ಶಾಸಕ ಕೆ.ಎಸ್.ಆನಂದ್
ಕ್ಷೇತ್ರದ 14,700 ಕುಟುಂಬಗಳಿಗೆ ಇ-ಸೊತ್ತು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ 3 ಸಾವಿರ ಮನೆಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು. ಕ್ಷೇತ್ರದ ಸಣ್ಣೇನಹಳ್ಳಿ ಗ್ರಾಮದಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಕಂದಾಯ ಗ್ರಾಮಗಳಿಗೆ ಹಕ್ಕುಪತ್ರ ಮತ್ತು ಇ-ಸೂತ್ತು ವಿತರಣೆಯಲ್ಲಿ ಗ್ರಾಮದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಂದಾಯ ಇಲಾಖೆಯಿಂದ ದಾಖಲೆ ರಹಿತ ಕುಟುಂಬಗಳಿಗೆ ಅಗತ್ಯ ದಾಖಲೆ ಒದಗಿಸಿಕೊಡಲು 94 ಡಿ ಅಡಿ ಮನೆಯ ಹಕ್ಕುಪತ್ರದ ಜೊತೆ ಇ-ಸೊತ್ತು ದೊರಕಿಸಿಕೊಟ್ಟು ಗ್ಯಾರಂಟಿ ಬದುಕನ್ನು ಕಟ್ಟಿಕೊಡಲಾಗುತ್ತಿದೆ. ಈಗಾಗಲೇ ಕ್ಷೇತ್ರದ ಜನವಸತಿ ಪ್ರದೇಶಗಳ ದೊಡ್ಡ ದೊಡ್ಡ ಗ್ರಾಮಗಳು ಇಂದಿಗೂ ಕಂದಾಯ ಗ್ರಾಮದ ವ್ಯಾಪ್ತಿಗೆ ಒಳಪಡದೆ ದಾಖಲೆ ರಹಿತವಾಗಿರುವುದನ್ನು ಗುರುತಿಸಿ ದಿಟ್ಟ ನಿರ್ಧಾರ ಕೈಗೊಂಡು ಮೂಲಕ 240 ಕಂದಾಯ ಮತ್ತು ಉಪ ಗ್ರಾಮಗಳನ್ನು ರಚಿಸಲಾಗಿದೆ. 131 ಗ್ರಾಮಗಳು ಪ್ರಸ್ತಾವನೆ ಹಂತದಲ್ಲಿದ್ದು, 109 ಗ್ರಾಮಗಳಿಗೆ ಕಂದಾಯ ಗ್ರಾಮವಾಗಿಸಲು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು. ಉಡುಗೆರೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಸಣ್ಣೇನಹಳ್ಳಿ ಗ್ರಾಮದ ಬಹುತೇಕ ಜನರು ದಾಖಲೆ ರಹಿತವಾಗಿ ಗುರುತಿಸಿ ಕೊಂಡಿದ್ದು, ಗ್ರಾಮದಲ್ಲಿನ 103 ಫಲಾನುಭವಿಗಳಲ್ಲಿ 89 ಮನೆಗಳಿಗೆ ಹಕ್ಕುಪತ್ರ ಮತ್ತು ಇ-ಸೊತ್ತು ವಿತರಣೆ ಮಾಡಲಾಗುತ್ತಿದೆ. ಉಳಿದ 12 ಫಲಾನುಭವಿಗಳಿಗೆ ತಾಂತ್ರಿಕ ತೊಡಕು ಮತ್ತು ಕಂದಾಯ ಬಾಕಿಯನ್ನು ಫಲಾನುಭವಿಗಳು ಪಾವತಿಸಿದರೆ ಕೂಡಲೇ ಇ- ಸೊತ್ತು ಹಕ್ಕುಪತ್ರ ಒದಗಿಸಲು ಸಾಧ್ಯ. ಸಣ್ಣೇನಹಳ್ಳಿ ಗ್ರಾಮದಿಂದ ಹಕ್ಕುಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು. ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಗ್ರಾಮದಲ್ಲಿ ಅನೇಕ ಬಡ ಕುಟುಂಬಗಳು ಇಂದಿಗೂ ದಾಖಲೆ ರಹಿತವಾಗಿಯೇ ಬದುಕನ್ನು ನಡೆಸುತಿದ್ದು, ಈ ನಿಟ್ಟಿನಲ್ಲಿ ತಮ್ಮ ಮನೆಯ ಭೂ ದಾಖಲೆ ಗಟ್ಟಿಗೊಳಿಸುವ ಮೂಲಕ ರಾಜ್ಯ ಸರಕಾರ ಶಾಶ್ವತ ಗ್ಯಾರಂಟಿ ಬದುಕಿಗೆ ಅರ್ಥ ಕಲ್ಪಿಸಿಕೊಟ್ಟು ಕಂದಾಯ ಇಲಾಖೆಯಿಂದ ಪ್ರತಿಯೊಬ್ಬ ಮನೆ ಸಧೃಡಗೊಳಿಸುವ ಕಾರ್ಯ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ. ಇಒ ಸಿ.ಆರ್. ಪ್ರವೀಣ್, ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಎಸ್. ಉಮೇಶ್, ಗ್ರಾಮದ ಮುಖಂಡರಾದ ರಂಗಪ್ಪ, ಹನುಮಂತಪ್ಪ, ರಾಮಕೃಷ್ಣ, ರೇವಣ್ಣ, ಕಂದಾಯ ನಿರೀಕ್ಷಕ ತಿಪ್ಪೇಶಪ್ಪ, ಪಿಡಿಒ ಕೆ.ಬಿ. ಚಂದ್ರ ಶೇಖರ್ ಹಾಗೂ ಸಿಬ್ಬಂದಿ ಇದ್ದರು. 5ಕೆಕೆಡಿಯು3.
ಕಡೂರು ತಾಲೂಕಿನ ಸಣ್ಣೇನಹಳ್ಳಿ ಗ್ರಾಮದಲ್ಲಿ 94 ಡಿ. ಯಡಿಯಲ್ಲಿ ಗ್ರಾಮದ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತು ಇ- ಸೊತ್ತುಗಳನ್ನು ವಿತರಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಸಿ.ಎಸ್.ಪೂರ್ಣಿಮಾ, ಸಿ.ಆರ್. ಪ್ರವೀಣ್, ಶರತ್ ಕೃಷ್ಣಮೂರ್ತಿ, ಡಿ.ಉಮೇಶ್ ಮತ್ತಿತರಿದ್ದರು.