ವಿಶೇಷ ವರದಿ

ಧಾರವಾಡ:

ಮಳೆ ಶುರುವಾಗುತ್ತಿದ್ದು ಎಲ್ಲೆಂದರಲ್ಲಿ ಕಸ ಸಂಗ್ರಹಣೆಯಿಂದ ಸೊಳ್ಳೆ-ಕ್ರಿಮಿಕೀಟ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹಾಗೂ ನಗರದ ಸೌಂದರ್ಯೀಕರಣ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾರ್ವಜನಿಕವಾಗಿ ಸಂಗ್ರಹಣೆಯಾಗುತ್ತಿರುವ ಕಸದ ನಿರ್ಮೂಲನೆಗೆ ಕಸರತ್ತು ನಡೆಸಿದೆ.

ಧಾರವಾಡದಲ್ಲಿ 100ಕ್ಕೂ ಹೆಚ್ಚು ಸಾರ್ವಜನಿಕ ಪ್ರದೇಶದಲ್ಲಿ ವಿವೇಚನಾ ರಹಿತ ಜನರು ನಿತ್ಯ ಕಸ ಎಸೆಯುತ್ತಿದ್ದಾರೆ. ಬೇಸರದ ಸಂಗತಿ ಏನೆಂದರೆ, ಹೆಚ್ಚಿನ ತಿಳಿವಳಿಕೆ, ಶಿಕ್ಷಣ ಇರುವ ಪ್ರದೇಶಗಳಲ್ಲಿಯೇ ಕಸ ಎಸೆಯುತ್ತಿರುವುದು ಪಾಲಿಕೆಗೆ ನುಂಗಲಾರದ ತುತ್ತಾಗಿದೆ. ಸಾಧನಕೇರಿ, ನಾರಾಯಣಪುರ, ಸಪ್ತಾಪೂರ, ಡಯಟ್‌ ರಸ್ತೆ, ಕಲ್ಯಾಣ್ ನಗರ, ರಪಾಟಿ ಕಲ್ಯಾಣ ಮಂಟಪದ ಎದುರು, ಕಾಲೇಜು ರಸ್ತೆ, ಮಾಳಮಡ್ಡಿ ಹಾಗೂ ನಗರದ ಹೊರ ವಲಯದ ಪ್ರದೇಶಗಳಲ್ಲಿ ರಸ್ತೆ ಬದಿಯೇ ಕಸ ಎಸೆಯುತ್ತಿದ್ದಾರೆ.

ಯಾವ ರೀತಿ ಪತ್ತೆ:


ಕಸ ಹಾಕುವಾಗಲೇ ಪಾಲಿಕೆ ಸಿಬ್ಬಂದಿ ಅವರನ್ನು ಹಿಡಿದು ದಂಡ ಹಾಕುತ್ತಿದ್ದರು. ಇದನ್ನರಿತ ಜನರು ರಾತ್ರಿ, ಯಾರೂ ಇಲ್ಲದ ವೇಳೆ ವಾಹನದಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದಾರೆ. ಆದ್ದರಿಂದ ಕಸದಲ್ಲಿರುವ ಮನೆಯ ಅಥವಾ ಅಂಗಡಿಗಳ ವಿವಿಧ ಬಿಲ್‌, ಆನ್ಲೈನ್‌ ಖರೀದಿ ಹಾಗೂ ವಸ್ತುಗಳನ್ನು ಆಧರಿಸಿ ಅವರ ಬಳಿಯೇ ಹೋಗಿ ದಂಡ ವಿಧಿಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಪಾಲಿಕೆ ವಲಯ ಕಚೇರಿ 3ರಲ್ಲಿ ಇಂತಹ ಬಿಲ್‌ಗಳನ್ನು ಆಧರಿಸಿ ಮೂವರಿಗೆ ₹ 15000 ದಂಡ ವಿಧಿಸಲಾಗಿದೆ.

ಕಸ ನಿರ್ವಹಣೆ ಬಗ್ಗೆ ಏನೆಲ್ಲಾ ಜಾಗೃತಿ ಕಾರ್ಯಕ್ರಮ, ದಂಡ ವಿಧಿಸುವುದು ಸೇರಿದಂತೆ ಹತ್ತಾರು ಕ್ರಮಗಳ ಮಧ್ಯೆಯೂ ಕೆಲವರು ಬೇಕಾಬಿಟ್ಟಿ ಕಸ ಎಸೆಯುತ್ತಿರುವುದು ನಗರದ ಸೌಂದರ್ಯೀಕರಣಕ್ಕೆ ಅಡ್ಡಿಯಾಗಿದೆ. ಜತೆಗೆ ಸಾಂಕ್ರಾಮಿಕ ರೋಗಗಳಿಗೂ ಆಹ್ವಾನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯು ಇದೀಗ ದಿಟ್ಟ ಕ್ರಮ ತೆಗೆದುಕೊಂಡಿದ್ದು, ಕಸ ಎಸೆಯುವವರಿಗೆ ದಂಡದ ಜೊತೆಗೆ ಕಸದ ಜಾಗವನ್ನು ಸ್ವಚ್ಛಗೊಳಿಸಿ ಇನ್ಮುಂದೆ ಕಸ ಎಸೆಯದಂತೆ ಎಚ್ಚರಿಕೆ ಕ್ರಮಗಳನ್ನು ನೀಡುತ್ತಿದೆ ಎಂದು ಪಾಲಿಕೆ ವಲಯ ಕಚೇರಿ 3ರ ಹಿರಿಯ ಆರೋಗ್ಯಾಧಿಕಾರಿ ಫಕ್ಕೀರೇಶ ಬೂದಿಹಾಳ ಮಾಹಿತಿ ನೀಡಿದರು.

ಧಾರವಾಡದ ಕಸದ ಸ್ಥಳಗಳ ಸ್ವಚ್ಛತೆ ಹಾಗೂ ಜನಜಾಗೃತಿಗಾಗಿ ಪಾಲಿಕೆಯು ವಿಶೇಷ ಅಭಿಯಾನ ಶುರು ಮಾಡಿದೆ. ಕಸದ ಜಾಗಗಳನ್ನು ಸ್ವಚ್ಛಗೊಳಿಸಿ ಅಲ್ಲಿ ಬೇಲಿ ಹಾಕಿ ರಂಗೋಲಿ ಹಾಕಲಾಗಿದೆ. ಇಷ್ಟಾಗಿಯೂ ಕಸ ಹಾಕಿದವರನ್ನು ಬರೀ ಸಿಸಿ ಕ್ಯಾಮೆರಾ ಮಾತ್ರವಲ್ಲದೇ ಅವರು ಬಿಟ್ಟು ಹೋದ ಕುರುಹಗಳ ಮೂಲಕ ದಂಡ ಹಾಕುತ್ತಿದ್ದೇವೆ. ಈ ಮೂಲಕ ಧಾರವಾಡ ನಗರವನ್ನು ಕಸ ಮುಕ್ತ ನಗರವಾಗಿರುವುದು ನಮ್ಮ ಗುರಿ ಎಂದು ಬೂದಿಹಾಳ ಹೇಳುತ್ತಾರೆ.

ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ಬರೀ ಪಾಲಿಕೆ ಮಾತ್ರವಲ್ಲದೇ ನಾಗರಿಕರು ಮತ್ತು ನಾಗರಿಕ ಸಂಸ್ಥೆಗಳ ಜವಾಬ್ದಾರಿಯೂ ಇದೆ. ಸಾರ್ವಜನಿಕರ ಸಹಕಾರವಿಲ್ಲದೆ ಯಾವುದೇ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯವಿಲ್ಲ. ಅಕ್ರಮವಾಗಿ ತ್ಯಾಜ್ಯ ಸುರಿಯುವವರ ಮೇಲೆ ಭಾರೀ ದಂಡ ವಿಧಿಸುತ್ತೇವೆ. ಧಾರವಾಡವು ವಿದ್ಯಾವಂತ ಮತ್ತು ಪ್ರಬುದ್ಧ ನಾಗರಿಕರಿಗೆ ಹೆಸರುವಾಸಿ. ಹೀಗಾಗಿ ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎಂದು ನಿರೀಕ್ಷಿಸುತ್ತೇವೆ.

ಅರವಿಂದ ಜಮಖಂಡಿ, ಪಾಲಿಕೆ ಸಹಾಯಕ ಆಯುಕ್ತರು