ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ಶ್ರೀ ಶಿವಕುಮಾರಸ್ವಾಮಿ ಬಡಾವಣೆಯ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಚೇರಿ (ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್) ಯಲ್ಲಿ ಕಳ್ಳತನ ನಡೆದ 12 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ 10,88,440 ರು.ಗಳನ್ನು ಜಪ್ತಿ ಮಾಡುವಲ್ಲಿ ಇಲ್ಲಿನ ಕೆಟಿಜೆ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ತಾಲೂಕಿನ ಯರವನಾಗತಿಹಳ್ಳಿ ಗ್ರಾಮದ ಕೆ.ಬಿ.ಕಿರಣಕುಮಾರ (26 ವರ್ಷ) ಬಂಧಿತ ಆರೋಪಿಯಾಗಿದ್ದು, ಈತ ಅದೇ ಕಂಪನಿಯ ಮಾಜಿ ನೌಕರನಾಗಿ ರುವುದು ತಿಳಿದು ಬಂದಿದೆ. ಬಂಧಿತನಿಂದ ಕಳವು ಮಾಡಿದ್ದ 10,88,440 ರು.ಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿನ ಶಿವಕುಮಾರ ಸ್ವಾಮಿ ಬಡಾವಣೆಯ ಗ್ರಾಮೀಣ ಕೂಟ ಸ್ಮಾಲ್ ಫೈನಾನ್ಸ್ ನಲ್ಲಿ ಜ.13ರಂದು ಪಿರ್ಯಾದಿ ಅವಿನಾಶ್ ಗುಂಪು ಸಾಲ ಪಡೆದ ಮಹಿಳೆಯರಿಂದ ಸಂಗ್ರಹಿಸಿದ ಸಾಲದ ಹಣದ ಬಾಬ್ತು 10,88,440 ರು.ಗಳನ್ನು ಕಚೇರಿಯ ಸೇಫ್ ಲಾಕರ್‌ನಲ್ಲಿಟ್ಟಿದ್ದರು. ಜ.16ರಂದು ಬ್ಯಾಂಕ್ ಗೆ ಜಮಾ ಮಾಡಲು ಸೇಪ್ ಲಾಕರ್ ತೆಗೆದಾಗ ಹಣ ಕಳುವಾಗಿ ರುವುದು ಗೊತ್ತಾಗಿದೆ. ಈ ಬಗ್ಗೆ ಅವಿನಾಶ್ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಎಎಸ್ಪಿಗಳಾದ ವಿಜಯಕುಮಾರ ಎನ್.ಸಂತೋಷ್, ಜಿ.ಮಂಜುನಾಥ್ ನಿರ್ದೇಶನದಲ್ಲಿ ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆ ಇನ್ಸಪೆಕ್ಟರ್ ಯು.ಜೆ.ಶಶಿಧರ್, ಪಿಎಸ್ಐಗಳಾದ ಸಾಗರ್ ಅತ್ತರವಾಲ, ಮಂಜಳಾು ನೇತೃತ್ವದ ತಂಡವು ಕೃತ್ಯ ನಡೆದ 12 ಗಂಟೆ ಒಳಗಾಗಿ ಆರೋಪಿಯನ್ನು ಬಂಧಿಸಿದೆ. ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಟಿ.ಪ್ರಕಾಶ, ಶಂಕರ ಆರ್.ಜಾಧವ್, ಎನ್.ಆರ್.ತಿಮ್ಮಣ್ಣ, ಎಂ.ಮಂಜಪ್ಪ, ಕೆ.ಷಣ್ಮುಖ, ಎಂ.ಎಸ್. ಶಿವ ರಾಜ, ರವಿ ಲಮಾಣಿ, ರಾಘವೇಂದ್ರ, ಶಾಂತರಾಜರನ್ನು ಒಳಗೊಂಡ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ.