣಿ ನಡೆಸಲು ಮುಂದಾದರು. ಈ ವೇಳೆ ಎಚ್ಚೆತ್ತ ಅಧಿಕಾರಿಗಳು ಕಚೇರಿ ಪ್ರವೇಶ ದ್ವಾರದ ಎಲ್ಲಾ ಗೇಟ್ ಬಂದ್ ಮಾಡಿ ನಿರ್ಬಂಧಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಸ್ಮಶಾನ ಭೂಮಿಗಾಗಿ ಆಗ್ರಹಿಸಿ ತಾಲೂಕಿನ ಗೆಜ್ಜಲಗೆರೆ ಕಾಲೋನಿ ನಿವಾಸಿಗಳು ತಾಲೂಕು ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಮಳೆ ನಡುವೆಯೂ ಗ್ರಾಮಸ್ಥರು ಶವವನ್ನು ತಾಲೂಕು ಕಚೇರಿಗೆ ತಂದು ಧರಣಿ ನಡೆಸಲು ಮುಂದಾದರು. ಈ ವೇಳೆ ಎಚ್ಚೆತ್ತ ಅಧಿಕಾರಿಗಳು ಕಚೇರಿ ಪ್ರವೇಶ ದ್ವಾರದ ಎಲ್ಲಾ ಗೇಟ್ ಬಂದ್ ಮಾಡಿ ನಿರ್ಬಂಧ ವಿದಿಸಿದರು.

ಈ ವೇಳೆ ಪ್ರತಿಭಟನಾಕಾರರು ಕಚೇರಿ ಮುಂಭಾಗದ ಬೆಂಗಳೂರು- ಮೈಸೂರು ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿ ಇಲ್ಲೇ ಶವವನ್ನು ಅಂತ್ಯಸಂಸ್ಕಾರ ಮಾಡುವುದಾಗಿ ಎಚ್ಚರಿಸಿದರು.

ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತೀಗೇರಿ ನಡುವೆ ಪ್ರತಿಭಟನಾಕಾರರ ಮಾತಿನ ಚಕಮಕಿ ನಡೆಸಿದರು. ನಂತರ ಮಧ್ಯ ಪ್ರವೇಶ ಮಾಡಿದ ಪೊಲೀಸರು ಸಮಾಧಾನ ಪಡಿಸಿದರು.

ಕಾಲೋನಿಯ ರಾಜು (45) ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಮೃತರ ಅಂತ್ಯ ಸಂಸ್ಕಾರ ನಡೆಸಲು ತೀರ್ಮಾನಿಸಿ ಗ್ರಾಮದ ಗೋಮಾಳದ ಸರ್ವೇ ನಂ.203ರಲ್ಲಿ ಗ್ರಾಮಸ್ಥರು ಸಿದ್ಧತೆ ನಡೆಸಿದ್ದರು. ಆದರೆ, ಸರ್ವೇ ನಂ 203ರ 2.30 ಗುಂಟೆ ಗೋಮಾಳದ ಜಾಗವನ್ನು ಪುಟ್ಟತಾಯಮ್ಮರಿಗೆ ಸರ್ಕಾರ ಮಂಜೂರು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಹಾಲಿ ಜಮೀನಿನ ಮಾಲೀಕ ನಾಗರಾಜ್ ತಡೆ ಮಾಡಿದ್ದರು. ಹೀಗಾಗಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ್ದರಿಂದ ಶವವನ್ನು ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ರಾತ್ರಿ 8 ಗಂಟೆ ವೇಳೆಗೆ ತಾಲೂಕು ಕಚೇರಿ ಎದುರಿಗೆ ತಂದು ಪ್ರತಿಭಟನೆ ಮಾಡಿದರು.

ಗ್ರಾಮದ ಮುಖಂಡರು ಮಾತನಾಡಿ, ನಮ್ಮ ಪೂರ್ವಜರ ಕಾಲದಿಂದಲೂ ನಾವು ಸರ್ವೇ ನಂ 203ರ ಗೋಮಾಳದ ಜಾಗದಲ್ಲಿ ಶವ ಸಂಸ್ಕಾರದ ಪ್ರಕ್ರಿಯೆ ನಡೆಸುತ್ತಿದ್ದೇವೆ. ಆದರೆ, ಈಗ ನಾಗರಾಜ್ ಎನ್ನುವ ವ್ಯಕ್ತಿ ಈ ಜಮೀನನ್ನು ಸರ್ಕಾರ ನಮಗೆ ಮಂಜೂರು ಮಾಡಿಕೊಟ್ಟಿದೆ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು.

ನಾವು ಈ ಜಮೀನು ಬಿಟ್ಟು ಬೇರೆ ಕಡೆ ಅಂತ್ಯ ಸಂಸ್ಕಾರ ಮಾಡುವುದಿಲ್ಲ. ಹೀಗಾಗಿ ತಾಲೂಕು ಆಡಳಿತ ನಮಗೆ ಸ್ಮಶಾನ ಭೂಮಿ ನೀಡಬೇಕು. ಇಲ್ಲದಿದ್ದರೆ ಇಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.

ನಂತರ ಎಸಿ ಶಿವಮೂರ್ತಿ, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರು ಗ್ರಾಮಸ್ಥರ ಮನವಿ ಆಲಿಸಿ ಈಗಾಗಲೇ ಈ ಜಮೀನು ವಿಚಾರವಾಗಿ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ತೀರ್ಪು ನೀಡಲಾಗಿದೆ. ಆದರೆ, ನಾಗರಾಜ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಯುತ್ತಿರುವುದರಿಂದ ತೀರ್ಪು ಬರುವವರೆಗೂ ನಾವು ಯಾವುದೇ ತೀರ್ಮಾನ ಕೈಗೊಳ್ಳಲಾಗುವುದಿಲ್ಲ. ಯಾರ ಪರ ತೀರ್ಪು ಬರುತ್ತದೆಯೋ ಅವರಿಗೆ ಜಮೀನು ಹಸ್ತಾಂತರ ಮಾಡಲಾಗುವುದು ಎಂದು ಗ್ರಾಮಸ್ಥರನ್ನು ಮನವೊಲಿಸಿದ ಬಳಿಕ ಗ್ರಾಮಸ್ಥರು ಶವವನ್ನು ಗೆಜ್ಜಲಗೆರೆ ಬಳಿಯ ವಿ.ಸಿ.ಕಾಲುವೆ ದಡದಲ್ಲಿ ರಾತ್ರಿ 11 ಗಂಟೆ ವೇಳೆಗೆ ಅಂತ್ಯ ಸಂಸ್ಕಾರ ನಡೆಸಿದರು.

ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಗ್ರಾಮಾಂತರ ಇನ್ಸ್ ಪೆಕ್ಟರ್ ವೆಂಕಟೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ