ತಪಾಸಣೆ ವೇಳೆ ಪತ್ತೆಯಾದ ಮೂವರು ನಕಲಿ ವೈದ್ಯರಿಗೆ ತಲಾ ₹50 ಸಾವಿರ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗಿದ್ದು, ಅವರಿಂದ ಸಂಗ್ರಹವಾಗುವ ದಂಡದ ಮೊತ್ತವನ್ನು ಸರ್ಕಾರಕ್ಕೆ ಭರಣ ಮಾಡಲಾಗುವುದು.

ಗದಗ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಜಿಲ್ಲಾಡಳಿತ ಕಠಿಣ ಹೆಜ್ಜೆ ಇಟ್ಟಿದ್ದು, ಅನಧಿಕೃತವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ವಿಶೇಷ ಪಡೆಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇತ್ತಿಚೆಗೆ ನಡೆದ ಜಿಲ್ಲಾ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಪಾಸಣೆ ವೇಳೆ ಪತ್ತೆಯಾದ ಮೂವರು ನಕಲಿ ವೈದ್ಯರಿಗೆ ತಲಾ ₹50 ಸಾವಿರ ದಂಡ ವಿಧಿಸಿ ಕಾನೂನು ಕ್ರಮ ಜರುಗಿಸಲಾಗಿದ್ದು, ಅವರಿಂದ ಸಂಗ್ರಹವಾಗುವ ದಂಡದ ಮೊತ್ತವನ್ನು ಸರ್ಕಾರಕ್ಕೆ ಭರಣ ಮಾಡಲಾಗುವುದು ಎಂದರು.ಜಿಲ್ಲೆಯಲ್ಲಿ ಕೆಪಿಎಂಇ ಅಡಿ ನೋಂದಣಿ ಮಾಡಿಕೊಳ್ಳದೆ ನಡೆಯುತ್ತಿರುವ ಯಾವುದೇ ಖಾಸಗಿ ಆಸ್ಪತ್ರೆ, ಲ್ಯಾಬ್, ಸ್ಕ್ಯಾನಿಂಗ್ ಸೆಂಟರ್, ಬ್ಲಡ್ ಬ್ಯಾಂಕ್ ಹಾಗೂ ಇತರೆ ಆರೋಗ್ಯ ಸಂಸ್ಥೆಗಳು ಈ ಪ್ರಕಟಣೆ ಹೊರಡಿಸಿದ 15 ದಿನಗಳೊಳಗೆ ಕಡ್ಡಾಯವಾಗಿ ಆನ್‌ಲೈನ್ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಕಾಯ್ದೆ ಪ್ರಕಾರ ಕಠಿಣ ಕ್ರಮ ಮತ್ತು ದಂಡ ವಿಧಿಸಲಾಗುವುದು. ನೋಂದಾಯಿತ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯ ನೋಂದಣಿ ಅವಧಿ ಮುಗಿಯುವ ಮೂರು ತಿಂಗಳು ಮೊದಲೇ, ಅಗತ್ಯ ದಾಖಲೆಗಳೊಂದಿಗೆ ನವೀಕರಣಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದರು.ಯಾವುದೇ ಸರ್ಕಾರಿ ಆಸ್ಪತ್ರೆಗಳ ಆವರಣದಿಂದ 200 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು ಕಾರ್ಯನಿರ್ವಹಿಸುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ, ಕೆಪಿಎಂಇ ನೋಡಲ್ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ, ಐಎಂಎ ಅಧ್ಯಕ್ಷ ಡಾ. ಶ್ರೀಧರ ಕುರಡಗಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಜುಬೇದ ತಿಗಳೆರ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ, ಡಾ. ಬಿ.ಎಸ್. ಭಜಂತ್ರಿ, ಡಾ. ಸುಭಾಸಚಂದ್ರ ದಾಯಗೊಂಡ, ಡಾ. ಸಂತೋಷಗೌಡ ಪಾಟೀಲ, ಡಾ. ಆರ್.ಸಿ. ಕೊರವನವರ ಸೇರಿದಂತೆ ಇತರರು ಇದ್ದರು.