ಮಡಿಕೇರಿ: ರಾಜ್ಯ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನತೆಗೆ ಮಾಡಿದ ಅನ್ಯಾಯ ಎಂದು ಕೊಡಗು ಗೌಡ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಪಿ.ಎಲ್.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ತಮಿಳುನಾಡಿಗೆ ನೀರುಣಿಸುವ ಪ್ರಮುಖ ಜಿಲ್ಲೆಯಾಗಿರುವ ಕೊಡಗಿಗೆ ಸಚಿವ ಸ್ಥಾನ ನೀಡದಿರುವುದು ಬೇಸರದ ಸಂಗತಿ ಎಂದ ಅವರು, ಕೊಡಗಿನಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದರೆ ಸಚಿವ ಸ್ಥಾನ ನೀಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಕೊಡಗಿಗೆ ಮೂರು ಸಚಿವ ಸ್ಥಾನಗಳು ದೊರೆತಿದ್ದವು. ಬಳಿಕ ಅಪ್ಪಚ್ಚು ರಂಜನ್ ಅವರಿಗೆ ಕೆಲ ತಿಂಗಳುಗಳ ಕಾಲ ಸಚಿವ ಸ್ಥಾನ ಲಭಿಸಿತ್ತು. ಆದರೆ, ಈಗ ಹೊರಜಿಲ್ಲೆಯ ಸಚಿವರು ಸಭೆ ಹಾಗೂ ಕಾರ್ಯಕ್ರಮಗಳಿಗೆ ಬಂದು ಹೋಗುವುದಷ್ಟೇ ಆಗುತ್ತಿದ್ದು, ಜಿಲ್ಲೆಗೆ ಯಾವುದೇ ವಿಶೇಷ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.ಜಿಲ್ಲೆಯನ್ನು ನಿರಂತರವಾಗಿ ನಿರ್ಲಕ್ಷಿಸಿದರೆ ಜನರು ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸಚಿವ ಸ್ಥಾನ ನೀಡಲು ಸಾಧ್ಯವಾಗದಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿ, ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ಮೂರು ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯ: ಸಮಿತಿಯ ಅಧ್ಯಕ್ಷ ಪರ್ಮಾಲೆ ಗಣೇಶ್ ಮಾತನಾಡಿ, ಮೂರು ಪ್ರಮುಖ ರಾಜಕೀಯ ಪಕ್ಷಗಳೂ ಕೊಡಗು ಜಿಲ್ಲೆಯನ್ನು ನಿರಂತರವಾಗಿ ನಿರ್ಲಕ್ಷಿಸಿವೆ. ಆನೆಮಾನವ ಸಂಘರ್ಷ, ಕಸ್ತೂರಿ ರಂಗನ್ ವರದಿ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗೆ ಸಚಿವ ಸ್ಥಾನ ಇದ್ದಿದ್ದರೆ ಸರ್ಕಾರದ ಮಟ್ಟದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿತ್ತು. ಇದರಿಂದ ಜಿಲ್ಲೆಯ ಅಭಿವೃದ್ಧಿಗೂ ಪೂರಕವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಪೂಜಾರಿರ ಪ್ರದೀಪ್ ಕುಮಾರ್, ಖಜಾಂಚಿ ಪಟ್ಟಡ ದೀಪಕ್, ಸಹ ಕಾರ್ಯದರ್ಶಿ ಡೆಮ್ಮಲೆ ರಿತಿನ್, ಸದಸ್ಯೆ ಕೊಂಬಾಡಿ ಮೋಹಿನಿ ಹಾಜರಿದ್ದರು.
ಸಚಿವ ಸ್ಥಾನ ಭರವಸೆ ಈಡೇರಿಸದ ಕಾಂಗ್ರೆಸ್: ಸುರೇಶ್ ಆರೋಪ
: ರಾಜ್ಯ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನತೆಗೆ ಮಾಡಿದ ಅನ್ಯಾಯ ಎಂದು ಕೊಡಗು ಗೌಡ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಪಿ.ಎಲ್.ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.