ಕಾಡು ಬೆಳೆಸಲು ಸರ್ಕಾರದಿಂದ ಗಂಭೀರ ಪ್ರಯತ್ನ ನಡೆದಿದೆ: ಸಿದ್ದರಾಮಯ್ಯ

KannadaprabhaNewsNetwork | Published : Jun 16, 2024 1:47 AM

ಸಾರಾಂಶ

ಈಗ ಜನಸಂಖ್ಯೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕಾಡೂ ಬೆಳೆಯಬೇಕು. ಪ್ರಕೃತಿಯಲ್ಲಿ ಸಮತೋಲನ ಇರಬೇಕು. ಆಗಮಾತ್ರ ಬದುಕಲು ಸಾಧ್ಯ. ಮರ ಗಿಡ ಕಡಿಮೆ ಆಗಿರುವುದರಿಂದ ಮಳೆ ಕಡಿಮೆಯಾಗಿ, ಉಷ್ಣತೆ ಹೆಚ್ಚಾಗಿದೆ.ಇದಕ್ಕೆ ಗಿಡ, ಮರ ಇಲ್ಲದಿರುವುದೇ ಕಾರಣ. ಕರ್ನಾಟಕದಲ್ಲಿ ಈ ಬಾರಿ 47 ರಿಂದ 48 ರಷ್ಟು ಉಷ್ಣತೆ ಇತ್ತು. ಯಾವ ಸಂದರ್ಭದಲ್ಲಿಯೂ ಇಷ್ಟು ಹೆಚ್ಚಿರಲಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಸರ್ಕಾರ ಕಾಡು ಬೆಳೆಸುವ ದಿಕ್ಕಿನಲ್ಲಿ ಗಂಭೀರ ಪ್ರಯತ್ನ ಮಾಡುತ್ತದೆ. ಕಾಡು ಬೆಳೆದರೆ ನಾಡು ಬೆಳೆಯುತ್ತದೆ. ನಾಡು ಬೆಳೆದರೆ ಜನಜೀವನ ಉಳಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ಲೇಷಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶನಿವಾರ ರಾಜೀವ್ ಸ್ನೇಹ ಬಳಗ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಲಕ್ಷವೃಕ್ಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲರೂ ಗಿಡ ಬೆಳೆಸುವ ಸಂಕಲ್ಪ ಮಾಡಬೇಕು. ಈ ವರ್ಷ ಸರ್ಕಾರದಿಂದ 5 ಕೋಟಿ ಗಿಡ ಬೆಳೆಸುವ ಗುರಿ ಹೊಂದಿದ್ದೇವೆ. ನಮ್ಮ ದುರಾಸೆಯಿಂದ ಕಾಡು ನಶಿಸುತ್ತಿದೆ. ಕಾಡು ಕನಿಷ್ಠ ಪಕ್ಷ ಶೇ.30ರಷ್ಟು ಇರಬೇಕು ಎಂಬ ನಿಯಮವಿದೆ. ಆದರೆ, ಇಂದು ಶೇ.19 ರಿಂದ 20 ರಷ್ಟು ಮಾತ್ರ ಕಾಡು ಇದೆ. ಅದರಲ್ಲೂ ಕೆಲ ಜಿಲ್ಲೆಗಳಲ್ಲಿ ಬಹಳಕಡಿಮೆ ಪ್ರಮಾಣದಲ್ಲಿದೆ. ಕಾಡಿದ್ದರೆ ಮಾತ್ರ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂಬುದನ್ನು ನಾವು ತಿಳಿಯಬೇಕು ಎಂದರು.

ಈಗ ಜನಸಂಖ್ಯೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಕಾಡೂ ಬೆಳೆಯಬೇಕು. ಪ್ರಕೃತಿಯಲ್ಲಿ ಸಮತೋಲನ ಇರಬೇಕು. ಆಗಮಾತ್ರ ಬದುಕಲು ಸಾಧ್ಯ. ಮರ ಗಿಡ ಕಡಿಮೆ ಆಗಿರುವುದರಿಂದ ಮಳೆ ಕಡಿಮೆಯಾಗಿ, ಉಷ್ಣತೆ ಹೆಚ್ಚಾಗಿದೆ.ಇದಕ್ಕೆ ಗಿಡ, ಮರ ಇಲ್ಲದಿರುವುದೇ ಕಾರಣ. ಕರ್ನಾಟಕದಲ್ಲಿ ಈ ಬಾರಿ 47 ರಿಂದ 48 ರಷ್ಟು ಉಷ್ಣತೆ ಇತ್ತು. ಯಾವ ಸಂದರ್ಭದಲ್ಲಿಯೂ ಇಷ್ಟು ಹೆಚ್ಚಿರಲಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಎಚ್.ವಿ.ರಾಜೀವ್ ಅವರ ಈ ಕೆಲಸ ಶ್ಲಾಘನೀಯ. ಅವರನ್ನು ಬೆಂಬಲಿಸುವುದು ಮಾತ್ರವಲ್ಲ, ಅವರಿಗೆ ಸ್ಫೂರ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಆಗಿದೆ. ಇದು ಮುಂದುವರಿದರೆ ಮಾನವ ಉಳಿವು ಕಷ್ಟವಾಗುತ್ತದೆ. ಋತುಮಾನದ ಬದಲಾವಣೆಯಿಂದ ಪರಿಸರದಲ್ಲಿ ಅಸಮತೋಲನ ಆಗಿದೆ. ಇದಕ್ಕೆ ಮನುಷ್ಯನ ದುರಾಸೆ ಕಾರಣ. ನೈಸರ್ಗಿಕ ಸಂಪತ್ತಿನ ಮೇಲಿನ ದೌರ್ಜನ್ಯದಿಂದ ಹೀಗಾಗುತ್ತಿದೆ ಎಂದರು.

ಪರಿಸರವನ್ನು ನಂಬಿದ ನಾವು ಅರಣ್ಯ ನಾಶ ನಿಯಂತ್ರಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳ ಮಾರಣ ಹೋಮ ನಡೆಯುತ್ತದೆ. ತ್ಯಾಜ್ಯಹೆಚ್ಚಿದೆ. ನಾವು ಪ್ರಕೃತಿ, ಪರಿಸರ ಉಳಿಸಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬರೂ ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ವಿಶೇಷ ಕಾಳಜಿ ವಹಿಸಬೇಕು ಎಂದರು.

ಮಾನವ, ಪ್ರಾಣಿ ಸಂಘರ್ಷದಿಂದ ಮಾನವ ಜೀವಕ್ಕೆ ಹಾನಿ ಆಗುತ್ತಿದೆ. 332 ಕಿ.ಮಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಇನ್ನೂ 100 ಕಿ.ಮೀ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಬದುಕಿಗೆ ಸಂಕಲ್ಪ ಮಾಡಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಪರಿಸರ ಉಳಿಸುವುದು ಬದುಕಿಗೆ ಅನಿವಾರ್ಯವಾಗಿ ಆಗಲೇಬೇಕಾದ ಕೆಲಸ. ಇದನ್ನು ರಾಜೀವ್ ಅವರು ರಾಷ್ಟ್ರೀಯ ಮತ್ತು ಸಾಮಾಜಿಕ ಜವಾಬ್ದಾರಿಯಾಗಿ ಮಾಡುತ್ತಿದ್ದಾರೆ. ಮರಗಳ ಕಡಿತದಿಂದ ಕಾರ್ಬೊಡೈಆಕ್ಸೈಡ್ಪರಿಸರದಲ್ಲಿ ಹೆಚ್ಚಾಗುತ್ತಿದೆ. ಕೈಗಾರಿಕೆ, ವಾಹನಗಳ ಹೊಗೆಯ ಹೆಚ್ಚಳ ಇದಕ್ಕೆ ಕಾರಣ ಎಂದರು.

ನಾವು ಈಗಿಂದಲೇ ಜನಸಂಖ್ಯೆ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಕುಟುಂಬಕ್ಕೆ ಒಂದೇ ಮಗು ಎಂಬ ನಿಯಮ ಜಾರಿ ಆಗದಿದ್ದರೆ ಪರಿಸರ ಸಂರಕ್ಷಣೆ ಕಷ್ಟ. ಮೈಸೂರಿನಲ್ಲಿ ಎಂದೂ ಕೂಡ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿಲ್ಲ. ಈ ಬಗ್ಗೆ ಈಗಲೇ ಎಚ್ಚರವಹಿಸದಿದ್ದರೆ ಆಯಸ್ಸು ಕಡಿಮೆ ಆಗುತ್ತದೆ. ಪರಿಸರ ನಾಶವಾದರೆ ಶೇ. 10ರಷ್ಟು ಬದುಕಿನ ಅವಧಿ ಕಡಿಮೆ ಆಗುತ್ತದೆ ಎಂದು ವಿಶ್ಲೇಷಿಸಿರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರು, ಸಿರಿ ಸಂವರ್ಧನ ಪ್ರಶಸ್ತಿ ಪುರಸ್ಕೃತರಾದ ಬಿಳಿಗಿರಿ ರಂಗನ ಬೆಟ್ಟದ ಸಸ್ಯ ಸಂರಕ್ಷಕ ರಾಮೇಗೌಡ, ಬೆಂಗಳೂರಿನ ಸಸ್ಯ ಸಂವರ್ಧಕ ವಿ. ಶ್ರೀನಿವಾಸರಾಜು ಅವರನ್ನು ಅಭಿನಂದಿಸಿದರು.

ಸಚಿವ ಕೆ. ವೆಂಕಟೇಶ್ ಮಾತನಾಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಹಳೇ ಉಂಡುವಾಡಿ ಯೋಜನೆ ಕಾರ್ಯಗತಗೊಳಿಸಬೇಕು, ಮೈಸೂರಿನಲ್ಲಿ ಕಸವಿಲೇವಾರಿಯನ್ನು ವೈಜ್ಞಾನಿಕವಾಗಿ ನಡೆಸಬೇಕು ಹಾಗೂ ಶಾಲಾ ಪಠ್ಯದಲ್ಲಿಯೇ ಮಕ್ಕಳಿಗೆ ಪರಿಸರದ ಮಹತ್ವದ ಕುರಿತು ತಿಳಿಸುವ ಕೆಲಸ ಆಗಬೇಕು ಎಂಜು ಹೇಳಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮತ್ತು ಕುಂದೂರು ಮಠದ ಡಾ. ಶರತ್ಚಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ತನ್ವೀರ್ಸೇಠ್, ಮುಕ್ತ ವಿವಿ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಇದ್ದರು.

ಗಾಳಿ, ನೀರು, ಭೂಮಿ ಸ್ವಚ್ಛವಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿರಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಪ್ರೀತಿಸಬೇಕು, ಗೌರವಿಸಬೇಕು. ನಾವು ಪ್ರಕೃತಿಯ ಒಂದು ಭಾಗ. ನಾವು ಪ್ರಕೃತಿಗಾಗಿ ಇರಬೇಕೆ ಹೊರತು ನಮಗೊಸ್ಕರ ಪ್ರಕೃತಿ ಇಲ್ಲ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ರಾಜ್ಯ ಸರ್ಕಾರದಿಂದ 5.30 ಕೋಟಿ ಸಸಿ ನೆಡಲಾಗಿದೆ. ಅವುಗಳನ್ನು 10 ವರ್ಷಗಳವರೆಗೆ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗುತ್ತಿದೆ. ಅಲ್ಲದೇ, ಯಾವ ಗಿಡಗಳನ್ನು ಎಲ್ಲೆಲ್ಲಿ ನಡೆಲಾಗಿದೆ. ಅದರ ನಿರ್ವವಣಗೆ ಹೇಗೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಗುವುದು.

- ಈಶ್ವರ್ ಖಂಡ್ರೆ, ಅರಣ್ಯ ಸಚಿವ

Share this article