ನಗು ಮನುಷ್ಯನ ಸಹಜ ಸೌಂದರ್ಯದ ಆಭರಣ

KannadaprabhaNewsNetwork | Published : Apr 26, 2024 12:47 AM

ಸಾರಾಂಶ

ಸಾಹಿತ್ಯದ ರಸದೌತಣ ಈ ಭಾಗದ ಜನರಿಗೆ ಉಣಬಡಿಸುತ್ತಿರುವ ಬೀಚಿ ಬಳಗದ ಕಾರ್ಯ ಶ್ಲಾಘನೀಯ

ನರೇಗಲ್ಲ: ಮನುಷ್ಯನಿಗೆ ಭಗವಂತ ನಗುವೆಂಬ ಶಕ್ತಿ ನೀಡಿದ್ದಾನೆ. ಈ ನಗು ಮನುಷ್ಯನ ಸಹಜ ಸೌಂದರ್ಯದ ಆಭರಣವಾಗಿದೆ. ನಗುವುದರಿಂದ ಆಯಾಸವೆಲ್ಲ ಪರಿಹಾರವಾಗುತ್ತದೆ. ನಗುವಿಗೆ ಬದುಕಿಸುವ ಶಕ್ತಿ ಇದೆ ಎಂದು ಗದಗನ ಕೆಎಸ್ ಎಸ್ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಕೆ. ಪೂಜಾರ ಹೇಳಿದರು.

ಪಟ್ಟಣದ ಹಿರೇಮಠದ ಸಭಾ ಭವನದಲ್ಲಿ ಬೀಚಿ ಬಳಗವು ಏರ್ಪಡಿಸಿದ್ದ ಬೀಚಿಯವರ ೧೧೧ನೇ ಜಯಂತಿ ಮತ್ತು ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಬೀಚಿ ಬದುಕು-ಬರಹ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಕಳೆದ ಹತ್ತು ವರ್ಷಗಳಿಂದ ನರೇಗಲ್ಲದಲ್ಲಿ ಬೀಚಿ ಬಳಗ ಹುಟ್ಟು ಹಾಕಿ ಅದನ್ನು ಸಮರ್ಥವಾಗಿ ನಡೆಸಿಕೊಂಡು ಬಂದಿರುವ ಬಳಗದ ಎಲ್ಲ ಸದಸ್ಯರಿಗೂ ನನ್ನ ಅಭಿನಂದನೆ. ಸಾಹಿತ್ಯದ ರಸದೌತಣ ಈ ಭಾಗದ ಜನರಿಗೆ ಉಣಬಡಿಸುತ್ತಿರುವ ಬೀಚಿ ಬಳಗದ ಕಾರ್ಯ ಶ್ಲಾಘನೀಯ ಎಂದರು.

ಬೀಚಿ ಯಾರಿಂದಲೂ ಬೆಳೆದವರಲ್ಲ. ಅವರು ತಮ್ಮಷ್ಟಕ್ಕೆ ತಾವೇ ತಮ್ಮನ್ನು ಸಿದ್ಧಪಡಿಸಿಕೊಂಡವರು ಬೀಚಿ. ಪ್ರಗತಿಶೀಲ ಸಾಹಿತ್ಯ ರಚನೆಯಲ್ಲಿ ಬೀಚಿ ಮುಂಚೂಣಿಯ ಬರಹಗಾರರಾಗಿದ್ದಾರೆ. ಎಲ್ಲರನ್ನೂ ನಗಿಸುವ ಮೂಲಕ ಆ ನಗೆಯ ಗುಳಿಗೆ ನೀಡುವ ಮೂಲಕ ಬೀಚಿ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಉಪನ್ಯಾಸಕ ನಾಗರಾಜ ಕಡ್ಲಬಾಳು ಮಾತನಾಡಿ, ಪುಸ್ತಕಗಳು ಮನಸ್ಸನನ್ನು ಅರಳಿಸುತ್ತವೆ. ಮನಸ್ಸು ಅರಳಿಸುವಂತಹ ಪುಸ್ತಕ ಓದಬೇಕೆ ಹೊರತು, ಮನಸ್ಸನ್ನು ಕೆರಳಿಸುವಂತಹ ಪುಸ್ತಕಗಳನ್ನು ಓದಬಾರದು. ಮನೆಯಲ್ಲಿನ ಎಲ್ಲ ಸದಸ್ಯರಿಗೆ ಸಾಧ್ಯವಾದರೆ ಪುಸ್ತಕ ಓದುವ ಹವ್ಯಾಸ ಬೆಳೆಸುವ ಪ್ರೇರಣೆ ನೀಡಬೇಕೆಂದರು.

ಈ ವೇಳೆ ಕರ್ನಾಟಕ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಈಜು ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶಿಕ್ಷಕ ವಿ.ಎ. ಕುಂಬಾರ ಅವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಸುರೇಶ ಹಳ್ಳಿಕೇರಿ, ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ, ಉಪನ್ಯಾಸಕ ಶಿವಾನಂದ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ಡಾ. ಆರ್.ಕೆ. ಗಚ್ಚಿನಮಠ, ಮುಖ್ಯ ಶಿಕ್ಷಕ ಬಿ.ಬಿ. ಕುರಿ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಸಿ.ಕೆ. ಕೇಸರಿ, ನಿವೃತ್ತ ಎಎಸ್‌ಐ ಶಿಸ್ತಗಾರ, ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ, ಜಿ.ಎ. ಬೆಲ್ಲದ, ಡಾ. ಎಲ್.ಎಸ್. ಗೌರಿ, ನಿವೃತ್ತ ಉಪನ್ಯಾಸಕ ಎಸ್.ಎಚ್. ಕುಲಕರ್ಣಿ, ಸಂಚಾಲಕ ಈಶ್ವರ ಬೆಟಗೇರಿ, ಕಾರ್ಯದರ್ಶಿ ಎಚ್.ವಿ. ಈಟಿ, ಪತ್ರಕರ್ತ ಸಂಗಮೇಶ ಮೆಣಸಗಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಆನಂದ ಕೊಟಗಿ, ವೀರೇಶ ಕುಷ್ಟಗಿ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಲಲಿತಾ ಕಳಕಣ್ಣವರ ಮುಂತಾದವರಿದ್ದರು.

ಉಪನ್ಯಾಸಕ ಸಿ.ಎಸ್. ಗುಳಗಣ್ಣವರ ನಿರೂಪಿಸಿದರು. ಶಿಕ್ಷಕ ಜಿ.ಎ. ಪಾಟೀಲ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಅರುಣ. ಬಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಆರ್.ಎಸ್. ನರೇಗಲ್ಲ ವಂದಿಸಿದರು.

Share this article