ಕೊಪ್ಪಳದಲ್ಲಿ ಶುರುವಾಗಲಿದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಂಕ್

KannadaprabhaNewsNetwork |  
Published : Dec 11, 2025, 02:30 AM IST
ಸಸಸಸಸಸ | Kannada Prabha

ಸಾರಾಂಶ

ಮಹಿಳಾ ದಿನಾಚರಣೆಯಂದೇ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದ್ದು, ಅದಕ್ಕಾಗಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೇ ಸಹ ನಡೆದಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಜಿಲ್ಲಾ ಕೇಂದ್ರ ಕೊಪ್ಪಳ ನಗರದಲ್ಲಿ ಮಹಿಳೆಯರಿಗಾಗಿ ಮಹಿಳಾ ಸಿಬ್ಬಂದಿ ಇರುವ ಬ್ಯಾಂಕ್‌ ವೊಂದು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.

ನಗರದ ಪ್ರತಿಷ್ಠಿತ ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಮಹಿಳಾ ಶಾಖೆಯನ್ನು ಮಾ. 8 ರಂದು ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದಂತೆ ಮಹಿಳಾ ಬ್ಯಾಂಕ್ ಪ್ರಾರಂಭಿಸಲು ಎಲ್ಲ ರೀತಿಯ ತಯಾರಿ ಪೂರ್ಣಗೊಂಡಿದ್ದು, ಶಾಖೆಯ ಕಟ್ಟಡ ಗೊತ್ತು ಮಾಡುವುದು ಮಾತ್ರ ಬಾಕಿ ಇದೆ.

ಮಹಿಳಾ ದಿನಾಚರಣೆಯಂದೇ ಪ್ರಾರಂಭಿಸಲು ತೀರ್ಮಾನ ಮಾಡಲಾಗಿದ್ದು, ಅದಕ್ಕಾಗಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೇ ಸಹ ನಡೆದಿದೆ.

ಕೊಪ್ಪಳದಲ್ಲಿ ಪ್ರಥಮ:ಕೊಪ್ಪಳ ಜಿಲ್ಲೆಯಲ್ಲಿಯೇ ಇದು ಪ್ರಥಮವಾಗಿ ಪ್ರಾರಂಭವಾಗುತ್ತಿರುವ ಮಹಿಳಾ ಬ್ಯಾಂಕ್ ಆಗಿದೆ. ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ತನ್ನ ಮೂರನೇಯ ಶಾಖೆಯನ್ನು ಮಹಿಳಾ ಬ್ಯಾಂಕ್ ಶಾಖೆಯಾಗಿ ಪ್ರಾರಂಭಿಸಲು ಮುಂದಾಗಿದೆ.

ಮಹಿಳೆಯರೇ ಗ್ರಾಹಕರು, ಸಿಬ್ಬಂದಿಗಳು:ಮಹಿಳಾ ಬ್ಯಾಂಕ್ ಎಂದರೇ ಕೇವಲ ಸಿಬ್ಬಂದಿಗಳು ಮಾತ್ರ ಮಹಿಳೆಯರು ಇರುವಂತೆ ಅಲ್ಲ, ಸಿಬ್ಬಂದಿಗಳು ಮತ್ತು ಗ್ರಾಹಕರು ಸಂಪೂರ್ಣ ಮಹಿಳೆಯರೇ ಇರುತ್ತದೆ. ಕೊಪ್ಪಳ ನಗರದ ನಿವಾಸಿಗಳು ಇದರ ಗ್ರಾಹಕರಾಗಬಹುದಾಗಿದೆ.

92 ವರ್ಷಗಳ ಹಿರಿಮೆ: ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಬರೋಬ್ಬರಿ 92 ವರ್ಷಗಳನ್ನು ಪೂರೈಕೆ ಮಾಡಿದ್ದು, ಕೊಪ್ಪಳ ನಗರದಲ್ಲಿ ಪ್ರತಿಷ್ಠಿತ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿದೆ.

ಮಹಿಳೆಯರು ಉಳಿತಾಯ ಖಾತೆ, ಸಾಲದ ಖಾತೆ ಸೇರಿದಂತೆ ಮೊದಲಾದ ರೀತಿಯ ಖಾತೆ ಹೊಂದಬಹುದಾಗಿದೆ. ಪುರುಷರಿಗಿಂತಲೂ ಮಹಿಳೆಯರ ಸಾಲ ಮರುಪಾವತಿಯಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಇರುವುದನ್ನು ಅರ್ಥೈಸಿಕೊಂಡಿರುವ ಬ್ಯಾಂಕ್ ಆಡಳಿತ ಮಂಡಳಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಮಹಿಳಾ ಶಾಖೆ ತೆರೆಯಲು ಮುಂದಾಗಿದೆ.

ಪುರುಷರಿಗಿಲ್ಲ ಪ್ರವೇಶ: ಈ ಬ್ಯಾಂಕಿನ ಇನ್ನೊಂದು ವಿಶೇಷವೆಂದರೇ ಕೇವಲ ಮಹಿಳೆಯರಿಗಾಗಿ ತೆರೆದಿರುವ ಈ ಬ್ಯಾಂಕಿನಲ್ಲಿ ಕೇವಲ ಮಹಿಳೆಯರು ಮಾತ್ರ ಖಾತೆ ಹೊಂದಬಹುದಾಗಿದೆ. ಪುರುಷರು ಖಾತೆ ತೆರೆಯುವುದಕ್ಕೂ ಅವಕಾಶ ನೀಡುವಂತೆ ಇಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಹಾಗೆಯೇ ಮಹಿಳೆಯರು ತಮ್ಮ ಖಾತೆಯನ್ನು ತಾವೇ ನಿರ್ವಹಣೆ ಮಾಡಬೇಕೆ ವಿನಃ ತಮ್ಮ ಖಾತೆ ನಿರ್ವಹಿಸಲು ಪುರುಷರಿಗೆ ಅವಕಾಶ ನೀಡುವಂತೆಯೂ ಇಲ್ಲ. ಈ ಮೂಲಕ ಮಹಿಳೆಯರೇ ಮುಂದೆ ಬಂದು ತಮ್ಮ ಬ್ಯಾಂಕ್ ವ್ಯವಹಾರ ಮಾಡುವಂತಾಗಬೇಕು ಎಂದು ಈ ನಿಯಮ ಅಳವಡಿಸಿಕೊಳ್ಳಲಾಗಿದೆ.

ಕೊಪ್ಪಳ ನಗರದಲ್ಲಿ ಪ್ರಥಮ ಬಾರಿಗೆ ಮಹಿಳಾ ಸಿಬ್ಬಂದಿ ಮತ್ತು ಗ್ರಾಹಕರನ್ನೊಳಗೊಂಡ ಪ್ರತ್ಯೇಕ ಮಹಿಳಾ ಶಾಖೆ ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ತೆರೆಯಲು ನಿರ್ಧರಿಸಲಾಗಿದೆ. ಮಾ. 8 ರಂದು ಮಹಿಳಾ ಬ್ಯಾಂಕ್ ಪ್ರಾರಂಭವಾಗಲಿದೆ ಎಂದು ಶ್ರೀಗವಿಸಿದ್ಧೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಆಡೂರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್, ಸಿವಿಲ್ ಎಂಜಿನಿಯರಿಂಗ್ ಕೋರ್ಸ್ ಪ್ರಾರಂಭ
ರೈತರು, ಕಾರ್ಮಿಕರು ಮತ್ತು ಕೂಲಿಕಾರರ ವಿರೋಧಿ ನೀತಿ: ಮಂಜುಳಾ