ಹರಪನಹಳ್ಳಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ತಾಲೂಕಿನ ಹಾರಕನಾಳು ಗ್ರಾಪಂ ವ್ಯಾಪ್ತಿ ಭಾರಿ ಅಕ್ರಮ ನಡೆದಿದೆ. ಸಮರ್ಪಕ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಹಾರಕನಾಳು ಭಾಗದ ರೈತ ಮುಖಂಡರು ವಿಜಯನಗರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥಗೆ ಗುರುವಾರ ಹರಪನಹಳ್ಳಿಯಲ್ಲಿ ಮನವಿ ಸಲ್ಲಿಸಿದರು.ಬೆಳೆ ವಿಮೆಗೆ ಸಂಬಂಧಪಟ್ಟಂತೆ ಸ್ಥಳೀಯ ಅಧಿಕಾರಿಗಳು ನಿಷ್ಪಕ್ಷಪಾತ, ನ್ಯಾಯಯುತವಾಗಿ ಕೆಲಸ ನಿರ್ವಹಿಸಿಲ್ಲ. ಬದಲಾಗಿ ಫಸಲ್ ಬಿಮಾ ಯೋಜನೆಯಲ್ಲಿ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದರು.
ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಅವೈಜ್ಞಾನಿಕ ವರದಿ ಸಲ್ಲಿಸಿರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಹೊಸ ಸಮಿತಿ ರಚಿಸಿ, ಪುನಃ ಮರುಪರಿಶೀಲನೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ರೈತರಾದ ಎಲ್.ಬಿ.ಹಾಲೇಶ ನಾಯ್ಕ, ಎಚ್.ಎಂ.ಬಸವರಾಜಯ್ಯ, ಭಾಷುಸಾಬ್, ಪುಟ್ಟನಾಯ್ಕ್, ಮಲ್ಲನಾಯ್ಕ ಹಾಲೇಶ, ಹರೀಶ್ಚಂದ್ರ, ಮಂಜನಾಥ ನಾಯ್ಕ್ ಆಗ್ರಹಿಸಿದ್ದಾರೆ.
ಹರಪನಹಳ್ಳಿ ಫಸಲ್ ಬಿಮಾ ಯೋಜನೆಯಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಹಾರಕನಾಳು ಭಾಗದ ರೈತ ಮುಖಂಡರು ವಿಜಯನಗರ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.