ಸೋಲು ಗೆಲುವಿನ ಅವಿಭಾಜ್ಯ ಒಡನಾಡಿಯಾಗಿದ್ದು, ವಿದ್ಯಾರ್ಥಿಗಳು ಸೋಲೆ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯಬೇಕು.
ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿಗಳ ಜೀವನದಲ್ಲಿ ನಿಜವಾದ ಯಶಸ್ಸಿಗೆ ಜ್ಞಾನದಷ್ಟೇ ಜೀವನ ಮೌಲ್ಯಗಳು ಮುಖ್ಯ ಎಂದು ಸಿಐಡಿ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಮಹಾ ನಿರ್ದೇಶಕ ಡಾ. ಪ್ರಣವ್ ಮೊಹಾಂತಿ ಅಭಿಪ್ರಾಯಪಟ್ಟರು.ನಗರದ ಸರಸ್ವತಿಪುರಂನ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 19ನೇ ಪದವೀಧರರ ದಿನಾಚರಣೆಯಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಾಂತ್ರಿಕ ಬೆಳವಣಿಗೆಯಲ್ಲಿ ನಿರಂತರವಾಗಿ ತಮ್ಮನ್ನು ನವೀಕರಿಸಿಕೊಳ್ಳಬೇಕು. ಶಿಕ್ಷಣವನ್ನು ಸಮಾಜದ ಹಿತಕ್ಕಾಗಿ ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಮೌಲ್ಯ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.ಸೋಲು ಗೆಲುವಿನ ಅವಿಭಾಜ್ಯ ಒಡನಾಡಿಯಾಗಿದ್ದು, ವಿದ್ಯಾರ್ಥಿಗಳು ಸೋಲೆ ಗೆಲುವಿನ ಮೆಟ್ಟಿಲು ಎಂಬುದನ್ನು ಅರಿಯಬೇಕು. ಪ್ರತಿಭೆಗೆ ನಿರಂತರ ಪರಿಶ್ರಮ ಮತ್ತು ಬದ್ಧತೆ ಇದ್ದಾಗ ಮಾತ್ರ ಯಶಸ್ಸು ಎಂಬುದು ದೊರೆಯುತ್ತದೆ. ವಿದ್ಯಾರ್ಥಿಗಳ ಶಿಸ್ತುಬದ್ಧ ಕಲಿಕೆ, ನೈತಿಕ ಮೌಲ್ಯಗಳು ಹಾಗೂ ಮಹಿಳಾ ಸಬಲೀಕರಣವು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನೂತನ ಪದವೀಧರರಾದ ಪದ್ಮಪ್ರಿಯ, ಸಹನಾ, ಎಂ. ಲಿಖಿತಾ, ಐಶ್ವರ್ಯ, ಬಿ.ಎಸ್. ಪ್ರಗತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಪದವಿ ಪಡೆದ 492 ವಿದ್ಯಾರ್ಥಿನಿಯರಲ್ಲಿ 15 ವಿದ್ಯಾರ್ಥಿನಿಯರು ಪದಕ ಹಾಗೂ ನಗದು ಬಹುಮಾನ ಪಡೆದರು. 306 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 186 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ನಾತಕೋತ್ತರ ವಿಭಾಗದ 37 ವಿದ್ಯಾರ್ಥಿನಿಯರಲ್ಲಿ 6 ವಿದ್ಯಾರ್ಥಿನಿಯರು ಪದಕ ಹಾಗೂ ನಗದು ಬಹುಮಾನ ಪಡೆದರು.14 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ, 23 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ಸುಮಾ ಅವರು ಜೆಎಸ್ಎಸ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ಕೈಗೊಂಡು ಪಿಎಚ್.ಡಿ ಪದವಿ ಪಡೆದರು.ವೇದಿಕೆಯಲ್ಲಿ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ, ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ. ಸ್ವಾಮಿ ಇದ್ದರು.ಧಾತ್ರಿ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ. ರೇಚಣ್ಣ ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್ ವಂದಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜೆ. ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.