ಶೋಷಿತರ ಸಮಾವೇಶಕ್ಕೆ ಶಕ್ತಿ ಪ್ರದರ್ಶನ ಅಗತ್ಯ

KannadaprabhaNewsNetwork |  
Published : Jan 25, 2024, 02:03 AM IST
ಚಿತ್ರದುರ್ಗ ಪೋಟೋ ಸುದ್ದಿ | Kannada Prabha

ಸಾರಾಂಶ

ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಶೋಷಿತ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಎಲ್ಲರೂ ಸಮುದಾಯದ ಸ್ವಾಭಿಮಾನ ಪ್ರದರ್ಶಿಸುವುದರ ಮೂಲಕ ಸಮಾವೇಶ ಯಶಸ್ಸಿಗೆ ಕಾರಣವಾಗಬೇಕು.

ಚಿತ್ರದುರ್ಗ: ಜ.28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಶೋಷಿತ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದು, ಎಲ್ಲರೂ ಸಮುದಾಯದ ಸ್ವಾಭಿಮಾನ ಪ್ರದರ್ಶಿಸುವುದರ ಮೂಲಕ ಸಮಾವೇಶ ಯಶಸ್ಸಿಗೆ ಕಾರಣವಾಗಬೇಕೆಂದು ಕಾಂಗ್ರೆಸ್ ಮುಖಂಡ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಮನವಿ ಮಾಡಿದರು.

ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಶಕ್ತಿ ಪ್ರದರ್ಶಿಸಬೇಕಿದೆ. 25 ರಂದು ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಕಚೇರಿಯಿಂದ ಬೈಕ್ ರ್ಯಾಲಿ ಹೊರಟು ನಗರದಲ್ಲೆಲ್ಲಾ ಸಂಚರಿಸಲಿದೆ. ಕನಿಷ್ಟ ಐದು ನೂರು ಬೈಕ್‍ಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು. ಕಾಂತರಾಜು ಆಯೋಗದ ವರದಿ ಜಾರಿಗೆ ಮುಂದಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೆಂಬಲವಾಗಿ ನಿಲ್ಲೋಣ. ಒಳಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದರಿಂದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಯನ್ನು ಸನ್ಮಾನಿಸೋಣ ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಕೋರಿದರು.

ಜ.27 ರಂದು ಮತ್ತೆ ಬೈಕ್ ರ್ಯಾಲಿ ನಡೆಸಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವಂತೆ ಅರಿವು ಮೂಡಿಸೋಣ. ಮೊಳಕಾಲ್ಮುರುವನಿಂದ ಬಿ.ಜಿ.ಕೆರೆಗೆ ಪಾದಯಾತ್ರೆ ಆರಂಭಿಸಲಾಗಿದ್ದು ದಿನಕ್ಕೆ ಹದಿನೈದು ಕಿಮೀ ನಡೆದು ಒಂದು ದಿನ ವಿಶ್ರಾಂತಿ ಪಡೆದು ನಾಯಕನಹಟ್ಟಿಗೆ ಪಾದಯಾತ್ರೆ ಹೋಗಲಿದೆ. ಐಮಂಗಲ ಹೋಬಳಿ, ಪರಶುರಾಂಪುರ, ಧರ್ಮಪುರ, ಹೊಳಲ್ಕೆರೆ, ಹೊಸದುರ್ಗದಲ್ಲಿ ಪಾದಯಾತ್ರೆ ನಡೆಸಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸ್ಥಳೀಯ ಸ್ಪರ್ಧಾಕಾಂಕ್ಷಿ ನನಗೆ ಟಿಕೇಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯಿಸೋಣ ಎಂದು ಹೇಳಿದರು.

ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್ ಮಾತನಾಡಿ ಇಲ್ಲಿಯವರೆಗೂ ಹೊರಗಿನವರೆ ಬಂದು ಚಿತ್ರದುರ್ಗದಲ್ಲಿ ಗೆದ್ದುಕೊಂಡು ಪಾರ್ಲಿಮೆಂಟ್‍ಗೆ ಪ್ರವೇಶಿಸುತ್ತಿದ್ದಾರೆ. ಈ ಬಾರಿ ಅದಕ್ಕೆ ಅವಕಾಶ ನೀಡುವುದು ಬೇಡ. ಚಿತ್ರದುರ್ಗ ಜಿಲ್ಲೆ ಸಮಗ್ರವಾಗಿ ಅಭಿವೃದ್ದಿಯಾಗಬೇಕಾಗಿರುವುದರಿಂದ ಸ್ಥಳೀಯರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಯವರಿಗೆ ಕಾಂಗ್ರೆಸ್ ಟಿಕೇಟ್ ನೀಡುವಂತೆ ಎಲ್ಲಾ ಕಡೆ ಕೂಗು ಕೇಳಿ ಬರುತ್ತಿದೆ. ಚುನಾವಣೆ ಬಂದಾಗ ಮಾತ್ರ ಹೊರಗಿನವರು ಇಲ್ಲಿಗೆ ಬಂದು ಮತ ಪಡೆದು ಪಾರ್ಲಿಮೆಂಟ್ ಸದಸ್ಯರುಗಳಾಗುತ್ತಿದ್ದಾರೆ. ಇಂತಹ ಪರಿಪಾಠ ನಿಲ್ಲಬೇಕು. ಅದಕ್ಕಾಗಿ ಡಾ.ಬಿ.ತಿಪ್ಪೇಸ್ವಾಮಿರವರಿಗೆ ಬೆಂಬಲವಾಗಿ ನಿಲ್ಲೋಣ ಎಂದರು.

ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ಜಿಲ್ಲೆಯಾದ್ಯಂತ ಪ್ರತಿ ತಾಲೂಕಿನಲ್ಲಿ ಬೈಕ್‍ರ್ಯಾಲಿ, ಪಾದಯಾತ್ರೆ ನಡೆಸಿ ಸ್ಥಳೀಯರಾದ ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿಗೆ ಟಿಕೇಟ್ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಬೇಕಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಸ್ಥಳೀಯರಿಗೆ ಟಿಕೇಟ್ ಸಿಗಬೇಕೆಂಬ ನಮ್ಮ ಬೇಡಿಕೆ ಹೈಕಮಾಂಡ್‍ಗೆ ಮುಟ್ಟುವ ರೀತಿಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚೌಳೂರು ಪ್ರಕಾಶ್, ತುರುವನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಡಿ.ಆರ್.ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಮಂಜುನಾಥ್, ಕಿರಣ್‍ಯಾದವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಿರೇಗುಂಟನೂರು ಶಿವಣ್ಣ, ರಾಜುಯಾದವ್, ರಾಜಶೇಖರ್, ಮಲ್ಲೇಶ್, ಬಿ.ರಾಜಣ್ಣ ಇನ್ನು ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ