ಹಾವೇರಿ:
ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಭ್ರಷ್ಟಾಚಾರ ಹಾಗೂ ಅವರನ್ನು ಬೆಂಬಲಿಸಿರುವ ಕಾಂಗ್ರೆಸ್‌ನ ಬ್ರಹ್ಮಾಂಡ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಬಿಜೆಪಿ ಕಾರ್ಯಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಿ.ಬಿ. ರೋಡ್ ಮೂಲಕ ಹೊಸಮನಿ ಸಿದ್ದಪ್ಪ ವೃತ್ತಗೆ ಆಗಮಿಸಿತು. ನಂತರ ಕೆಲಹೊತ್ತು ರಸ್ತೆ ತಡೆ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ಶಿವರಾಜ ಸಜ್ಜನರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ತಾಯಿ ಇದ್ದಂತೆ. ಈ ದೇಶದಲ್ಲಿ ಭ್ರಷ್ಟ್ಟಾಚಾರಿಗಳಿಗೆ ಜನ್ಮ ನೀಡಿದ ಪಾಪ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಲ್ಲುತ್ತದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹಣ ಎಣಿಸುತ್ತಿದ್ದರು ಕೂಡ ಎಲ್ಲಾ ನೋಟು ಎಣಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ನೋಟು ಎಣಿಸುವ ಯಂತ್ರಗಳು ಕೆಟ್ಟು ಹೋಗುತ್ತಿವೆ. ಇದನ್ನು ನೋಡಿದರೆ ಕಾಂಗ್ರೆಸ್ ಈ ದೇಶವನ್ನು ಅದೆಷ್ಟು ಲೂಟಿ ಮಾಡಿರಬಹುದು ಎಂಬುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ೬೩ ವರ್ಷಗಳ ಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್‌ನವರು ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ರಾಜಕೀಯ ನಿರುದ್ಯೋಗಿಗಳಾಗಿದ್ದಾರೆ. ಈ ಮೊದಲು ಅವರ ಆಡಳಿತ ಸಂದರ್ಭದಲ್ಲಿ ಹಗರಣಗಳ ಮೂಲಕ ಉದ್ಯೋಗವನ್ನು ಸೃಷ್ಟಿಸಿಕೊಂಡಿದ್ದ ಕಾಂಗ್ರೆಸ್ ನಾಯಕರು ಈಗ ಬೀದಿಗೆ ಬಂದು ನಿಂತಿದ್ದಾರೆ. ದೇಶವನ್ನು ಲೂಟಿ ಹೊಡೆದು ಸಂಗ್ರಹಿಸಿ ಇಟ್ಟಿರುವ ಹಣವನ್ನು ಈಗ ನರೇಂದ್ರ ಮೋದಿ ಅವರ ಸರ್ಕಾರ ಮರಳಿ ಪಡೆಯುವ ಪ್ರಯತ್ನ ಮಾಡುತ್ತಿದೆ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್ ವರಿಷ್ಠರು ಲೋಕಸಭಾ ಚುನಾವಣೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರದ ಮೂಲಕ ಹಣವನ್ನು ಸಂಗ್ರಹಿಸುವ ಪ್ರಯತ್ನ ಮಾಡುತ್ತಿದ್ದು, ಸುಮಾರು ೫೦೦೦ ಕೋಟಿ ಸಂಗ್ರಹಿಸಿ ಲೋಕಸಭಾ ಚುನಾವಣೆಗೆ ಕೊಡುವಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ, ಎಲ್ಲ ಮಂತ್ರಿಗಳಿಗೆ ಸೂಚನೆ ನೀಡಿರುವ ಬಗ್ಗೆ ಮಾಹಿತಿ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಜನರ ಲೂಟಿ ಹೊಡೆಯುವುದನ್ನು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿದರು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ರುದ್ರೇಶ ಚಿನ್ನಣ್ಣನವರ, ಪ್ರಮುಖರಾದ ಬೋಜರಾಜ ಕರೂದಿ, ಪಾಲಕ್ಷಗೌಡ ಪಾಟೀಲ, ಡಾ. ಬಸವರಾಜ ಕೆಲಗಾರ, ಕೆ. ಶಿವಲಿಂಗಪ್ಪ, ಸಂತೋಷ ಅಲದಕಟ್ಟಿ, ಶಿವಾನಂದ ಮ್ಯಾಗೇರಿ, ಶಿವಕುಮಾರ ತಿಪ್ಪಶೆಟ್ಟಿ, ಹಾಲೇಶ ಜಾಧವ, ಬಸವರಾಜ ಕಳಸೂರ, ನೀಲಪ್ಪ ಚಾವಡಿ, ಅಲ್ಲಾಭಕ್ಷ ತಿಮ್ಮಾಪೂರ, ನಂಜುಂಡೇಶ ಕಳ್ಳೇರ, ಜಗದೀಶ ಬಸೆಗಣ್ಣಿ, ನಿರಂಜನ ಹೇರೂರ, ಗಂಗಾಧರ ಮಾಗನೂರ, ನಿಂಗಾಚಾರ ಮಾಯಾಚಾರ, ಉಮೇಶ ಬಣಕಾರ, ಎನ್.ಎಂ. ಈಟೇರ, ನರಹರಿ ಕಟ್ಟಿ, ಸುಭಾಷ ಶಿರಗೇರಿ, ಜಗದೀಶ ಸವಣೂರ, ನಿಖಿಲ್ ಡೊಗ್ಗಳ್ಳಿ, ಮಾಲಿಂಗಸ್ವಾಮಿ ಹಿರೇಮಠ, ಕರಬಸಪ್ಪ ಹಳದೂರ ಇತರರು ಇದ್ದರು.