ಚುನಾವಣಾ ಉದ್ದೇಶಗಳಿಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ

KannadaprabhaNewsNetwork |  
Published : Feb 17, 2024, 01:18 AM IST
16ಸಿಎಚ್‌ಎನ್‌58ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಕೊಠಡಿಯಲ್ಲಿ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ನಿರೀಕ್ಷಿತ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಖರ್ಚನ್ನು ನಿರ್ವಹಿಸಲು ಪ್ರತ್ಯೇಕವಾಗಿ ಉಳಿತಾಯ ಖಾತೆ ತೆರೆಯುವ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್‌ ಅವರು ಸಭೆಯನ್ನು ನಡೆಸಿದರು. | Kannada Prabha

ಸಾರಾಂಶ

ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷಿತ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಖರ್ಚನ್ನು ನಿರ್ವಹಿಸಲು ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಉಳಿತಾಯ ಖಾತೆಯನ್ನು ತೆರೆಯುವಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಗೀತಾ ಹುಡೇದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಚುನಾವಣೆಗೆ ಸ್ಪರ್ಧಿಸುವ ನಿರೀಕ್ಷಿತ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಖರ್ಚನ್ನು ನಿರ್ವಹಿಸಲು ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಉಳಿತಾಯ ಖಾತೆಯನ್ನು ತೆರೆಯುವಂತೆ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಗೀತಾ ಹುಡೇದ ತಿಳಿಸಿದರು.

ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಕೊಠಡಿಯಲ್ಲಿ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಅಂಗವಾಗಿ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ನಿರೀಕ್ಷಿತ ಅಭ್ಯರ್ಥಿಗಳು ಚುನಾವಣಾ ವೆಚ್ಚದ ಖರ್ಚನ್ನು ನಿರ್ವಹಿಸಲು ಪ್ರತ್ಯೇಕವಾಗಿ ಉಳಿತಾಯ ಖಾತೆ ತೆರೆಯುವ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಪ್ರಚಾರದ ವೇಳೆ ಅಧಿಕ ಹಣ ಖರ್ಚು ಮಾಡುತ್ತಿರುವುದರಿಂದ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶಗಳು ದೊರೆಯದೆ ಅಸಮತೋಲನವುಂಟಾಗುತ್ತಿದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಚುನಾವಣೆಗೆ ವ್ಯಯಿಸುವ ದೈನಂದಿನ ಖರ್ಚು-ವೆಚ್ಚದ ನಿಖರ ಲೆಕ್ಕ ದೊರೆಯಲು ಹಾಗೂ ಚುನಾವಣೆಯ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಭಾರತ ಚುನಾವಣಾ ಆಯೋಗವು ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಲು ಸೂಚನೆ ನೀಡಿದೆ. ಇದರಿಂದ ಅಭ್ಯರ್ಥಿಗಳ ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಲು ಅನುಕೂಲವಾಗಲಿದೆ. ಸಂವಿಧಾನದ 324ನೇ ವಿಧಿಯಲ್ಲಿ ಈ ಬಗ್ಗೆ ನಿರ್ದೇಶನವಿದೆ ಎಂದರು. ಅಭ್ಯರ್ಥಿಯು ಚುನಾವಣಾ ಉದ್ದೇಶಗಳಿಗಾಗಿ ತೆರೆಯುವ ಖಾತೆಯನ್ನು ಯಾವಾಗಲಾದರೂ ಅಂದರೆ ಕನಿಷ್ಟ ಪಕ್ಷ ನಾಮಪತ್ರ ಸಲ್ಲಿಸುವ ದಿನಕ್ಕೆ ಒಂದು ದಿನ ಮೊದಲೇ ತೆರೆಯಬೇಕು. ಈ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಅಭ್ಯರ್ಥಿಯು ತಮ್ಮ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲಿಖಿತವಾಗಿ ನೀಡಬೇಕು. ಯಾವುದೇ ಅಭ್ಯರ್ಥಿಯು ಬ್ಯಾಂಕ್ ಖಾತೆಯನ್ನು ತೆರೆಯದಿದ್ದಲ್ಲಿ ಅಥವಾ ಖಾತೆಯ ಮಾಹಿತಿ ನೀಡದಿದ್ದಲ್ಲಿ ಚುನಾವಣಾಧಿಕಾರಿಗಳಿಂದ ಅಂತಹ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ಸೂಚನೆಗಳನ್ನು ಪಾಲಿಸುವಂತೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದರು. ಅಭ್ಯರ್ಥಿ ಬ್ಯಾಂಕ್ ಖಾತೆಯನ್ನು ತನ್ನ ಹೆಸರಿನಲ್ಲಿ ಅಥವಾ ತಮ್ಮ ಚುನಾವಣಾ ಏಜೆಂಟ್ ಜೊತೆ ಜಂಟಿ ಖಾತೆಯನ್ನು ಚುನಾವಣಾ ವೆಚ್ಚಗಳ ಉದ್ದೇಶಕ್ಕಾಗಿ ತೆರೆಯಬೇಕು. ಖಾತೆಯನ್ನು ಅಭ್ಯರ್ಥಿಯ ಕುಟುಂಬದ ಸದಸ್ಯರಾಗಲೀ ಅಥವಾ ಬೇರೆ ಯಾವುದೇ ವ್ಯಕ್ತಿಯೊಂದಿಗೆ ಆ ವ್ಯಕ್ತಿಯು ಚುನಾವಣಾ ಏಜೆಂಟ್ ಆಗಿರದಿದ್ದರೆ ಅಂತಹ ಜಂಟಿ ಖಾತೆಯನ್ನು ತೆರೆಯಬಾರದು. ಖಾತೆಯನ್ನು ರಾಜ್ಯದಲ್ಲಿ ಎಲ್ಲಿಯಾದರೂ ತೆರೆಯಬಹುದು. ಖಾತೆಯನ್ನು ಸಹಕಾರಿ ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಸೇರಿದಂತೆ ಯಾವುದೇ ಬ್ಯಾಂಕ್‌ಗಳಲ್ಲಿ ತೆರೆಯಬಹುದು ಎಂದು ತಿಳಿಸಿದರು. ಪ್ರಸ್ತುತ ಚಾಲ್ತಿಯಲ್ಲಿರುವ ಖಾತೆಯನ್ನು ಚುನಾವಣಾ ಉದ್ದೇಶಕ್ಕಾಗಿ ಬಳಸಬಾರದು. ಚುನಾವಣೆಯ ವೆಚ್ಚಗಳ ಸಲುವಾಗಿಯೇ ಪ್ರತ್ಯೇಕವಾದ ಖಾತೆ ಇರುವುದು ಅತೀ ಅವಶ್ಯಕ. ಚುನಾವಣೆಯ ಎಲ್ಲಾ ವೆಚ್ಚಗಳನ್ನು ಈ ಖಾತೆಯಿಂದಲೇ ನಿರ್ವಹಿಸಬೇಕು. ಅಭ್ಯರ್ಥಿಯು ಚುನಾವಣೆಗೆ ವ್ಯಯಿಸುವ, ಸ್ವೀಕರಿಸುವ ಎಲ್ಲಾ ಹಣವನ್ನು ಈ ಖಾತೆಗೆ ಜಮಾ ಮಾಡಬೇಕು. ಈ ವಂತಿಗೆಯು ಅಭ್ಯರ್ಥಿಯ ಸ್ವಂತ ಹಣವೂ ಸೇರಿದಂತೆ ಉಳಿದ ಎಲ್ಲಾ ಮೂಲಗಳಿಂದಲೂ ಬರುವ ಮೊತ್ತವಾಗಿರುತ್ತದೆ. ಬ್ಯಾಂಕ್ ಖಾತೆಯ ಸ್ವಯಂ ದೃಢೀಕೃತ ಪ್ರತಿಯನ್ನು ಅಭ್ಯರ್ಥಿಯು ಚುನಾವಣೆಗೆ ತಗುಲಿದ ವೆಚ್ಚದ ವಿವರಗಳ ಪಟ್ಟಿಯೊಂದಿಗೆ ಚುನಾವಣಾ ಫಲಿತಾಂಶ ಘೋಷಣೆಯಾದ ದಿನದಿಂದ 30 ದಿನದೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಹೇಳಿದರು. ಅಭ್ಯರ್ಥಿಯು ಚುನಾವಣೆಗೆ ಸಂಬಂಧಿಸಿದ ವೆಚ್ಚವನ್ನು ಖಾತೆಗೆ ಸಂದಾಯವಾಗುವಂತೆ ಕ್ರಾಸ್ ಮಾಡಿದ ಚೆಕ್ಕು, ಡ್ರಾಫ್ಟ್, ಆರ್ಟಿಜಿಎಸ್, ಎನ್ಇಎಫ್ಟಿ ಮೂಲಕ ಚುನಾವಣೆ ವೆಚ್ಚಗಳಿಗೆ ಸಂಬಂಧಿಸಿದ ಖಾತೆಯಿಂದಲೇ ಪಾವತಿಸಬೇಕು. ಆದರೆ ಅಭ್ಯರ್ಥಿಯು ಯಾವುದೆ ವ್ಯಕ್ತಿಗೆ ಅಥವಾ ಸಂಸ್ಥೆಗೆ ಪಾವತಿಸುವ ಹಣವು ಇಡೀ ಚುನಾವಣಾ ಪ್ರಕ್ರಿಯೆಯ ಒಟ್ಟು ಅವಧಿಯಲ್ಲಿ 20 ಸಾವಿರ ರು.ಗಳನ್ನು ಮೀರದಿದ್ದರೆ ಆ ಮೊತ್ತವನ್ನು ತನ್ನ ಖಾತೆಯಿಂದ ತೆಗೆದು ನಗದು ರೂಪದಲ್ಲಿ ನೀಡಬಹುದಾಗಿದೆ ಎಂದರು. ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದನ್ವಯ ಅಭ್ಯರ್ಥಿ, ಅಭ್ಯರ್ಥಿಯ ಚುನಾವಣಾ ಏಜೆಂಟ್ ಅಥವಾ ಅವರ ಅನುಯಾಯಿಗಳು 50 ಸಾವಿರ ರು.ಗಳಿಗಿಂತ ಹೆಚ್ಚಿನ ನಗದು ಹಣವನ್ನು ಒಯ್ಯುವಂತಿಲ್ಲ. ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ವೆಚ್ಚವನ್ನು ಈ ಬ್ಯಾಂಕ್ ಖಾತೆಯ ಮೂಲಕ ಚೆಕ್ಕು, ಡ್ರಾಫ್ಟ್, ಆರ್ಟಿಜಿಎಸ್, ನೆಫ್ಟ್ ಮೂಲಕ ಮಾಡದಿದ್ದರೇ ಅಭ್ಯರ್ಥಿಯು ತನ್ನ ಖಾತೆಯನ್ನು ಚುನಾವಣಾ ಆಯೋಗದ ನಿಯಮಾನುಸಾರ ನಿರ್ವಹಿಸಿಲ್ಲ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳು ಹಾಗೂ ಅಂಚೆ ಕಚೇರಿಗಳಿಗೆ ಚುನಾವಣಾ ಖಾತೆಗಳಿಗಾಗಿ ಪ್ರತ್ಯೇಕ ಕೌಂಟರ್ ತೆರೆಯಲು ನಿರ್ದೇಶನ ನೀಡಲಾಗುವುದು. ಬ್ಯಾಂಕ್‌ಗಳು ಈ ಖಾತೆಗಳಿಗೆ ಅಭ್ಯರ್ಥಿಗಳು ಚುನಾವಣೆಯ ಅವಧಿಯಲ್ಲಿ ಹಣ ಜಮೆ ಮಾಡಲು ಮತ್ತು ತೆಗೆಯಲು ಆದ್ಯತಾನುಸಾರ ಕ್ರಮ ಕೈಗೊಳ್ಳಲಿವೆ. ಚುನಾವಣೆಯನ್ನು ಪಾರದರ್ಶಕ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ರಾಜಕೀಯ ಪಕ್ಷಗಳು ಸಹಕರಿಸುವಂತೆ ಸಭೆಯಲ್ಲಿ ಮನವಿ ಮಾಡಿದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎ.ಎಚ್. ನಸ್ರುಲ್ಲಾ ಖಾನ್, ಎಸ್. ಬಾಲಸುಬ್ರಮಣ್ಯ, ನಾಗಯ್ಯ, ಎಸ್. ಮಹೇಶ್‌ಗೌಡ, ಚುನಾವಣಾ ಶಿರಸ್ತೇದಾರ್ ಬಸವರಾಜು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಲೆಕ್ಕಾಧೀಕ್ಷಕ ಪ್ರವೀಣ್ ಪಟೇಲ್, ಜಿಪಂ ಲೆಕ್ಕಾಧೀಕ್ಷಕ ಸುರೇಶ್‌ಕುಮಾರ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಯುಭಾರ ಕುಸಿತ : ಮೂರು ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ
''ಮತ್ತೆ ಮೊಳಗಲಿದೆ ಜೆಡಿಎಸ್ ಕಹಳೆ: ಎಚ್ಡಿಕೆ 2028ಕ್ಕೆ ಸಿಎಂ''