ಗದಗ: ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಸಾಂಸ್ಕೃತಿಕ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯ ಪರಿಣಾಮಕಾರಿ ಆಗಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳು ನಡೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ಐತಿಹಾಸಿಕ ವಸ್ತುವಿನ ಬಗ್ಗೆ ಅರಿವಿಲ್ಲದೆ ತಮ್ಮ ಹಿತ್ತಲಳೊಗೆ ಹುಗಿದು ಬಿದ್ದಿರುವ ಶಿಲೆಗಳು, ಗೋಡೆಗಳ ಮೇಲಿರುವ ಶಾಸನಗಳಾಗಿರಬಹುದು, ನಾಣ್ಯ, ಮನೆಯ ಕೆಳಗಿರುವ ಗುಡಿ ಅಥವಾ ಬಾವಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಅಂದಾಗ ಗ್ರಾಮದ ಮೇಲಿನ ಅಭಿಮಾನದಿಂದ, ತ್ಯಾಗ ಮನೋಭಾವದಿಂದ ಸ್ವಯಂ ಪ್ರೇರಣೆಯಿಂದ ಎಲ್ಲರು ಸಹಕಾರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗ್ರಾಪಂ ಸದಸ್ಯರು, ಪಿಡಿಓ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ, ರೂಟ್ ಮ್ಯಾಪ್ ಹಾಕಿಗೊಂಡು ಅಲಂಕಾರಿಕ ಪಾಲಿಕೆ ತೆಗೆದುಕೊಂಡು ಗ್ರಾಮದ ಪ್ರತಿ ಮನೆಗಳಿಗೆ ಹೋಗಿ ಅವರ ಮನೆಯಲ್ಲಿರುವ ಐತಿಹಾಸಿಕ ವಸ್ತುಗಳನ್ನು ಅವರ ಹೆಸರಿನಲ್ಲಿ ನೋಂದಾಯಿಸಿ ಸ್ವೀಕೃತ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.ಈ ವಿಶೇಷ ಅಭಿಯಾನ ಎಲ್ಲ ತಂಡಗಳು ಗುರಿ ಹೊಂದಿ ಕೆಲಸ ಮಾಡಿ ಕನಿಷ್ಟ 30-40 ಪ್ರಾಚ್ಯಾವಶೇಷ ವಸ್ತುಗಳನ್ನು ಸಂಗ್ರಹ ಮಾಡುವ ಕೆಲಸ ಆಗಬೇಕು, ಸಂಗ್ರಹವಾದ ಎಲ್ಲ ಐತಿಹಾಸಿಕ ವಸ್ತುಗಳನ್ನು ಸುರಕ್ಷಿತವಾಗಿ ಒಂಡೆಡೆ ಇರಿಸಬೇಕು. ಮುಂದೆ ನಿಯಮಾನುಸಾರ ಆಯುಕ್ತರು ಕೆಲಸ ಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಪ್ರವಾಸೋದ್ಯಮ ನಿರ್ದೇಶಕ ಡಾ. ಕೆ.ವಿ.ರಾಜೇಂದ್ರ ಮಾತನಾಡಿ, ಮನೆ ಮನೆಗೆ ಪಾಲಿಕೆ ತೆಗೆದುಕೊಂಡು ಹೋಗುವ ಮೊದಲೆ ಎನ್.ಸಿ.ಸಿ, ಸ್ತ್ರೀ ಶಕ್ತಿ ಗುಂಪು, ಸ್ವಯಂ ಸೇವಕರಿಗೆ ಐತಿಹಾಸಿಕ ವಸ್ತುಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಲಕ್ಕುಂಡಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಗ್ರಾಪಂ ಅಧ್ಯಕ್ಷ ಪೂಜಾರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್.ಎಸ್., ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಶರಣು ಗೊಗೇರಿ, ಎಸಿ ಗಂಗಪ್ಪ, ವೀರಯ್ಯಸ್ವಾಮಿ, ಅದ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.