ಗಾನಕೋಗಿಲೆಗೆ ಭಾವಪೂರ್ಣ ವಿದಾಯ

KannadaprabhaNewsNetwork |  
Published : Jul 13, 2026, 12:45 AM IST
ಎಸ್‌.ಜಾನಕಿ | Kannada Prabha

ಸಾರಾಂಶ

ಶನಿವಾರ ಸಂಜೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆ ಅವರ ಇಚ್ಛೆಯಂತೆ ಮೈಸೂರು ಜಿಲ್ಲೆ ಎಚ್​.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಫಾರಂಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಸಂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮೈಸೂರು:

ಶನಿವಾರ ಸಂಜೆ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆ ಅವರ ಇಚ್ಛೆಯಂತೆ ಮೈಸೂರು ಜಿಲ್ಲೆ ಎಚ್​.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದ ಫಾರಂಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಸಂಜೆ ನೆರವೇರಿತು.

ಜಾನಕಿ ಅವರ ಪುತ್ರ ಮುರುಳಿಕೃಷ್ಣ ಅವರ ಮಗಳಾದ ಅಪ್ಸರಾ ಅವರು ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ಜಾನಕಿ ಅವರ ಪುತ್ರ ಇದೇ ವರ್ಷದ ಜನವರಿಯಲ್ಲಿ ಮೃತಪಟ್ಟಿದ್ದರು. ಹೀಗಾಗಿ, ಮೊಮ್ಮಗಳು ಅಪ್ಸರಾ ಅವರಿಂದ ಅಂತ್ಯ ಸಂಸ್ಕಾರ ಕ್ರಿಯೆಗಳನ್ನು ನೆರವೇರಿಸಲಾಯಿತು. ಅಂತ್ಯಸಂಸ್ಕಾರ ವೇಳೆ 3 ಸುತ್ತು ಕುಶಾಲತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಚಿತ್ರರಂಗದ ನಟರು, ಗಾಯಕ, ಗಾಯಕಿಯರು, ರಾಜಕೀಯ ನಾಯಕರು ಸೇರಿದಂತೆ ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು ಈ ವೇಳೆ ಹಾಜರಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.ಅಂತಿಮ ದರ್ಶನಕ್ಕೆ ಅವಕಾಶ:

ಇದಕ್ಕೂ ಮೊದಲು, ನಗರದ ಅಪೋಲೋ ಆಸ್ಪತ್ರೆಯಿಂದ ಶನಿವಾರ ರಾತ್ರಿ 11.45ಕ್ಕೆ ಬೋಗಾದಿ 2ನೇ ಹಂತದ ಎಸ್.ಬಿ.ಎಂ ಬಡಾವಣೆಯ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು. ಭಾನುವಾರ ಬೆಳಗ್ಗೆ 8 ಗಂಟೆವರೆಗೆ ಕುಟುಂಬಸ್ಥರು ಮತ್ತು ಆಪ್ತ ವಲಯದವರ ಅಂತಿಮ‌ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕುಟುಂಬದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಭಾನುವಾರ ಬೆಳಗ್ಗೆ 8.50ಕ್ಕೆ ಅವರ ಮೃತದೇಹವನ್ನು ಬೋಗಾದಿಯ ಅವರ ಮನೆಯಿಂದ ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಕರೆ ತಂದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಗಣ್ಯರು ಆಗಮಿಸಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು. ಕನ್ನಡಪರ ಸಂಘಟನೆಯವರು ಅವರ ಪಾರ್ಥೀವ ಶರೀರಕ್ಕೆ ಕನ್ನಡ ಬಾವುಟ ಹೊದಿಸಿ, ನಮನ ಸಲ್ಲಿಸಿದರು. ಬಳಿಕ, ಮಧ್ಯಾಹ್ನ 3.05ಕ್ಕೆ ಪಾರ್ಥೀವ ಶರೀರವನ್ನು ಮಹಾರಾಜ ಕಾಲೇಜು ಮೈದಾನದಿಂದ ನವೀನ್‌ ಅವರ ಫಾರಂಹೌಸ್‌ ಗೆ ಕೊಂಡೊಯ್ಯಲಾಯಿತು.

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ:ಅವರ ಅಂತ್ಯಕ್ರಿಯೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸುಡುವ ಪದ್ಧತಿಯಲ್ಲಿ ನೆರವೇರಿತು. ಮೊದಲಿಗೆ ಪಂಚಗವ್ಯದಿಂದ ದೇಹ ಶುದ್ದೀಕರಣ ಮಾಡಲಾಯಿತು. ಬಳಿಕ, ಶ್ರೀಗಂಧ, ಟೀಕ್, ತೇಗ ಸೇರಿದಂತೆ ವಿವಿಧ ಮರಗಳ ಕಟ್ಟಿಕೆಯಿಂದ ನಿರ್ಮಿಸಲಾಗಿದ್ದ ಚಿತೆಗೆ ಮೊಮ್ಮಗಳು ಅಪ್ಸರಾ ಅಗ್ನಿಸ್ಪರ್ಶ‌ ಮಾಡಿದರು. ಸೂರ್ಯಾಸ್ತಕ್ಕೂ ಮುನ್ನ ಅಗ್ನಿಸ್ಪರ್ಶ ಮಾಡಲಾಯಿತು. ಈ ವೇಳೆ, ಕಾಲು ಕೆಜಿ ಎಳ್ಳು, 5 ಕೆಜಿ ಅಕ್ಕಿ, ಕಾಲು ಕೆಜಿ ಹೆಸರು ಕಾಳು, 2 ಕೆಜಿ ಕರ್ಪೂರ ಸೇರಿ 30ಕ್ಕೂ ಹೆಚ್ಚು ವಸ್ತುಗಳನ್ನು ಚಿತೆಗೆ ಅರ್ಪಿಸಲಾಯಿತು. ಶ್ರೀರಂಗಪಟ್ಟಣದ ರಮೇಶ್ ಶರ್ಮಾ ಅವರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನಗಳು ನಡೆದವು.

ಜಾನಕಿಯವರ ಕೇರ್‌ ಟೇಕರ್‌ ಆಗಿದ್ದ ನವೀನ್‌, 4 ವರ್ಷಗಳ ಹಿಂದೆ ಇಲ್ಲಿ 2 ಎಕರೆ 20 ಗುಂಟೆ ಜಮೀನು ಖರೀದಿಸಿದ್ದರು. ನೆಟ್‌ವರ್ಕ್ ಇಲ್ಲದ ಅರಣ್ಯದ ಮಧ್ಯದಲ್ಲಿರುವ ಈ ತೋಟಕ್ಕೆ ಜಾನಕಮ್ಮ ಆಗಾಗ ಬಂದು, ಬೆಳಿಗ್ಗೆಯಿಂದ ಸಂಜೆವರೆಗೂ ಇಲ್ಲೇ ಕಾಲ ಕಳೆಯುತ್ತಿದ್ದರು. ಜಾನಕಿಯವರ ಆಸೆಯಂತೆ ಅದೇ ತೋಟದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಗಣ್ಯರು, ಅಭಿಮಾನಿಗಳಿಂದ ಅಂತಿಮ ದರ್ಶನ:

ಚಿತ್ರರಂಗದ ನಟರು, ಗಾಯಕ, ಗಾಯಕಿಯರು, ರಾಜಕೀಯ ನಾಯಕರು ಸೇರಿದಂತೆ ಸಹಸ್ರ ಸಹಸ್ರ ಸಂಖ್ಯೆಯ ಅಭಿಮಾನಿಗಳು ಪ್ರಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ ಎಸ್‌. ಜಾನಕಿ ಅವರ ಪಾರ್ಥೀವ ಶರೀರದ ದರ್ಶನ ಪಡೆದು, ಕಂಬನಿ ಮಿಡಿದರು.ಶನಿವಾರ ಸಂಜೆ ನಿಧನರಾದ ಜಾನಕಿಯವರ ಮೃತದೇಹವನ್ನು ಭಾನುವಾರ ಬೆಳಗ್ಗೆ 8.50ಕ್ಕೆ ನಗರದ ಮಹಾರಾಜ ಕಾಲೇಜು ಮೈದಾನಕ್ಕೆ ಕರೆ ತಂದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 8.50ರಿಂದ ಮಧ್ಯಾಹ್ನ 3.05ರವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಎಡಬಿಡದೆ ಆಗಮಿಸಿದ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಗಣ್ಯರು ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.ನಗರಾಭಿವೃದ್ಧಿ ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ, ಕೇರಳದ ಉನ್ನತ ಶಿಕ್ಷಣ ಸಚಿವ ರೋಜಿ ಎಂ.ಜಾನ್‌, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಮಾಜಿ ಸಚಿವರಾದ ಡಾ। ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಬಿ.ಶ್ರೀರಾಮುಲು, ಉಮಾಶ್ರೀ, ಶಾಸಕರಾದ ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಜಿ.ಡಿ.ಹರೀಶ್ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಎಂ.ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.ಜತೆಗೆ, ಸಂಗೀತ ನಿರ್ದೇಶಕ ಹಂಸಲೇಖ, ಚಿತ್ರ ಸಾಹಿತಿ ಕೆ.ಕಲ್ಯಾಣ್, ಗಾಯಕರಾದ ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್, ಕಲಾವಿದರಾದ ತಾರಾ, ವಿನೋದ್ ರಾಜ್ ಕುಮಾರ್, ಗಾಯಕ ನವೀನ್ ಸಜ್ಜು, ನಿರ್ಮಾಪಕ ಕೆ.ಮಂಜು, ಬಹುಭಾಷಾ ಗಾಯಕಿ ಚಿತ್ರಾ, ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ, ಡಾ। ಶಮಿತಾ ಮಲ್ನಾಡ್, ವಾಣಿ ಹರಿಕೃಷ್ಣ, ಗಾಯಕ ಚಂದನ್‌ ಶೆಟ್ಟಿ, ನಟರಾದ ಶ್ರೀನಾಥ್, ವಿನೋದ್‌ ರಾಜ್‌, ಮಂಡ್ಯ ರಮೇಶ್‌, ಯೋಗೇಶ್‌ ದ್ವಾರಕೀಶ್‌, ನಟಿ ಭಾರತಿ ವಿಷ್ಣುವರ್ಧನ್, ಶಂಕರ್‌ ಅಶ್ವತ್ಥ್‌, ತೆಗು ಗಾಯಕ ಮನೋ, ನಿರ್ದೇಶಕ ಎಸ್‌. ನಾರಾಯಣ್ ಅವರು ಅಂತಿಮ ದರ್ಶನ ಪಡೆದರು.ಮೈಸೂರು ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಕೇರಳ, ತಮಿಳುನಾಡು ಮತ್ತು ಆಂಧ್ರ, ತೆಲಂಗಾಣದಿಂದಲೂ ನೂರಾರು ಸಂಖ್ಯೆಯ ಅಭಿಮಾನಿಗಳು ಆಗಮಿಸಿ ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.ಬೆಳಗ್ಗೆ ಒಂಭತ್ತರಿಂದ ಮಧ್ಯಾಹ್ನ ಮೂರರವೆರೆಗೆ ಸುಡು ಬಿಸಿಲನ್ನು ಲೆಕ್ಕಿಸದೇ ತಂಡೋಪ ತಂಡವಾಗಿ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಎಸ್. ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡದುಕೊಂಡರು. ಈ ವೇಳೆ ಬಹುಪಾಲು ಮಂದಿ ತಮ್ಮ ಮೊಬೈಲ್‌ಗಳಲ್ಲಿ ಪಾರ್ಥೀವ ಶರೀರ ಮತ್ತು ನೆರೆದಿದ್ದ ಜನಸ್ತೋಮವನ್ನು ಸೆರೆ ಹಿಡಿದುಕೊಂಡರು.ಖಾಸಗಿ ವಾಹಿನಿಯ ಸರಿಗಮಪದ ಸ್ಪರ್ಧಾಳುಗಳು ಜಾನಕಿ ಅವರು ಹಾಡಿರುವ ಎರಡು ಕನಸು ಚಿತ್ರದ ಪೂಜಿಸಲೆಂದೆ ಹೂಗಳ ತಂದೆ.., ಶಾಂತಿ ಕ್ರಾಂತಿ ಚಿತ್ರದ ಹುಟ್ಟೋದೇಕೆ ಸಾಯೋದೇಕೆ... ಎರಡು ಹಾಡುಗಳನ್ನು ಹಾಡುವ‌ ಮೂಲಕ ಅಗಲಿದ ಗಾಯಕಿಗೆ ಗೌರವ ಸಲ್ಲಿಸಿದರು.ಎಸ್.ಜಾನಕಿ ಹೆಸರು ಅಜರಾಮರ ಆಗಿಸಲು ಚರ್ಚಿಸಿ ನಿರ್ಧಾರ:

ಚಿತ್ರರಂಗದ ಪ್ರಮುಖರೊಂದಿಗೆ ಚರ್ಚಿಸಿ ನಮ್ಮ ದೇಶದ ಅಪ್ರತಿಮ ಗಾಯಕಿ ಎಸ್.ಜಾನಕಿ ಅವರ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲು ಏನು ಮಾಡಬೇಕೆಂದು ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಾನಕೋಗಿಲೆ ಜಾನಕಿ ಅಮ್ಮನವರು ಐವತ್ತು ವರ್ಷಗಳ ಕಾಲ ನಮ್ಮ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದವರು. ಎಲ್ಲಾ ಭಾಷೆಯಲ್ಲೂ ಹಾಡುಗಳನ್ನು ಹಾಡಿದ್ದಾರೆ. ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದು ಇತಿಹಾಸ ಪುಟ ಸೇರಿದ್ದಾರೆ. 33 ಬಾರಿ ವಿವಿಧ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾವೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದೇವೆ. 48 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ದನಿಯಾದ ಏಕೈಕ ಗಾಯಕಿ ಅವರು. ಅವರ ಹೆಸರು ಅಜರಾಮರವಾಗಿರಲು ಏನು ಮಾಡಬೇಕೆಂದು ಚಿತ್ರರಂಗದವರೊಡನೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.ಮೈಸೂರಿನಲ್ಲೇ ಉಳಿವ ಕೊನೆ ಆಸೆ:ಜಾನಕಿ ಅಮ್ಮನವರ ಕುಟುಂಬದವರ ಜೊತೆ ದೂರವಾಣಿ ಮೂಲಕ ಮಾತನಾಡಿದೆ. ನನಗೆ ಅಚ್ಚರಿ ತಂದ ವಿಚಾರ ಎಂದರೆ ಕಳೆದ ಹಲವು ವರ್ಷದಿಂದ ಅವರು ಮೈಸೂರಿನಲ್ಲೇ ನೆಲೆಸಿದ್ದು. ಅವರನ್ನು ಚೆನ್ನೈ ಅಥವಾ ಹೈದರಾಬಾದ್‌ಗೆ ಕೊಂಡೊಯ್ಯಬೇಕು ಅಂದರೆ ಏರ್ ಲಿಫ್ಟ್ ಮಾಡಿಕೊಡುವೆ ಎಂದು ಕುಟುಂಬದವರನ್ನು ಕೇಳಿದೆ. ಆಗ, ಮೈಸೂರಿನಲ್ಲೇ ಇರಬೇಕು ಎಂಬುದು ನಮ್ಮ ಅಜ್ಜಿ ಕೊನೆ ಆಸೆ ಆಗಿತ್ತು ಎಂದು ತಿಳಿಸಿದ್ದಾಗಿ ಸಿಎಂ ಹೇಳಿದರು.ಜಾನಕಿ ಅವರು ಬಹಳ ಸರಳ ಜೀವಿ. ಲತಾ ಮಂಗೇಶ್ಕರ್ ಯಾವ ರೀತಿ ಅವರ ಸರಳತೆಯನ್ನು ಕಾಪಾಡಿಕೊಂಡು ಬಂದಿದ್ದರೋ ಆ ರೀತಿ ಬದುಕಿದವರು. ನಮ್ಮ ಭಾಷೆ, ನಮ್ಮ ನೆಲದ ಮೇಲೆ, ಮೈಸೂರು ಮೇಲೆ ವಿಶೇಷ ಪ್ರೀತಿ ಇಟ್ಟಿದ್ದರು. ಇದು ನಮ್ಮೆಲ್ಲರಿಗೂ ಅತಿ ಹೆಚ್ಚು ಗೌರವವನ್ನು ತಂದಿದೆ. ಅವರು ಮೊದಲನೇ ಹಾಗೂ ಕೊನೆಯ ಹಾಡು ಹಾಡಿದ್ದು ಮೈಸೂರಿನಲ್ಲೇ. ಇದು ಕೂಡ ಬಹಳ ವಿಶೇಷವಾದಂತಹ ವಿಚಾರ ಎಂದರು‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸ್ತಿತ್ವದ ಹೋರಾಟದಲ್ಲಿ ‘ಏಕೈಕ’ ಜಾನಪದ ವಿವಿ
ಸರ್ಕಾರಿ ಶಾಲೆ ಮಕ್ಕಳಿಗೆ ದಾನಿಗಳಿಂದ ಸಮವಸ್ತ್ರ, ಪಠ್ಯಪುಸ್ತಕ, ಆಟಿಕೆ ವಿತರಣೆ