ಕನ್ನಡಪ್ರಭ ವಾರ್ತೆ ಆನಂದಪುರ ಸಮಾನತೆ ತರುವ ನಿಟ್ಟಿನಲ್ಲಿ 21ನೆಯ ಶತಮಾನದಲ್ಲಿ ಮಾಡಲಾಗದಂಥ ಸಾಧನೆಯನ್ನು ಬಸವಣ್ಣ 12ನೇ ಶತಮಾನದಲ್ಲಿಯೇ ಸಾಧಿಸಿ ತೋರಿಸಿದ್ದಾರೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್.ಮಹಾರುದ್ರ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಮುರುಘಾ ಮಠದಲ್ಲಿ ಮಂಗಳವಾರ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿದ ಅವರು, ಕಲ್ಯಾಣ ಕರ್ನಾಟಕ ಎನಿಸುವ ಮೊದಲು ಕನ್ನಡ ನಾಡಿನಲ್ಲಿ ಅಜ್ಞಾನ, ಅಂಧಕಾರ, ಮೌಢ್ಯಗಳೇ ತುಂಬಿದ್ದವು. ಬಡವ, ಬಲ್ಲಿದ ಎಂಬ ತಾರತಮ್ಯವಿತ್ತು. 12ನೆಯ ಶತಮಾನದ ವಿಶ್ವಗುರು ಬಸವಣ್ಣ ಈ ಎಲ್ಲವನ್ನೂ ತೊಡೆದು ಹಾಕಿ, ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಸಾರಿದ್ದರು ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ ಮಾತನಾಡಿ, ಸಾರ್ವಜನಿಕರು ಉಚಿತ ಆರೋಗ್ಯ ಶಿಬಿರಗಳಲ್ಲಿ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ. ಇಂಥ ಶಿಬಿರಗಳನ್ನು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳ ಮೂಲಕ ಜನರ ಆರೋಗ್ಯ ಸಮಸ್ಯೆಗೆ ಹತ್ತಿರವೇ ಚಿಕಿತ್ಸೆ ದೊರೆಯುವಂತಹ ನಿಟ್ಟಿನಲ್ಲಿ ಗ್ರಾಪಂಗಳು ಮುಂದಾಗಬೇಕು. ಇಂಥ ಶಿಬಿರಗಳ ಸದ್ಬಳಕೆ ಅಗತ್ಯ ಎಂದರು.
ಡಾ ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ತಾಳಗುಪ್ಪ ಕೂಡಲಿ ಮಠದ ಸಿದ್ಧವೀರ ಮಹಾಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿರಾಳಕೊಪ್ಪ ಸಿದ್ದೇಶ್ವರ ಸ್ವಾಮೀಜಿ, ಕಲ್ಮನೆ ಗುತ್ತಲ ಮಠದ ಪ್ರಭು ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಸದಾಶಿವಪೇಟೆಯ ಗದಿಗೇಶ್ವರ ಸ್ವಾಮೀಜಿ, ರಾಮದುರ್ಗದ ಶಾಂತವೀರ ಸ್ವಾಮೀಜಿ, ಮೂಲೆಗೆದ್ದೆ ಶಿವಯೋಗಿ ಆಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ, ಕಡೆನಂದಿಹಳ್ಳಿಯ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ, ಅಡಲಟ್ಟಿ ನಿಡಸೊಸಿ ಮಠದ ಶಿವ ಪಂಚಾಕ್ಷರಿ ಸ್ವಾಮೀಜಿ, ಆಚಾಪುರ ಗ್ರಾಪಂ ಅಧ್ಯಕ್ಷ ಕಲೀಮುಲ್ಲಾ ಖಾನ್, ಕಾರ್ತಿಕ ದೀಪೋತ್ಸವ ಸಮಿತಿಯ ಅಧ್ಯಕ್ಷ ನಾಗರಾಜ್ ಗೌಡ ಹರತಾಳ ಉಪಸ್ಥಿತರಿದ್ದರು.ಹಿರೇಮಠ ಶಾಂತಪುರದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಣ ನೆರವೇರಿಸಿದರು. ಆಕಾಶವಾಣಿ ಕಲಾವಿದೆ ನಾಗರತ್ನಮ್ಮ ಚಂದ್ರಶೇಖರಯ್ಯ ಹಾಗೂ ಸುಮಾ ವಿ. ಹೆಗಡೆ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.
ಸಾಗರದ ನಾಟ್ಯ ತರಂಗ ಟ್ರಸ್ಟ್ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಸಮ್ಮೇಳನ ಅಂಗವಾಗಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು.- - - ಬಾಕ್ಸ್ ವಚನ ಸಾಹಿತ್ಯ ದೊಡ್ಡ ಕೊಡುಗೆ ವಚನಗಳು ಸರಳವಾಗಿ ಆಡು ಭಾಷೆಯಲ್ಲಿ ರಚಿತವಾಗಿವೆ. ಜಾಗೃತಿಕ ಸಾಹಿತ್ಯದಲ್ಲಿ ಮಹತ್ವಪೂರ್ಣ ಬದುಕುವ ಗಟ್ಟಿತನದ ಸಾಹಿತ್ಯವಾಗಿವೆ ಎಂದು ಎಚ್.ಎನ್.ಮಹಾರುದ್ರ ಹೇಳಿದರು.
ಕನ್ನಡ ಭಾಷೆಯು ಹಿರಿಮೆ, ಗರಿಮೆಗಳಿಂದ ಕೂಡಿದ್ದು, ಕನ್ನಡಕ್ಕೆ ಶರಣರ ವಚನ ಸಾಹಿತ್ಯವೂ ದೊಡ್ಡ ಕೊಡುಗೆ ನೀಡಿದೆ. ಅನುಭವಿಗಳ ಸಾಹಿತ್ಯ, ಜನರಿಂದ- ಜನರಿಗಾಗಿ- ಜನರ ಮಟ್ಟದಲ್ಲಿ ಬೆಳೆದು ಬದುಕುವ ಜೀವಂತ ಸಾಹಿತ್ಯವಾಗಿ ವಚನ ಸಾಹಿತ್ಯ ಗುರುತಿಸಿಕೊಂಡಿದೆ. ಶಿವಶರಣರ ವಚನ ಸಾಹಿತ್ಯ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಅಡಕವಾಗಿದೆ. ನಾವು ಮಾತನಾಡುವಂತಹ ಮಾತುಗಳು ಸಹ ವಚನ ಸಾಹಿತ್ಯದಡಿಯಲ್ಲಿವೆ ಎಂದರು.- - - -12ಎಎನ್, ಪಿ2:
ಆನಂದಪುರ ಮುರುಘಾ ಮಠದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಿಎಚ್ಒ ಡಾ.ರಾಜೇಶ್ ಸುರಗೀಹಳ್ಳಿ ಉದ್ಘಾಟಿಸಿದರು. ವಿವಿಧ ಮಠಾಧೀಶರು, ಗಣ್ಯರು ಇದ್ದರು.