ಬ್ಯಾಡಗಿ: ಗಾಳಿ, ನೀರು, ಬೆಳಕು, ಪರಿಸರ, ಸೂರ್ಯ, ಚಂದ್ರ ಎಲ್ಲವನ್ನೂ ನಾವೆಲ್ಲರೂ ಒಂದೇ ರೀತಿ ನೋಡುತ್ತೇವೆ. ಆದರೆ ಧರ್ಮದ ವಿಷಯ ಬಂದಾಗ ಧರ್ಮಗಳು ಎಂಬ ಬಹುವಚನವೇಕೆ ಬೇಕು? ಎಲ್ಲವೂ ದೇವರ ಕೃಪೆಯಿಂದ ಒದಗಿ ಬಂದಿರುವಾಗ "ನನ್ನದು " ಎನ್ನುವ ಮನೋಭಾವನೆ ನಮಗೇಕೆ ಬೇಕು, ಮನುಷ್ಯನನ್ನು ಮನುಷ್ಯನಂತೆ ನೋಡುವಂತಹ ಒಂದೇ ಧರ್ಮವನ್ನು ನಾವೆಲ್ಲರೂ ಪಾಲನೆ ಮಾಡಬೇಕಾಗಿದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಮಣ್ಣಿನ ಗಡಗಿ (ಮಡಕೆ) ಮಾಡುವ ಮುನ್ನ ಕುಂಬಾರ ಮಾಲೀಕ, ಗಡಗಿ ಮಾರಿದ ಮೇಲೆ ಕೊಂಡವನು ಮಾಲೀಕ, ಆದರೆ ಇವುಗಳ ಮಧ್ಯೆ ಗಡಗಿ ಮಾಡಲು ಮಣ್ಣು ಕೊಟ್ಟಂತಹ ದೇವರು ಮೂಲ ಮಾಲೀಕನೆಂಬುದನ್ನು ಮರೆಯುತ್ತಿದ್ದೇವೆ. ಮನುಷ್ಟ ಹುಟ್ಟಿದ ಬಳಿಕ ಸಾಯವವರೆಗೂ ನನ್ನದು ಅನ್ನುವುದೂ ಯಾವುದೂ ಇರುವುದಿಲ್ಲ. ತಟ್ಟೆಯಲ್ಲಿ ಬಿದ್ದಂತಹ ರೊಟ್ಟಿ ಕೂಡ ಆತನದ್ದಲ್ಲ, ಆದರೆ ದೇವರು ಕೊಟ್ಟ ಸಂಪತ್ತನ್ನು ಬಳಸಲಿಕ್ಕೆ ಬಂದಿರುವ ನಾವು ಕೇವಲ ಬಳಸಬೇಕಷ್ಟೆ, ಇಂತಹ ಸಾಮಾನ್ಯ ಜ್ಞಾನವಿಲ್ಲದೇ ಸಂಘರ್ಷಕ್ಕಿಳಿಯುತ್ತಿದ್ದೇವೆ ಎಂದರು.
ನನ್ನದು ಎನ್ನುವ ಕಾರಣಕ್ಕೆ ದುಃಖ ಪ್ರಾಪ್ತಿ: ಮನಸ್ಸಿನ ಗಾಯಗಳಿಗೆ ಚಿಕಿತ್ಸೆ ಕೊಡುವವರು ಯಾರು? ದುಃಖಕ್ಕೆ ಹಲವು ಕಾರಣಗಳಿವೆ, ಆದರೆ ಇದು ನನ್ನದು ಎನ್ನುವ ಕಾರಣಕ್ಕೆ ಬರುವಂತಹ ದುಃಖಗಳು ಮನುಷ್ಯನನ್ನು ಬಹಳಷ್ಟು ಸಂಕಷ್ಟಗಳಿಗೆ ತಳ್ಳುತ್ತದೆ, ಹೀಗಾಗಿ ನಮ್ಮಲ್ಲಿ ಗಾಢವಾಗಿ ಹುದುಗಿರುವ ನನ್ನದು ಎಂಬ ಮನಸ್ಸಿನ ಭಾವ ಬಂಧಗಳಿಂದ ನಮ್ಮನ್ನು ಬಿಡಿಸಿಕೊಳ್ಳಬೇಕಾಗಿದೆ ಎಂದು ಕಥೆಗಳ ಮೂಲಕ ಮಾರ್ಮಿಕವಾಗಿ ತಿಳಿಸಿದರು.ಬಿಲ್ಲು ಮತ್ತು ಬಾಣಕ್ಕಿರುವ ಸಂಬಂಧ: ಸೃಷ್ಟಿ ಬದಲಾಗುವುದಿಲ್ಲ ಆದರೆ ಅದನ್ನು ನೋಡುವ ದೃಷ್ಟಿಗಳು ಬದಲಾಗಬೇಕಾಗಿದೆ, ಬಿಲ್ಲು (ತಂದೆ) ಬಾಗಿದಲ್ಲಿ ಮಾತ್ರ ಬಾಣ (ಮಗ) ಮುಂದಕ್ಕೆ ಹೋಗಲಿದೆ, ಆದರೆ ಬಿಲ್ಲು ಬಾಗಿದ್ದರಿಂದಲೇ ಬಾಣ ಮುಂದಕ್ಕೆ ಹೋಗಲು ಸಾಧ್ಯವಾಯಿತು ಎಂದು ಅರಿವು ಬಾಣಕ್ಕಿರಬೇಕು ಸಂತನಿಗೂ ರಾಜನಿಗೂ ಇರುವ ವ್ಯತ್ಯಾಸವಿಷ್ಟೇ ನನ್ನದೇನೂ ಇಲ್ಲವೆನ್ನುವ ಸಂತನಿಗೆ ದೇವರಗುಡಿಯಲ್ಲಿ ನಿದ್ದೆ ಮಾಡಿದರೇ ನನ್ನದೇ ಸಾಮ್ರಾಜ್ಯ ಎನ್ನುವ ರಾಜನಿಗೆ ಅಂತಃಪುರದಲ್ಲಿ ಬಿಟ್ಟು ಬೇರೆಲ್ಲೂ ನಿದ್ದೆ ಬರುವುದಿಲ್ಲ ಎಂದರು.
ದೇಶ ಸೂಪರ ಪವರ್ ಆಗಲಿದೆ: ದೇಶದ ಅಷ್ಟೂ ಜನರು ನಾವು ದುಡಿದು ತಿನ್ನಲು ಬದ್ಧರಾಗಿದ್ದೇವೆ ಪುಕ್ಕಟೆ ಕೊಡುವುದು ಯಾವುದೇ ಬೇಡವೆನ್ನಿ, ಕೆಲವೇ ವರ್ಷಗಳಲ್ಲಿ ದೇಶ ವಿಶ್ವದಲ್ಲಿಯೇ ಸೂಪರ ಪವರ್ ಆಗಲಿದೆ. ಜಗತ್ತು ಒಂದು ವೆಹಿಕಲ್ ಶೋ ರೂಮ್ ಇದ್ದಂತೆ ಹೊಸ ವಾಹನಗಳು ಸೃಷ್ಟಿಯಾಗುತ್ತವೆ. ಹಳೇ ವಾಹನ ಗುಜರಿ ಸೇರುತ್ತವೆ, ಹೀಗಾಗಿ ಭಗವಂತ ಕರುಣಿಸುವ ದಾಸೋಹದ ಅಹಾರ ಸೇವಿಸಿದವನಿಗೆ ಇನ್ಫೆಕ್ಷನ್ ಇಲ್ಲ ಆಗುವುದಿಲ್ಲ ಆದರೆ ಮನುಷ್ಯ ಸೃಷ್ಟಿಸಿದ ದಾಸೋಹದ ಎಲ್ಲವೂ ಕೆಡುತ್ತವೆ. ಹೀಗಾಗಿ ಬೆಳೆದಂತಹ ಬೆಳೆಗಳಿಗೆ ಭೂಮಿಯ ಬ್ರ್ಯಾಂಡ್ ಆಗಬೇಕು ಎಂದರು.ಹಮ್ಮೂರಾಬಿ ಕಾನೂನು ಒಂದಿಷ್ಟಿರಬೇಕು: ಅತಳ, ಸುತಳ, ಪಾತಾಳ ಎಲ್ಲವೂ ಸೃಷ್ಟಿಕರ್ತನ ಜಗತ್ತು ಆಂದಾಗ ಭೂಮಿ ಮೇಲೆ ಬದುಕಿರುವ ನಾವು ಹಣ, ವಡವೆ, ಆಸ್ತಿ ಮತ್ತು ಪ್ರತಿಷ್ಠೆ ಗಳಿಸಲು ಕ್ರೌರ್ಯಕ್ಕಿಳಿಯುತ್ತಿದ್ದೇವೆ. ಇಂತವುಗಳಿಗೆ ಬ್ರೇಕ್ ಬೀಳ ಬೇಕಾದರೆ ಹಮ್ಮೂರಾಬಿ ಕಾನೂನು ಜಾರಿಗೊಳ್ಳಬೇಕು ಇಲ್ಲವೇ ಕರುಣೆ, ನಿಸ್ವಾರ್ಥ ಎಂಬ ವಸ್ತುಗಳು ನಮ್ಮಲ್ಲಿರಬೇಕು ಎಂದರು.