ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಸ್ಥಾನ ಬಹುತೇಕ ಪಕ್ಕಾ..!

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ಹಲವು ವರ್ಷಗಳ ಹೋರಾಟದ ಫಲವಾಗಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಸ್ಥಾನಮಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ.ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಪ್ರತ್ಯೇಕ ಪಾಲಿಕೆಯ ವಿಷಯ ಚರ್ಚೆಯಾಗಿದ್ದು, ಆಶಾದಾಯಕ ಬೆಳವಣಿಗೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಹಲವು ವರ್ಷಗಳ ಹೋರಾಟದ ಫಲವಾಗಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯ ಸ್ಥಾನಮಾನ ಸಿಗುವುದು ಬಹುತೇಕ ಪಕ್ಕಾ ಆಗಿದೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ಪ್ರತ್ಯೇಕ ಪಾಲಿಕೆಯ ವಿಷಯ ಚರ್ಚೆಯಾಗಿದ್ದು, ಆಶಾದಾಯಕ ಬೆಳವಣಿಗೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಜಿಲ್ಲೆಯ ಶಾಸಕರ ಹಾಗೂ ಧಾರವಾಡ ಜನತೆಯ ಬೇಡಿಕೆಯಂತೆ ನಿಯಮಾನುಸಾರ ಅರ್ಹತೆಯನ್ನು ಪರಿಶೀಲಿಸಿ, ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚಿಸಲು ಕ್ರಮಕೈಗೊಳ್ಳಲು ಸ್ಪಷ್ಟ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಧಾರವಾಡ ಜನರು ಹಾಗೂ ಹೋರಾಟಗಾರರು ಸರ್ಕಾರದ ಆದೇಶಕ್ಕಾಗಿ ಮಾತ್ರ ಕಾಯುವಂತಾಗಿದೆ. ಇದಲ್ಲದೇ, ಡಿ. 16ರಂದು ಧಾರವಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೃಹತ್ ಕಾರ್ಯಕ್ರಮ ಆಯೋಜಿಸಿದ್ದು ಈ ಸಮಯದಲ್ಲಿ ಪ್ರತ್ಯೇಕ ಪಾಲಿಕೆಯ ಘೋಷಣೆ ಮಾಡಲಿ ಎಂಬ ಆಗ್ರಹವು ಹೋರಾಟಗಾರರಿಂದ ವ್ಯಕ್ತವಾಗಿದೆ.

ಎಲ್ಲ ಮಾನದಂಡದಲ್ಲಿ ಓಕೆ

ಪ್ರತ್ಯೇಕ ಮಹಾನಗರ ಪಾಲಿಕೆ ರಚನೆ ಮಾಡಲು ಧಾರವಾಡ ನಗರ ಸಂಪೂರ್ಣ ಅರ್ಹ. ಮೂರು ಲಕ್ಷ ಜನಸಂಖ್ಯೆ, ₹6 ಕೋಟಿಗೂ ಅಧಿಕ ತೆರಿಗೆ ಸಂಗ್ರಹ ಹಾಗೂ ವ್ಯಾಪ್ತಿ ಪ್ರದೇಶದಲ್ಲೂ ನಿಯಮಾನುಸಾರ ಅರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಎರಡು ವರ್ಷಗಳಿಂದ ಚಳಿಗಾಲದ ಅಧಿವೇಶನ ಸಮಯದಲ್ಲಿ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಜೊತೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಶಾಸಕರಾದ ಅಬ್ಬಯ್ಯ ಪ್ರಸಾದ, ಮಹೇಶ ಟೆಂಗಿನಕಾಯಿ ಸೇರಿದಂತೆ ಉಸ್ತುವಾರಿ ಸಚಿವ ಸಂತೋಷ ಲಾಡ್‌, ವಿನಯ ಕುಲಕರ್ಣಿ, ಎನ್.ಎಚ್‌. ಕೋನರಡ್ಡಿ ಹಾಗೂ ಅರವಿಂದ ಬೆಲ್ಲದ ಸಹಮತ ಸಹ ಇತ್ತು. ಇದೀಗ ಸೋಮವಾರ ನಗರಾಭಿವೃದ್ಧಿ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಎಲ್ಲ ಶಾಸಕರ ಸಭೆ ನಡೆಸಿ ಮಾಹಿತಿ ಸಹ ಪಡೆದುಕೊಂಡಿದ್ದರು.

ಸದನದಲ್ಲಿ ಗಮನಸೆಳೆದ ಶಾಸಕ ಅರವಿಂದ ಬೆಲ್ಲದ

ಮುಂದುವರಿದ ಭಾಗವಾಗಿ ಮಂಗಳವಾರ ಧಾರವಾಡಕ್ಕೆ ಮಹಾನಗರ ಪಾಲಿಕೆ ರಚನೆಯಾಗಲು ಅಗತ್ಯವಿರುವ ಎಲ್ಲಾ ಮಾನದಂಡಗಳು ಪೂರ್ಣವಾಗಿವೆ. ಮಹಾನಗರ ಪಾಲಿಕೆ ರಚನೆಗೆ ಕ್ರಮವಹಿಸಿ ಆದೇಶ ಹೊರಡಿಸಬೇಕೆಂದು ಸುವರ್ಣ ವಿಧಾನಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ ನಗರಾಭಿವೃದ್ಧಿ ಸಚಿವರಲ್ಲಿ ಗಮನ ಸೆಳೆದಿದ್ದು ಮಹತ್ವದ ಬೆಳವಣಿಗೆಯಲ್ಲೊಂದು.

ಹು-ಧಾ ಮಹಾನಗರ ಪಾಲಿಕೆಯು ರಾಜ್ಯದ ಎರಡನೇ ಅತೀ ದೊಡ್ಡ ಪಾಲಿಕೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ದಿನದಿಂದ ದಿನಕ್ಕೆ ವೇಗವಾಗಿಯೂ ಬೆಳೆಯುತ್ತಿದೆ. ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಹತ್ತಿರದಲ್ಲಿವೆ. ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಪ್ರದೇಶದಲ್ಲಿ ಕೈಗಾರಿಕೆ, ವಸತಿ ಹಾಗೂ ಶೈಕ್ಷಣಿಕ ಕ್ಷೇತ್ರದ ಎಲ್ಲಾ ಕ್ಷೇತ್ರಗಳು ಬೃದಾಕಾರವಾಗಿ ಬೆಳೆದಿವೆ. ಆದರೆ, ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಇತ್ಯರ್ಥವಾಗುತ್ತಿಲ್ಲ ಹಾಗೂ ಹಲವಾರು ಸಂಘಟನೆಗಳು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಬೇಕು ಎಂದು ಅಭಿಪ್ರಾಯಿಸಿವೆ. ಸಾರ್ವಜನಿಕ ಹಿತದೃಷ್ಟಿ ಹಾಗೂ ಧಾರವಾಡದ ಜನರ ಸರ್ವತೋಮುಖ ಅಭಿವೃದ್ಧಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾನ ನೀಡುವಂತೆ ಬೆಲ್ಲದ ಆಗ್ರಹಿಸಿದ್ದರು.

ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ ಬಿ.ಎಸ್. ಪ್ರತಿಕ್ರಿಯೆ ನೀಡಿ, ಒಂದು ನಗರ ಸ್ಥಳೀಯ ಸಂಸ್ಥೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು 2011ರ ಜನಸಂಖ್ಯೆಯು ಮಾನದಂಡವಾಗಿದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರಲ್ಲಿರುವ ಮಾನದಂಡಗಳನ್ನು ಪೂರೈಸುತ್ತಿರುವ ಬಗ್ಗೆ ಪರಿಶೀಲಿಸಿ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಜೊತೆಗೆ ಧಾರವಾಡ ಜಿಲ್ಲಾಧಿಕಾರಿಗಳು ಧಾರವಾಡ ನಗರವನ್ನು ಮಾತ್ರ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೂಕ್ತವೆಂದು ಗುರುತಿಸಿ, ಈ ಕುರಿತಂತೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಸಲ್ಲಿಸಿದ್ದಲ್ಲಿ ಮತ್ತು ಪೌರಾಡಳಿತ ನಿರ್ದೇಶಕರಿಂದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರನ್ವಯ ಸೂಕ್ತ ಶಿಫಾರಸಿನೊಂದಿಗೆ ಪ್ರಸ್ತಾವನೆಯು ಸರ್ಕಾರದಲ್ಲಿ ಸ್ವೀಕೃತವಾದಲ್ಲಿ ನಿಯಮಾನುಸಾರ ಅರ್ಹತೆಯನ್ನು ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಸದನದಲ್ಲಿ ಉತ್ತರಿಸಿದ್ದಾರೆ.

ಏತನ್ಮಧ್ಯೆ, ಈ ವಿಷಯವಾಗಿ ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ಸಹ ಮಾಡಲಾಗುವುದು ಎಂದಿದ್ದಾರೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಕಾಂಗ್ರೆಸ್‌ ಸರ್ಕಾರ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾನ ಒದಗಿಸುವ ಎಲ್ಲ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

16ರಂದು ಘೋಷಣೆಯಾಗಲಿ

ಧಾರವಾಡದ ಅಭಿವೃದ್ಧಿ ಹಿನ್ನೆಲೆಯಲ್ಲಿ ಪ್ರತ್ಯೇಕ ಪಾಲಿಕೆಯ ಹೋರಾಟದ ಭಾಗವಾಗಿ ನಗರಾಭಿವೃದ್ಧಿ ಸಚಿವರು ಸದನದಲ್ಲಿ ಆಶಾದಾಯಕ ಉತ್ತರ ನೀಡಿದ್ದು ಧಾರವಾಡದ ಪಾಲಿಗೆ ಸುಸಂದರ್ಭ. ಡಿ. 13ರ ಬುಧವಾರ ಮುಖ್ಯಮಂತ್ರಿಗಳ ಜೊತೆಗೆ ಜಿಲ್ಲೆಯ ಶಾಸಕರ ಸಭೆ ನಿಗದಿಯಾಗಿದೆ ಎಂಬ ಮಾಹಿತಿಯೂ ಇದೆ. ಶಾಸಕ ವಿನಯ ಕುಲಕರ್ಣಿ ಸೇರಿದಂತೆ ಎಲ್ಲ ಶಾಸಕರು ಪ್ರತ್ಯೇಕ ಪಾಲಿಕೆಗೆ ಸಮ್ಮತಿ ತೋರಿದ್ದಾರೆ. ಮುಖ್ಯಮಂತ್ರಿಗಳ ಮನವೊಲಿಸಿ ಡಿ. 16ರಂದು ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಘೋಷಣೆ ಮಾಡಿಸುವ ಜವಾಬ್ದಾರಿಯನ್ನು ಜಿಲ್ಲೆಯ ಶಾಸಕರು ಹೊರಬೇಕೆಂದು ಹೋರಾಟ ಸಮಿತಿಯ ಮುಖಂಡ ರವಿ ಮಾಳಿಗೇರ ಆಗ್ರಹಿಸಿದರು.

Share this article