ಅನಧಿಕೃತ ಹೋಂಸ್ಟೇಗಳಿಗೆ ಮೂಗುದಾರ ಆಗ್ರಹ

KannadaprabhaNewsNetwork |  
Published : Apr 26, 2026, 03:45 AM IST
ಸುದ್ದಿಗೋಷ್ಠಿ | Kannada Prabha

ಸಾರಾಂಶ

ಅನಧಿಕೃತ ಹೋಂಸ್ಟೇಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅನಧಿಕೃತ ಹೋಂಸ್ಟೇಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮನವಿ ಮಾಡಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದ್ದಂತೆಯೇ ಹೋಂಸ್ಟೇಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವುಗಳನ್ನು ಶಿಸ್ತುಬದ್ಧ ವ್ಯವಸ್ಥೆ ಅಡಿಯಲ್ಲಿ ನಡೆಸಲು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ನಿಯಮಾವಳಿಗಳಿದ್ದು, ಅದರ ಪ್ರಕಾರವೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಹೋಂಸ್ಟೇಗಳಿಗೆ ಪರವಾನಗಿ ನೀಡಲಾಗುತ್ತದೆ. ಆದರೆ ಅನಧಿಕೃತ ಹೋಂಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಆಸ್ಪದ ಕೊಡುತ್ತಿವೆ. ಇವುಗಳ ವಿರುದ್ಧ ದೂರುಗಳಿದ್ದರೂ ನಿಯಮಾವಳಿಗಳು ಇಲ್ಲದ ಕಾರಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಅಸಹಾಯಕರಾಗಿದ್ದಾರೆ ಎಂದರು.ಕೊಡಗಿನಲ್ಲಿ 2,478 ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿ ಪರವಾನಗಿ ಪಡೆದುಕೊಂಡು ವ್ಯವಹಾರ ನಡೆಸುತ್ತಿವೆ. ಆದರೆ 2-3 ಸಾವಿರದಷ್ಟು ಹೋಂ ಸ್ಟೇಗಳು ನೋಂದಣಿ ಆಗದೆ ಕಾರ್‍ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಂಸ್ಟೇಗಳ ನೋಂದಣಿಗೆ ಬಳಸುವ ಆ್ಯಪ್‌ನಲ್ಲಿ ಸಮಸ್ಯೆ ಇರುವ ಕಾರಣ ನೋಂದಣಿ ನಿಧಾನ ಆಗುತ್ತಿದೆ. ಆದರೂ ನ್ಯಾಯಬದ್ಧವಾಗಿ ವ್ಯವಹಾರ ನಡೆಸುವ ಉದ್ದೇಶದಿಂದ ಎಲ್ಲ ಹೋಂಸ್ಟೇಗಳೂ ನೋಂದಣಿ ಮಾಡಿಕೊಳ್ಳಬೇಕಾಗಿದೆ. ನೋಂದಣಿಗೆ ನಿಯಮಾವಳಿಗಳು ಇರುವುದರಿಂದ ಹೋಂಸ್ಟೇಗಳಲ್ಲಿ ನಡೆಯುವ ಕಾನೂನು ವಿರೋಧಿ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತದೆ ಎಂದರು.ಕುಟ್ಟ ಗ್ರಾಮದ ಹೋಂಸ್ಟೇ ಒಂದರಲ್ಲಿ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಇಂಥ ಘಟನೆ ಕೊಡಗಿನಲ್ಲಿ ನಡೆಯಬಾರದಿತ್ತು. ಇದು ಹೋಂಸ್ಟೇಗಳಿಗೆ ಎಚ್ಚರಿಕೆಯ ಗಂಟೆ. ಈ ಪ್ರಕರಣದ ಬಗ್ಗೆ ಕೂಲಂಕಶ ತನಿಖೆಯ ಅಗತ್ಯವಿದೆ. ಸಂತ್ರಸ್ತೆಯನ್ನು ಕರೆತಂದ ವಾಹನ ಚಾಲಕನನ್ನೂ ಪೊಲೀಸರು ವಿಚಾರಣೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ನಿಯಮ ಪಾಲನೆ ಕಡ್ಡಾಯ: ನಮ್ಮ ಸಂಘಟನೆಯಲ್ಲಿ ಸದಸ್ಯತ್ವ ಪಡೆಯಬೇಕಾದರೆ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿರಬೇಕು ಮತ್ತು ಸಂಘಟನೆಯ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಈ ಸಂಬಂಧ ಖುದ್ದು ಪರಿಶೀಲನೆ ನಡೆಸಿದ ನಂತರವೇ ಸದಸ್ಯತ್ವ ನೀಡಲಾಗುತ್ತದೆ. ಕುಟ್ಟ ಗ್ರಾಮದ ಹೋಂಸ್ಟೇ ಕೂಡ ನಮ್ಮಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ನಿಯಮಾವಳಿಗಳ ಪ್ರಕಾರವೇ ನಡೆಯುತ್ತಿತ್ತು. ಅದರ ಮಾಲೀಕರ ವಿರುದ್ಧ ದೂರು ದಾಖಲಾದ ಕೂಡಲೇ ಹೋಂ ಸ್ಟೇ ಪರವಾನಗಿ ರದ್ದು ಮಾಡಬಾರದಿತ್ತು. ಅಮಾನತ್ತಿನಲ್ಲಿ ಇಟ್ಟಿದ್ದರೆ ಸಾಕಿತ್ತು ಎಂದು ಹೇಳಿದರು.ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್‍ಯದರ್ಶಿ ಮೀನಾ ಕಾರ್ಯಪ್ಪ, ಮಾಜಿ ಅಧ್ಯಕ್ಷರಾದ ಕೆ.ಎಂ. ಕರುಂಬಯ್ಯ ಹಾಗೂ ಮದನ್ ಸೋಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಮಾನ್‌ನಲ್ಲಿ ತುಂಬೆ ಹೆಲ್ತ್‌ಕೇರ್‌ ಹೈಪರ್‌ಬೇರಿಕ್ ಆಕ್ಸಿಜನ್ ಥೆರಪಿ ಘಟಕ ಉದ್ಘಾಟನೆ
ಪಿವಿಎಸ್‌ ಬಸ್‌ಸ್ಟಾಪ್‌ನಲ್ಲಿ ಕುಡಿವ ನೀರು ಘಟಕಕ್ಕೆ ಶಾಸಕ ಚಾಲನೆ