ರೈತರ ಮೇಲೆ ಬೆಳಗಾವಿ ಪೊಲೀಸರ ದರ್ಪ ಖಂಡನೀಯ

KannadaprabhaNewsNetwork | Published : Dec 13, 2023 1:00 AM

ಸಾರಾಂಶ

ರೈತರ ಸಹಾಯ ಹಾಗೂ ಸಂಘಟನೆಯಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ರೈತರು ಪ್ರತಿಭಟನೆ ನಡೆಸಿದರೆ ಕನಿಷ್ಠ ನಮ್ಮ ತೊಂದರೆ ಕೇಳಿಸಿಕೊಳ್ಳುವ ತಾಳ್ಮೆ ತೋರಿಸಿಲ್ಲ. ಅಹಂಕಾರದ ಅಧಿಕಾರಿಗಳು ಹಾಗೂ ಅಧಿಕಾರ ಸಿಕ್ಕ ಬಳಿಕ ಕೆಟ್ಟ ವರ್ತನೆ ತೋರುವ ಜನಪ್ರತಿನಿಧಿಗಳಿಗೆ ರಾಜ್ಯದ ಜನರು ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ ಬೆಳಗಾವಿ ಅಧಿವೇಶನ ನಡೆಯುತ್ತಿರುವಾಗ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದ ರೈತರನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ರೈತ ಸಂಘ (ಎಚ್. ಗಣಪತಿಯಪ್ಪ ಬಣ) ವತಿಯಿಂದ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಸಿರಿವಾಳ ಮಾತನಾಡಿ, 70 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಕಿತ್ತೂರಿನ ಕೆಲ ರೈತ ಕುಟುಂಬಗಳು ತಮ್ಮ ಭೂಮಿಯ ಹಕ್ಕಿಗಾಗಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲು ಹೆದ್ದಾರಿ ತಡೆದು ಪ್ರತಿಭಟಿಸಿದ್ದಾರೆ. ಈ ವೇಳೆ ಪ್ರತಿಭಟನಾನಿರತರ ಮೇಲೆ ಪೊಲೀಸರು ಮುಗಿಬಿದ್ದು, ಗೂಂಡಾಗಳಂತೆ ವರ್ತಿಸಿ, ದರ್ಪ ಮತ್ತು ಅಹಂಕಾರದಿಂದ ವ್ಯವಹರಿಸಿದ್ದಾರೆ. ಮುಖ್ಯವಾಗಿ ಪೊಲೀಸ್ ವರಿಷ್ಠಾಧಿಕಾರಿ ರೈತರ ವಿರುದ್ಧ ತೊಡೆ ತಟ್ಟಿ ಬೆದರಿಸಿರುವುದು ಖಂಡನೀಯ ಎಂದರು.

ರೈತರ ಸಹಾಯ ಹಾಗೂ ಸಂಘಟನೆಯಿಂದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ರೈತರು ಪ್ರತಿಭಟನೆ ನಡೆಸಿದರೆ ಕನಿಷ್ಠ ನಮ್ಮ ತೊಂದರೆ ಕೇಳಿಸಿಕೊಳ್ಳುವ ತಾಳ್ಮೆ ತೋರಿಸಿಲ್ಲ. ಅಹಂಕಾರದ ಅಧಿಕಾರಿಗಳು ಹಾಗೂ ಅಧಿಕಾರ ಸಿಕ್ಕ ಬಳಿಕ ಕೆಟ್ಟ ವರ್ತನೆ ತೋರುವ ಜನಪ್ರತಿನಿಧಿಗಳಿಗೆ ರಾಜ್ಯದ ಜನರು ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ರಾಜ್ಯದ ಎಲ್ಲ ಭಾಗದಲ್ಲಿಯೂ ರೈತರು ತೊಡೆ ತಟ್ಟಿದ ಅಧಿಕಾರಿ ವಿರುದ್ಧ ಪ್ರತಿಭಟಿಸಿ ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಗಮನಹರಿಸಬೇಕು. ರೈತರ ಎದುರು ತೊಡೆ ತಟ್ಟಿದ ಪ್ರಕರಣದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ಅಂಥ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲವಾದರೆ, ರಾಜ್ಯದೆಲ್ಲೆಡೆ ರೈತರು ಹೋರಾಟ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಸಂಘದ ತಾಲೂಕು ಅಧ್ಯಕ್ಷ ಡಾ.ರಾಮಚಂದ್ರಪ್ಪ, ಪ್ರಮುಖರಾದ ಕುಮಾರ್ ಗೌಡ, ಹೊಯ್ಸಳ ಗಣಪತಿಯಪ್ಪ, ಬದ್ರೇಶ್ ಬಾಳಗೋಡು, ಶಿವಕುಮಾರ್ ಮೈಲಿಕೊಪ್ಪ ಇನ್ನಿತರರು ಹಾಜರಿದ್ದರು.

- - - -12ಕೆ.ಎಸ್.ಎ.ಜಿ.1:

ಸಾಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿ ದರ್ಪದ ನಡೆ ಖಂಡಿಸಿ, ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

Share this article