ಗೂಡ್ಸ್‌ ಶೆಡ್ ಲಾರಿ ನಿಲುಗಡೆ ಜಾಗ ಉಳಿಸಿ

KannadaprabhaNewsNetwork |  
Published : May 07, 2026, 02:00 AM IST
ಗೂಡ್ಸ್ಶೆಡ್ ಲಾರಿ ಮಾಲೀಕರ ಸಂಘದವತಿಯಿಂದ ಮಂಗಳವಾರದಂದು ಅಪರ ಜಿಲ್ಲಾಧಿಕಾರಿ ಜಗದೀಶ್’ ಅವರಿಗೆ ಮನವಿ  | Kannada Prabha

ಸಾರಾಂಶ

ರಾಜಘಟ್ಟ ರೈಲ್ವೆ ನಿಲ್ದಾಣದ ರಸ್ತೆಯ ಸಮೀಪದ ಗೂಡ್ಸ್‌ ಶೆಡ್ ಪ್ರದೇಶದಲ್ಲಿ ಕಳೆದ ಎರಡು ಮೂರು ದಶಕಗಳಿಂದ ನಿರಂತರವಾಗಿ ಲಾರಿಗಳನ್ನು ನಿಲ್ಲಿಸಿಕೊಂಡು ಸಾರ್ವಜನಿಕ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆ ಕಾರ್ಯಗಳನ್ನು ನಿರ್ವಹಿಸುತ್ತಿರುವ ಜಾಗವನ್ನು ಮುಂದುವರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ನೂರಾರು ಜನ ಹಾಸನ ಗೂಡ್ಸ್‌ ಶೆಡ್ ಲಾರಿ ಮಾಲೀಕರ ಸಂಘದ ವತಿಯಿಂದ ಮಂಗಳವಾರದಂದು ಅಪರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನನಗರದ ರಾಜಘಟ್ಟ ರೈಲ್ವೆ ನಿಲ್ದಾಣದ ರಸ್ತೆಯ ಸಮೀಪದ ಗೂಡ್ಸ್‌ ಶೆಡ್ ಪ್ರದೇಶದಲ್ಲಿ ಕಳೆದ ಎರಡು ಮೂರು ದಶಕಗಳಿಂದ ನಿರಂತರವಾಗಿ ಲಾರಿಗಳನ್ನು ನಿಲ್ಲಿಸಿಕೊಂಡು ಸಾರ್ವಜನಿಕ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆ ಕಾರ್ಯಗಳನ್ನು ನಿರ್ವಹಿಸುತ್ತಿರುವ ಜಾಗವನ್ನು ಮುಂದುವರಿಸಲು ಅನುಮತಿ ನೀಡುವಂತೆ ಆಗ್ರಹಿಸಿ ನೂರಾರು ಜನ ಹಾಸನ ಗೂಡ್ಸ್‌ ಶೆಡ್ ಲಾರಿ ಮಾಲೀಕರ ಸಂಘದ ವತಿಯಿಂದ ಮಂಗಳವಾರದಂದು ಅಪರ ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಂಘದ ಜಿಲ್ಲಾಧ್ಯಕ್ಷ ಕೆ. ಟಿ. ಸುರೇಶ್ ಮತ್ತು ಶೇಕ್ ಅಹಮದ್ ಮಾಧ್ಯಮದೊಂದಿಗೆ ಮಾತನಾಡಿ, ಸುಮಾರು ೨೦ರಿಂದ ೩೦ ವರ್ಷಗಳ ಹಿಂದೆ ಹಿಂದಿನ ಶಾಸಕ ಎಚ್. ಎಸ್. ಪ್ರಕಾಶ್ ಅವರ ಮುತುವರ್ಜಿಯಿಂದ ಅಂದಿನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ರಾಜಘಟ್ಟ ರಸ್ತೆಯ ಬಳಿಯ ಈ ಜಾಗವನ್ನು ಲಾರಿ ನಿಲುಗಡೆಗಾಗಿ ಬಳಸಲು ಅವಕಾಶ ಪಡೆಯಲಾಗಿದೆ. ಅಂದಿನಿಂದಲೂ ಇಂದಿನವರೆಗೆ ಯಾವುದೇ ವ್ಯತ್ಯಯವಿಲ್ಲದೆ ಲಾರಿಗಳನ್ನು ನಿಲ್ಲಿಸಿಕೊಂಡು, ವಿವಿಧ ಅಗತ್ಯ ವಸ್ತುಗಳ ಸಾಗಾಣಿಕೆಯನ್ನು ನಿರ್ವಹಿಸುತ್ತಿದ್ದಾರೆ. ಈ ಗೂಡ್ಸ್‌ ಶೆಡ್ ಪ್ರದೇಶವು ಹಾಸನ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ಸರಬರಾಜು ಕೇಂದ್ರವಾಗಿದ್ದು, ಪ್ರತಿದಿನ ರೈತರಿಗೆ ಅಗತ್ಯವಾದ ಗೊಬ್ಬರ, ಆಲೂಗಡ್ಡೆ ಸೇರಿದಂತೆ ಕೃಷಿ ಸಂಬಂಧಿತ ವಸ್ತುಗಳ ಜೊತೆಗೆ, ಜನಸಾಮಾನ್ಯರಿಗೆ ಬೇಕಾಗುವ ಅಕ್ಕಿ, ಸಿಮೆಂಟ್, ಕಟ್ಟಡ ಸಾಮಗ್ರಿಗಳು ಮತ್ತು ಇತರ ದಿನನಿತ್ಯ ಬಳಕೆಯ ವಸ್ತುಗಳನ್ನು ಇಲ್ಲಿಂದಲೇ ಸಾಗಿಸಲಾಗುತ್ತಿದೆ ಎಂದರು. ಇದರಿಂದ ರೈತರು ಹಾಗೂ ವ್ಯಾಪಾರಿಗಳಿಗೆ ಬಹಳಷ್ಟು ಅನುಕೂಲವಾಗುತ್ತಿದ್ದು, ನಗರದಲ್ಲಿನ ಸರಬರಾಜು ವ್ಯವಸ್ಥೆಯೂ ಸುಗಮವಾಗಿದೆ. ಸಂಘವು ಸ್ಪಷ್ಟಪಡಿಸಿರುವಂತೆ, ಈ ಜಾಗದಲ್ಲಿ ಯಾವುದೇ ರೀತಿಯ ಬಾಡಿಗೆ ಅಥವಾ ಹಣ ವಸೂಲಿ ಮಾಡಲಾಗುತ್ತಿಲ್ಲ. ಜೊತೆಗೆ, ಯಾವುದೇ ಶಾಶ್ವತ ಕಟ್ಟಡಗಳನ್ನು ನಿರ್ಮಿಸದೇ, ಕೇವಲ ಲಾರಿ ನಿಲುಗಡೆಗೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಈ ಮೂಲಕ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸದೇ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದರು. ಹಾಸನ ನಗರದಲ್ಲಿ ದೊಡ್ಡ ಪ್ರಮಾಣದ ವಾಹನಗಳಿಗೆ ಸೂಕ್ತವಾದ ಪರ್ಯಾಯ ನಿಲುಗಡೆ ಸ್ಥಳಗಳ ಕೊರತೆ ಇರುವುದರಿಂದ, ರೈಲ್ವೆ ಇಲಾಖೆಯ ಜಾಗದಲ್ಲಿಯೇ ಲಾರಿಗಳನ್ನು ನಿಲ್ಲಿಸಲು ಅನಿವಾರ್ಯತೆ ಉಂಟಾಗಿದೆ. ರೈಲ್ವೆ ಅಧಿಕಾರಿಗಳೂ ಸಹ ಇದಕ್ಕೆ ಸಹಕಾರ ನೀಡುತ್ತಿದ್ದು, ಯಾವುದೇ ಅಡಚಣೆ ಇಲ್ಲದೆ ಲಾರಿಗಳ ಸಂಚಾರ ಮತ್ತು ನಿಲುಗಡೆ ನಡೆಯುತ್ತಿದೆ ಎಂದು ತಿಳಿಸಿದರು.ಇದೇ ಪ್ರದೇಶದ ಪಕ್ಕದಲ್ಲಿರುವ ಸುಮಾರು ೧-೦೬ ಗುಂಟೆ ಸರ್ಕಾರದ ಜಾಗವೂ ಹಲವು ವರ್ಷಗಳಿಂದ ಉಪಯೋಗವಿಲ್ಲದೇ ಖಾಲಿ ಉಳಿದಿದ್ದು, ಆ ಜಾಗವನ್ನು ಸಹ ಲಾರಿ ನಿಲುಗಡೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಜಾಗವನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದೇ, ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ಮಾಡಿಕೊಂಡಿದ್ದೇವೆ ಎಂದರು. ಆದರೆ ಈಗ ಈ ಜಾಗ ನಮ್ಮದೆಂದು ಹೇಳಿ ಈ ಜಾಗದಿಂದ ಹೋಗುವಂತೆ ನಮ್ಮ ಮೇಲೆ ಒತ್ತಡ ಏರಲಾಗುತ್ತಿದೆ. ಲಾರಿ ನಿಲುಗಡೆಗೆ ಈ ಜಾಗವನ್ನು ನಿರಂತರವಾಗಿ ಬಳಸಲು ಅವಕಾಶ ನೀಡದಿದ್ದರೆ, ಸಾಗಾಣಿಕೆ ವ್ಯವಸ್ಥೆಗೆ ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಇದರಿಂದ ರೈತರಿಗೆ ಗೊಬ್ಬರ ಹಾಗೂ ಕೃಷಿ ಉತ್ಪನ್ನಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವಷ್ಟೇ ಅಲ್ಲದೆ, ನಗರದಲ್ಲಿ ಅಗತ್ಯ ವಸ್ತುಗಳ ಕೊರತೆ ಉಂಟಾಗುವ ಭೀತಿಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಹೀಗಾಗಿ, ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಹಲವು ವರ್ಷಗಳಿಂದ ಬಳಕೆಯಲ್ಲಿರುವ ಪರಂಪರೆಯನ್ನು ಮುಂದುವರಿಸುವ ನಿಟ್ಟಿನಲ್ಲಿ, ಪ್ರಸ್ತುತ ಬಳಸುತ್ತಿರುವ ಗೂಡ್ಸ್ಶೆಡ್ ಮತ್ತು ಪಕ್ಕದ ಸರ್ಕಾರಿ ಜಾಗದಲ್ಲಿಯೇ ಲಾರಿಗಳನ್ನು ನಿಲ್ಲಿಸಲು ಶಾಶ್ವತ ಅಥವಾ ತಾತ್ಕಾಲಿಕ ಅನುಮತಿ ನೀಡಬೇಕು ಎಂದು ಹಾಸನ ಗೂಡ್ಸ್‌ ಶೆಡ್‌ ಲಾರಿ ಮಾಲೀಕರ ಸಂಘವು ಜಿಲ್ಲಾಡಳಿತವನ್ನು ವಿನಂತಿಸಿತು.ಪ್ರತಿಭಟನೆಯಲ್ಲಿ ಹಾಸನ ಗೂಡ್ಸ್ ಲಾರಿ ಮಾಲೀಕರ ಸಂಘದ ಲೋಕೇಶ್, ಮಂಜುನಾಥ್, ಶೇಖರ್ ಕುಮಾರ್‌, ಸಂಜಯ್, ಬಲರಾಮ್, ಶಾರಕ್ ಕುಮಾರ್‌ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ರಾವ್
ಕ್ಯಾಂಪಸ್ ಟು ಕಾರ್ಪೊರೇಟ್ ಶೃಂಗ ಯಶಸ್ವಿ