ಮಡಿಕೇರಿ: ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಮಸೂದೆಯನ್ನು ಸಂವಿಧಾನದ ೯ನೇ ಶೆಡ್ಯೂಲ್‌ಗೆ ಸೇರಿಸಲು ಮಾಜಿ ಸಂಸದರು ಮತ್ತು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಮುಖಂಡ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ೨೦೨೨ರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಎಸ್‌ಸಿ ಮೀಸಲಾತಿಯನ್ನು ಶೇ. ೧೫ರಿಂದ ಶೇ. ೧೭ಕ್ಕೆ ಮತ್ತು ಎಸ್‌ಟಿ ಮೀಸಲಾತಿಯನ್ನು ಶೇ. ೩ರಿಂದ ಶೇ.೭ಕ್ಕೆ ಹೆಚ್ಚಿಸಿತ್ತು. ನಂತರ, ಈ ಮಸೂದೆಯು ಜಾರಿಯಾಗಬೇಕಾದರೆ, ಇದನ್ನು ಸಂವಿಧಾನದ ೯ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೨೫ರಷ್ಟಿರುವ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಂದ ಮತ ಪಡೆದ ಕರ್ನಾಟಕದ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಷಯದಲ್ಲಿ ಮೌನವಾಗಿದ್ದಾರೆ. ವಂಚಿತ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವುದು ಕೇಂದ್ರದ ಜವಾಬ್ದಾರಿಯಾಗಿದೆ. ಬಿಜೆಪಿ ಸರ್ಕಾರವೇ ಈ ಕಾನೂನನ್ನು ಜಾರಿಗೆ ತಂದಿದೆ. ಹಾಗಿದ್ದಲ್ಲಿ ಇದನ್ನು ಒಂಬತ್ತನೇ ಪರಿಚ್ಛೇದಕ್ಕೆ ಸೇರಿಸಲು ಏನು ತೊಂದರೆ ಎಂದು ಪ್ರಶ್ನಿಸಿದರು.ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮೀಸಲಾತಿ ಹೆಚ್ಚಳಕ್ಕೆ ಈಗ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ. ತಮಿಳುನಾಡಿನಲ್ಲಿ ಶೇ. ೬೯ರಷ್ಟು ಮೀಸಲಾತಿಯನ್ನು ಸಂವಿಧಾನದ ೯ನೇ ಪರಿಚ್ಛೇದದಲ್ಲಿ ಸೇರಿಸಿ ರಕ್ಷಣೆ ಪಡೆಯಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ಶೇ. ೫೬ರಷ್ಟು ಮೀಸಲಾತಿಯನ್ನು ರಕ್ಷಿಸಬೇಕಿತ್ತು. ಆದರೆ, ಆ ಕೆಲಸ ಆಗದ ಕಾರಣ ಇಂದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಬದುಕು ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವಿಷಯದ ಬಗ್ಗೆ ಚರ್ಚಿಸಲು ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಿಯೋಗವನ್ನು ಕರೆದೊಯ್ಯಬೇಕು ಎಂದು ಒತ್ತಾಯಿಸಿದರು.ಮೀಸಲಾತಿ ಎಂಬುದು ಯಾರದೋ ಭಿಕ್ಷೆಯಲ್ಲ. ಅದು ಶೋಷಿತ ಸಮುದಾಯಗಳ ಸಂವಿಧಾನಬದ್ಧ ಹಕ್ಕು. ಅಲ್ಲದೆ ಮೀಸಲಾತಿ ಯಾರ ಅಪ್ಪನ ಸೊತ್ತಲ್ಲ ಎಂದು ಕಿಡಿಕಾರಿದ ಅವರು, ಮತ ಪಡೆದು ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಸಮಾಜದ ಹಕ್ಕುಗಳನ್ನು ಒದಗಿಸಬೇಕು. ಅಲದೆ ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮೀಸಲಾತಿಯನ್ನು೯ನೇ ಅನುಸೂಚಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಕಾರ್ಯಾಧ್ಯಕ್ಷ ಎಂ. ನರಸಿಂಹಯ್ಯ, ಪ್ರದಾನ ಕಾರ್ಯದರ್ಶಿ ಜಯಶ್ರೀ, ಖಜಾಂಚಿ ಈ. ರಾಜಪ್ಪ, ಕೊಡಗು ಜಿಲ್ಲಾ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎ. ಅಶೋಕ್, ಪ್ರಮುಖರಾದ ಎಸ್. ಸಿದ್ದಪ್ಪ ಇದ್ದರು.