ಹಂಪಿಯಲ್ಲಿ ಶೀಘ್ರವೇ ತಲೆ ಎತ್ತಲಿದೆ ಅತ್ಯಾಧುನಿಕ ಸ್ಟ್ರೀಟ್ ಫುಡ್ ಹಬ್

KannadaprabhaNewsNetwork |  
Published : May 08, 2026, 02:30 AM IST
ಫೋಟೋವಿವರ- (7ಎಚ್‌ಪಿಟಿ2)ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪಿಎಂ ಸ್ವನಿಧಿ ಯೋಜನೆಯಡಿ ಸ್ಟ್ರೀಟ್ ಫುಡ್ ಹಬ್ ಸ್ಥಾಪನೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿದರು | Kannada Prabha

ಸಾರಾಂಶ

ಸ್ಥಳೀಯ ಬೀದಿಬದಿ ವ್ಯಾಪಾರಿಗಳಿಗೂ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಸಿಗಲಿದೆ.

ಹೊಸಪೇಟೆ: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯಲ್ಲಿ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಒಂದೇ ಸೂರಿನಡಿ ತರಹೇವಾರಿ ಗುಣಮಟ್ಟದ ಆಹಾರ ಖಾದ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಅತ್ಯಾಧುನಿಕ ಸ್ಟ್ರೀಟ್ ಫುಡ್ ಹಬ್ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪಿಎಂ ಸ್ವನಿಧಿ ಯೋಜನೆಯಡಿ ಸ್ಟ್ರೀಟ್ ಫುಡ್ ಹಬ್ ಸ್ಥಾಪನೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಂಪಿಗೆ ಬರುವ ಸಾವಿರಾರು ದೇಶಿ​ವಿದೇಶಿ ಪ್ರವಾಸಿಗರಿಗೆ ಒಂದೇ ಸೂರಿನಡಿ ಸ್ವಚ್ಛ ಹಾಗೂ ವೈವಿಧ್ಯಮಯ ಆಹಾರಗಳನ್ನು ಒದಗಿಸುವುದು ಈ ಫುಡ್ ಹಬ್‌ನ ಮುಖ್ಯ ಉದ್ದೇಶವಾಗಿದೆ. ಇದರಿಂದ ಸ್ಥಳೀಯ ಬೀದಿಬದಿ ವ್ಯಾಪಾರಿಗಳಿಗೂ ಆರ್ಥಿಕ ಸಬಲೀಕರಣಕ್ಕೆ ಅವಕಾಶ ಸಿಗಲಿದೆ. ಹಂಪಿಯ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ಸಿಗಲಿದೆ.

ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳ ಉಪ ಘಟಕದಡಿ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಚಾಮುಂಡಿ ಬೆಟ್ಟ, ಬೇಲೂರು- ​ಹಳೇಬೀಡು, ಗಾಣಗಾಪುರ, ಪಟ್ಟದಕಲ್ಲು ಹಾಗೂ ಹಂಪಿ ಸೇರಿ ಐದು ಪ್ರದೇಶಗಳಲ್ಲಿ ಸ್ಟ್ರೀಟ್ ಫುಡ್ ಹಬ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಅದರಲ್ಲಿ ಹಂಪಿಯೂ ಸೇರಿದ್ದು, ಹೆಮ್ಮೆಯ ಸಂಗತಿ. ಈ ಸ್ಟ್ರೀಟ್ ಫುಡ್ ಹಬ್ ಸ್ಥಾಪಿಸಲು ಒಂದು ಕ್ಲಸ್ಟರ್‌ಗೆ ₹4 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ಮಳಿಗೆ ಸ್ಥಾಪಿಸಿ ವ್ಯಾಪಾರ ನಡೆಸಲು ಅನುಮತಿ ನೀಡಲಾಗುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಹಂಪಿ ಗ್ರಾಪಂ, ಕಮಲಾಪುರ ಪುರಸಭೆ ಜಂಟಿಯಾಗಿ ಕಾರ್ಯ ನಿರ್ವಹಿಸಲಿವೆ.

ಈಗಾಗಲೇ ಈ ಯೋಜನೆಗಾಗಿ ಮಳಿಗೆ ಸ್ಥಾಪಿಸಲು 3 ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಈಗಾಗಲೇ ದೊಡ್ಡ ಆಲದಮರದ ಎದುರು ಹಾಗೂ ಹಂಪಿ ಪಾರ್ಕಿಂಗ್ ಸ್ಥಳದ ಹತ್ತಿರ ಗುತ್ತಿಲ್ಯಾಂಡ್ ಸೇರಿ ಎರಡು ಕಡೆ ಸ್ಥಳ ಗುರುತಿಸಲಾಗಿದೆ. ಭೂಮಿ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ನಿಟ್ಟಿನಲ್ಲಿ ಒಂದು ಸ್ಟ್ರೀಟ್ ಫುಡ್ ಹಬ್‌ನಲ್ಲಿ 50 ವ್ಯಾಪಾರಸ್ಥರಿಗೆ ಅವಕಾಶವಿದೆ. ದೇಶ ವಿದೇಶಗಳಿಂದ ಆಹಾರ ಅರಸಿ ಬರುವವರಿಗೆ ಶುಚಿ ಮತ್ತು ರುಚಿಯಾದ ಶುದ್ಧ ಆಹಾರ ಒದಗಿಸಬೇಕು. ಜತೆಗೆ ಗ್ರಾಹಕರಿಗೆ ನೀರು, ನೆರಳು ಸೇರಿ ಅಗತ್ಯ ಮೂಲ ಸೌಕರ್ಯಗಳನ್ನೊಳಗೊಂಡಂತೆ ಮಳಿಗೆಗಳ ಸುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದರು.

ಈ ವೇಳೆ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ಹಂಪಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ರಮೇಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ದೇವರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರುಗಳಾಗಿ ವಂ| ಡೆನಿಸ್ ಡೆಸಾ ಅಧಿಕಾರ ಸ್ವೀಕಾರ
ತೊಟ್ಟಂ ಸಂತ ಅನ್ನಮ್ಮ ಚರ್ಚಿನ ನೂತನ ಧರ್ಮಗುರುಗಳಾಗಿ ವಂ| ಹೆನ್ರಿ ಮಸ್ಕರೇನ್ಹಸ್ ಅಧಿಕಾರ ಸ್ವೀಕಾರ