ದೌರ್ಜನ್ಯದ ವಿರುದ್ಧ ದನಿ ಎತ್ತಲು ಮಹಿಳೆಗೆ ಶಕ್ತಿ ಕೊಡಿ

KannadaprabhaNewsNetwork |  
Published : Jan 25, 2024, 02:03 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಸಮಾಜದಲ್ಲಿ ಎಲ್ಲರೆದುರು ಸಮಾನವಾಗಿ ನಿಲ್ಲುವಂತೆ ಮಾಡಬೇಕು. ಆಕೆ ಗೌರವಯುತವಾಗಿ ಬದುಕಲು. ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ಶಕ್ತಿ ತುಂಬುವ ಕಾರ್ಯ ಮಾಡಬೇಕೆಂದು

ಚಿತ್ರದುರ್ಗ: ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಸಮಾಜದಲ್ಲಿ ಎಲ್ಲರೆದುರು ಸಮಾನವಾಗಿ ನಿಲ್ಲುವಂತೆ ಮಾಡಬೇಕು. ಆಕೆ ಗೌರವಯುತವಾಗಿ ಬದುಕಲು. ದೌರ್ಜನ್ಯದ ವಿರುದ್ಧ ಧ್ವನಿಯೆತ್ತಲು ಶಕ್ತಿ ತುಂಬುವ ಕಾರ್ಯ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ನಗರದ ಕಬೀರಾನಂದಾಶ್ರಮದಲ್ಲಿ ಬುಧವಾರ ಆಯೋಜಿಸಲಾದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆ ಪಾಸ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನಸಿಕವಾಗಿ ಸದೃಢರಾಗಿ ಇರುವಂತೆ ಹೆಣ್ಣುಮಕ್ಕಳನ್ನು ಬೆಳೆಸಬೇಕು ಎಂದರು.

ಹೆಣ್ಣು ಮಕ್ಕಳು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕಿ, ನರ್ಸ್, ಬಸ್ ಕಂಡಕ್ಟರ್, ಪೊಲೀಸ್, ವಿಜ್ಞಾನಿ, ಪೈಲೆಟ್, ಕೈಗಾರಿಕೋದ್ಯಮಿ, ಆಡಳಿತ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಮೂಲಕ ಮುಂಚೂಣಿಯಲ್ಲಿ ಇದ್ದಾರೆ. ಇದರೊಂದಿಗೆ ದೇಶದ ರಕ್ಷಣೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ರಂಗದಲ್ಲೂ ಹೆಣ್ಣು ಮಕ್ಕಳ ಸಾಧನೆ ಅಪಾರವಾಗಿದೆ. ಮಹಿಳೆಯರ ಕಾರ್ಯವ್ಯಾಪ್ತಿ ಇಲ್ಲದೇ ಇರುವ ಯಾವುದೇ ಕ್ಷೇತ್ರಗಳು ದೇಶದಲ್ಲಿ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಪಾತ್ರವಿದೆ ಎಂದರು.

ಈ ಹಿಂದೆ ಮಹಿಳೆಯರನ್ನು ಅಬಲೆಯಾಗಿ ನೋಡುತ್ತಿದ್ದರು. ಮಹಿಳೆಗೆ ಪುರುಷನೊಬ್ಬ ಆಧಾರವಾಗಿ ಇರಬೇಕು ಎಂದು ಭಾವಿಸಿದ್ದರು. ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ತಂದೆ, ಮಗಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಮದುವೆ ಮಾಡುವುದು ಹೇಗೆ ಎಂದು ಚಿಂತಿಸುತ್ತಿದ್ದರು. ಆದರೆ ಈಗಿನ ಸಮಾಜ ಬದಲಾಗಿದೆ. ಈಗ ಹೆಣ್ಣುಮಕ್ಕಳು ಹುಟ್ಟದಿದ್ದರೆ ಕೊನೆಗಾಲದಲ್ಲಿ ನಮ್ಮನ್ನು ನೋಡಿಕೊಳ್ಳುವ ಮಹಾಲಕ್ಷ್ಮೀ ಹುಟ್ಟಲಿಲ್ಲ ಎಂದು ಚಿಂತಿಸುವಂತಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಲಾಗಿದೆ. ಜಗತ್ತು ರಕ್ಷಿಸುವ ಆದಿಶಕ್ತಿಯಾಗಿ ಹೆಣ್ಣನ್ನು ಬಿಂಬಿಸಲಾಗಿದೆ. ಜಗತ್ತಿಗೆ ಸಂಕಟ ಬಂದಾಗ ಆದಿಶಕ್ತಿ ಕಾಪಾಡುತ್ತಾಳೆ ಎನ್ನುವ ಭಕ್ತಿ ನಮ್ಮಲ್ಲಿದೆ. ಹೆಣ್ಣು ಮಕ್ಕಳು ಅಬಲೆಯರಲ್ಲ ಎಂಬುದಕ್ಕೆ ಚಿತ್ರದುರ್ಗ ಶತ್ರಗಳಿಂದ ರಕ್ಷಿಸಿದ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸಾಕ್ಷಿಯೆಂದು ಕೆ.ಎಸ್.ನವೀನ್ ಹೇಳಿದರು.

ಕಬೀರಾನಂದಾಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಮಹಾಸ್ವಾಮಿ ಮಾತನಾಡಿ, ಹೆಣ್ಣು ಮಕ್ಕಳು ನಮಗೆ ಭಾರವಲ್ಲ. ನಮಗೆ ಮಾರ್ಗದರ್ಶಕರು. ದೇಶದ ಎಲ್ಲಾ ಪ್ರಮುಖ ನದಿಗಳಿಗೆ ಹೆಣ್ಣು ಮಕ್ಕಳ ಹೆಸರು ಇಟ್ಟಿದ್ದಾರೆ. ನೀರು ಇಲ್ಲದೆ ಹೋದರೆ ಜೀವ ಇಲ್ಲ. ಹಾಗೇ ಹೆಣ್ಣು ಮಕ್ಕಳು ಇಲ್ಲದೇ ಮಾನವ ಸಮಾಜಕ್ಕೆ ಅಸ್ತಿತ್ವವೇ ಇಲ್ಲ. ಮಮತೆ, ಕರುಣೆ ಹಾಗೂ ಪ್ರೀತಿಯಿಂದ ಹೆಣ್ಣುಮಕ್ಕಳು ಬೆಳಸಿದರೆ ಅವರು ಸಮಾಜ ಕಣ್ಣಾಗುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಲ್ಲಾ ರಂಗದಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನ ರೀತಿಯಲ್ಲಿ ಬೆಳೆಸಬೇಕು. ಶಿಕ್ಷಣ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಹೆಣ್ಣು ಮಕ್ಕಳಿಗೆ ನೀಡಿದರೆ, ಅವರೂ ಸಹ ಉತ್ತಮ ಸಾಧನೆ ತೋರುತ್ತಾರೆ ಎಂದರು. 2023-24ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧರಣ ಸಾಧನೆ ಮಾಡಿದ ಮಕ್ಕಳು ಸನ್ಮಾನಿಸಲಾಯಿತು.

ತಾರ್ಕಿಕ ಸಾಧನೆಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಚಿತ್ರದುರ್ಗದ ಎಚ್.ಎಸ್.ಜಯಂತ್, ಪೃಥ್ವಿ ಕೆ.ಸಿ, ನ್ಯಾವಿನ್ಯತಾ ವಿಭಾಗದಲ್ಲಿ ಹಿರಿಯೂರಿನ 10ನೇ ತರಗತಿ ವಿದ್ಯಾರ್ಥಿನಿ ರಮ್ಯಾ.ಜಿ.ಆರ್, ಚಿತ್ರದುರ್ಗದ ಪ್ರಥಮ ಪಿಯು ವಿದ್ಯಾರ್ಥಿ ಮೊಹಮ್ಮದ್ ಸಫ್ವಾನ್ ಖಾನ್, ಕಲೆ ಸಾಂಸ್ಕೃತಿಕ ಮತ್ತು ಸಂಗೀತ ವಿಭಾಗದಲ್ಲಿ ಚಿತ್ರದುರ್ಗದ ದ್ವಿತೀಯ ಪಿಯು ವಿದ್ಯಾರ್ಥಿನಿ ಸಿಂಧು ಎಸ್.ಬಿ, 9ನೇ ತರಗತಿ ವಿದ್ಯಾರ್ಥಿ ಕೆಪಿಎಂ ಗುರುದೇವ, ಕ್ರೀಡಾ ವಿಭಾಗದಲ್ಲಿ ಚಿತ್ರದುರ್ಗದ 9ನೇ ತರಗತಿ ವಿದ್ಯಾರ್ಥಿನಿ ಪದ್ಮಾವತಿ.ಪಿ, ದ್ವಿತೀಯ ಪಿಯು ವಿದ್ಯಾರ್ಥಿ ಲವ.ಟಿ.ವಡಕಲ್ ಅವರನ್ನು ತಲಾ 10 ಸಾವಿರ ರು. ನಗದು ಪುರಸ್ಕಾರ ದೊರಕಿದೆ.

2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿಯರಾದ ಹಿರಿಯೂರು ತಾಲೂಕಿನ ದಯಾನಿಧಿ ಎಸ್.ಪಿ, ಚಳ್ಳಕೆರೆ ತಾಲೂಕಿನ ಸಾಯಿ ಸಂಕೀರ್ತನಾ.ಎಸ್, ಹೊಳಲ್ಕೆರೆ ತಾಲೂಕಿನ ರಕ್ಷಾ ಟಿ.ಬೆಲಗೂರ್, ಚಿತ್ರದುರ್ಗ ತಾಲೂಕಿನ ಸಹನಾ.ಜಿ, ಮೊಳಕಾಲ್ಮೂರು ತಾಲೂಕಿನ ಉಷಾ.ಎನ್ ಅವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಫಲಾನುಭವಿಗಳಿಗೆ ಅಂಚೆ ಪಾಸ್ ಬುಕ್ ಹಾಗೂ ಯೋಜನೆ ಮಂಜೂರಾತಿ ಪತ್ರವನ್ನು ನೀಡಲಾಯಿತು.

ಬಾಲ ನ್ಯಾಯ ಮಂಡಳಿ ಸದಸ್ಯೆ ಸುಮನ ಎಸ್.ಅಂಗಡಿ ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಸ್ವಾಗತಿಸಿದರು. ತಹಸೀಲ್ದಾರ್ ಡಾ.ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಪವಿತ್ರಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಶಿಶು ಅಭಿವೃದ್ಧಿ ಅಧಿಕಾರಿ ಎನ್.ಸುಧಾ, ವಿ.ಮಂಜುಳ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು