ಪಿ.ಎಸ್. ಪಾಟೀಲ
ಗ್ರಾಮೀಣ ಭಾಗದ ಸಮಸ್ಯೆಗಳನ್ನು ಹತ್ತಿರದಿಂದ ಕಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜಕೀಯವನ್ನು ಸೇವೆಯ ಸಾಧನವಾಗಿ ಬಳಸಿಕೊಂಡಿರುವ ಅವರ ಪಯಣದಲ್ಲಿ ರೋಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹಲವು ಅಧ್ಯಾಯಗಳು ದಾಖಲಾಗಿವೆ.
1983ರಲ್ಲಿ ರೋಣ ಪಟ್ಟಣ ಪಂಚಾಯಿತಿ ಹಾಗೂ ಸವಡಿ ಎಪಿಎಂಸಿ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಜಿ.ಎಸ್. ಪಾಟೀಲರು ರಾಜಕೀಯ ಪ್ರವೇಶಿಸಿದರು. ಬಳಿಕ 1989ರಲ್ಲಿ ರೋಣ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 29 ಸಾವಿರ ಮತಗಳ ಅಂತರದಿಂದ ಗೆದ್ದು ಮತ್ತೊಮ್ಮೆ ಶಾಸಕರಾದದ್ದು ಅವರ ರಾಜಕೀಯ ಜನಪ್ರಿಯತೆಗೆ ಸಾಕ್ಷಿಯಾಯಿತು.ಅಭಿವೃದ್ಧಿಯೇ ರಾಜಕೀಯದ ಧ್ಯೇಯ: ಜಿ.ಎಸ್. ಪಾಟೀಲರ ರಾಜಕೀಯ ಪಯಣದಲ್ಲಿ ರೋಣ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದು ಅವರ ಸಾಧನೆಗಳ ಪಟ್ಟಿಯಿಂದ ಸ್ಪಷ್ಟವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್, ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಕೃಷಿ, ರಸ್ತೆ ಹಾಗೂ ಸೇತುವೆ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಕೃಷಿ ಹಾಗೂ ನೀರಾವರಿಗೆ ಬಲ: ನರೇಗಲ್, ಕಣಗಿನಹಾಳ ಹಾಗೂ ಗಜೇಂದ್ರಗಡ ಭಾಗಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣ, ಮಲಪ್ರಭಾ ಬಲದಂಡೆ ಕಾಲುವೆಯನ್ನು ವಿಸ್ತರಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ರೋಣ ಭಾಗದಲ್ಲಿ 4 ಸಾವಿರ ಟನ್ ಸಾಮರ್ಥ್ಯದ ಬೃಹತ್ ಉಗ್ರಾಣ ನಿರ್ಮಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 10 ಸಾವಿರ ಟನ್ ಧಾನ್ಯ ಸಂಗ್ರಹ ಸಾಮರ್ಥ್ಯದ 16 ಉಗ್ರಾಣಗಳನ್ನು ಸ್ಥಾಪಿಸಿದ್ದಾರೆ.
ಡಿಪಿಇಪಿ ಯೋಜನೆಯಡಿ ರೋಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಒಟ್ಟು 85 ಶಾಲಾ ಕೊಠಡಿಗಳು, ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರ್, ವಿದ್ಯುತ್ ಹಾಗೂ ಇತರ ಮೂಲ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸಲು ವಿವಿಧ ಕಡೆ ವಸತಿನಿಲಯಗಳ ನಿರ್ಮಾಣಕ್ಕೂ ಆದ್ಯತೆ ನೀಡಿದ್ದಾರೆ.
ಬರಗಾಲದಲ್ಲೂ ಜನರ ಕೈ ಹಿಡಿದ ನಾಯಕ: ಬರಗಾಲದ ಸಂದರ್ಭಗಳಲ್ಲಿ ಜನರಿಗೆ ಉದ್ಯೋಗ ಮತ್ತು ನೀರಿನ ಸೌಲಭ್ಯ ಒದಗಿಸುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಜಿ.ಎಸ್. ಪಾಟೀಲರ ಸಾಧನೆಗಳ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣುತ್ತದೆ. ಹಲವು ಗ್ರಾಮಗಳಲ್ಲಿ ಹೊಸ ಕೆರೆಗಳ ನಿರ್ಮಾಣದ ಮೂಲಕ ರೈತ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದರ ಜತೆಗೆ ಬರದ ಸಂಕಷ್ಟದಿಂದ ಬಳಲುತ್ತಿದ್ದ ಗ್ರಾಮೀಣ ಜನರಿಗೆ ನೆರವು ನೀಡಿದ್ದಾರೆ.
ಅಧಿಕಾರಕ್ಕಿಂತ ಅಭಿವೃದ್ಧಿ ಮತ್ತು ರಾಜಕೀಯಕ್ಕಿಂತ ಜನಸೇವೆ ಎಂಬ ಧೋರಣೆಯೊಂದಿಗೆ ಸಾಗಿದ ಜಿ.ಎಸ್. ಪಾಟೀಲರ ನಾಲ್ಕು ದಶಕಗಳ ಸಾರ್ವಜನಿಕ ಬದುಕು, ರೋಣದ ಅಭಿವೃದ್ಧಿಯ ಹಲವು ಮೈಲಿಗಲ್ಲುಗಳೊಂದಿಗೆ ಗುರುತಿಸಿಕೊಂಡಿರುವ ಪಯಣವಾಗಿದೆ.ಭವ್ಯ ಸ್ವಾಗತಕ್ಕೆ ಸಿದ್ಧತೆ...
ಆ. 22ರಂದು ಬೆಳಗ್ಗೆ ಹೊಸಪೇಟೆ ಮೂಲಕ ರೋಣ ಕ್ಷೇತ್ರದ ಗಜೇಂದ್ರಗಡಕ್ಕೆ ಆಗಮಿಸಲಿದ್ದು, ಅಲ್ಲಿ ಕಾರ್ಯಕರ್ತರು ಸ್ವಾಗತ ಕೋರಲಿದ್ದಾರೆ. ನಂತರ ಅಲ್ಲಿಂದ ರಾಜೂರು, ಸೂಡಿ, ಹೊಸಳ್ಳಿ ಮೂಲಕ ರೋಣ ಪಟ್ಟಣಕ್ಕೆ ಆಗಮಿಸಲಿದ್ದಾರೆ. ರೋಣದ ಶಿವಾನಂದ ಮಠದಿಂದ ಅದ್ಧೂರಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಿದ್ದು, ಪಟ್ಟಣದ ಸೂಡಿ ಕ್ರಾಸ್‌ನಲ್ಲಿ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಭವ್ಯ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಂತರ ಸಭಾಧ್ಯಕ್ಷರಾಗಿ ಆಯ್ಕೆಯಾಗಲು ಕಾರಣಿಕರ್ತರಾದ ಮತಕ್ಷೇತ್ರದ ನಾಗರಿಕರಿಗೆ ಜಿ.ಎಸ್. ಪಾಟೀಲರು ಕೃತಜ್ಞತೆ ಸಲ್ಲಿಸಲಿದ್ದಾರೆ.