ರಾತ್ರೋ ರಾತ್ರಿ ಉದ್ಭವಿಸಿದ ಶ್ರೀಕೃಷ್ಣನ ಪ್ರತಿಮೆ

KannadaprabhaNewsNetwork |  
Published : Aug 31, 2024, 01:33 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್   | Kannada Prabha

ಸಾರಾಂಶ

ಹೊಸದುರ್ಗ ಪಟ್ಟಣದಲ್ಲಿ ರಾತ್ರೋ ರಾತ್ರಿ ಪ್ರತಿಷ್ಠಾಪನೆ ಮಾಡಲಾಗಿರುವ ಶ್ರೀಕೃಷ್ಣ ಪ್ರತಿಮೆ

ಹಿರಿಯೂರು ಮುಖ್ಯ ರಸ್ತೆಯಲ್ಲಿ ನೆಲೆ ನಿಂತ ಕೃಷ್ಣ । ತಾಲೂಕು, ಪುರಸಭೆ ಆಡಳಿತದ ಮೇಲೆ ಅನುಮಾನಕನ್ನಡಪ್ರಭ ವಾರ್ತೆ ಹೊಸದುರ್ಗ

ನಗರದಲ್ಲಿ ರಾತ್ರೋ ರಾತ್ರಿ ಶ್ರೀ ಕೃಷ್ಣ ಪ್ರತಿಮೆ ಉದ್ಭವಗೊಂಡಿದ್ದು ಬೆಳ್ಳಂ ಬೆಳಗ್ಗೆ ದಾರಿಹೋಕರು ಪ್ರತಿಮೆ ನೋಡಿ ಅಚ್ಚರಿಗೊಂಡಿದ್ದಾರೆ.

ಯಾರು ಪ್ರತಿಷ್ಠಾಪನೆ ಮಾಡಿದರು ಎಂಬುದಕ್ಕೆ ಪೊಲೀಸರ ಬಳಿಯಾಗಲೀ, ಸ್ಥಳೀಯ ಆಡಳಿತದಲ್ಲಾಗಲಿ ಯಾವುದೇ ಕುರುಹುಗಳಿಲ್ಲ. ಹೊಸದುರ್ಗದಲ್ಲಿ ಯಾರು ಎಲ್ಲಿ ಬೇಕಾದರೂ ಸಮುದಾಯದ ಮಹನೀಯರ ಪ್ರತಿಮೆಗಳನ್ನು ರಾತ್ರೋ ರಾತ್ರಿ ಪ್ರತಿಷ್ಠಾಪಿಸಬಹುದು. ಇಂತಹ ಸನ್ನಿವೇಶಕ್ಕೆ ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ಅವಕಾಶ ಕೊಟ್ಟಿತಾ ಎಂಬ ಅನುಮಾನಗಳು ಮೂಡಿವೆ.

ಹೊಸದುರ್ಗದ ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದಲ್ಲಿ ತೋಟಗಾರಿಕೆ ಇಲಾಖೆಗೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಪುರಸಭೆ ವಾಣಿಜ್ಯ ಮಳಿಗೆ ನಿರ್ಮಾಣಕ್ಕಾಗಿ ಮೀಸಲಿಟ್ಟಿತ್ತು. ಇದೇ ಪ್ರದೇಶದಲ್ಲಿನ ಹಿರಿಯೂರು ಮುಖ್ಯ ರಸ್ತೆಯ ಭಾಗದಲ್ಲಿ ರಾತ್ರೋ ರಾತ್ರಿ ಶ್ರೀ ಕೃಷ್ಣನ ಪ್ರತಿಮೆ ಸ್ಥಾಪಿಸಲಾಗಿದೆ.

ಜಾಗದ ಬಗ್ಗೆಯೂ ಸ್ಪಷ್ಪತೆ ಇಲ್ಲ: ಶ್ರೀ ಕೃಷ್ಣಾ ಪ್ರತಿಮೆ ಸ್ಥಾಪನೆಗೆ ಸರ್ಕಾರ ಹಾಗೂ ಪುರಸಭೆಯಿಂದ ಅನುಮತಿ ಪಡೆಯಲಾಗಿದೆಯಾ ಎನ್ನುವುದಕ್ಕೆ ಯಾವುದೇ ಅಧಿಕಾರಿಗಳ ಬಳಿ ಉತ್ತರವಿಲ್ಲ. ಅಲ್ಲದೆ ಜಾಗ ಯಾರಿಗೆ ಸೇರಿದ್ದೂ ಎನ್ನುವುದು ಅಧಿಕಾರಿಗಳಿಗೆ ಗೊತ್ತಿಲ್ಲ. ಪುರಸಭೆ ಮುಖ್ಯಾಧಿಕಾರಿಯವರು ಸರ್ವೆ ನಂಬರನಲ್ಲಿದೆ. ಆದರೆ ಪುರಸಭೆ ದಾಖಲೆಯಲ್ಲಿಲ್ಲ ಎಂದು ಹೇಳುತ್ತಿದ್ದು, ತಹಸೀಲ್ದಾರ್‌ ಅವರು ಶ್ರೀಕೃಷ್ಣಾ ಪ್ರತಿಮೆ ಸ್ಥಾಪಿಸಿದ ಸ್ಥಳ ಅದು ಕೆರೆ ಅಂಗಳವಾಗಿದ್ದು, ಈ ಕುರಿತು ದಾಖಲೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಒಂದೇ ರಾತ್ರಿಯಲ್ಲಿ ಶ್ರೀಕೃಷ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿಲ್ಲ. ವಾರದ ಹಿಂದೆ ಗುಂಡಿ ತೆಗೆಯಲಾಗಿತ್ತು. ಗುಂಡಿ ತೆಗೆದಿರುವ ಬಗ್ಗೆ ಆ ವಾರ್ಡ್‌ನ ಸದಸ್ಯರು ಪುರಸಭೆ ಮುಖ್ಯಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೂ ಮುಖ್ಯಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ಪ್ರತಿಮೆ ಸ್ಥಾಪನೆ ಮಾಡಿದ್ದಾರೆ ಎನ್ನುವ ಅಸಮಾದಾನದ ಮಾತುಗಳು ಪುರಸಭೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಚಿತ್ರದುರ್ಗದಲ್ಲಿಯೂ ಇವೆ ಉದ್ಭವ ಮೂರ್ತಿಗಳು:

ರಾತ್ರೋರಾತ್ರಿ ಉದ್ಭವ ಮೂರ್ತಿಗಳಾಗಿ ನಂತರ ಕಂಗೊಳಿಸಿರುವ ಪ್ರತಿಮೆಗಳಿಗೆ ಚಿತ್ರದುರ್ಗ ನಗರದಲ್ಲಿಯೂ ಇತಿಹಾಸವಿದೆ. ಚಿತ್ರದುರ್ಗ ನಗರದಿಂದ ಮಾಳಪ್ಪನ ಹಟ್ಟಿಗೆ ಹೋಗುವ ರಸ್ತೆಯಲ್ಲಿ 4 ರಸ್ತೆಗಳು ಕೂಡುವ ಮಾರ್ಗದಲ್ಲಿ ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಸೋಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ಹೆದ್ದಾರಿಗೆ ಸೇರಿದ ಜಾಗದಲ್ಲಿಯೇ ಪ್ರತಿಮೆ ನಿಲ್ಲಿಸಲಾಗಿದೆ. ಯಾರ ಅನುಮತಿಯನ್ನು ಪಡೆದಿಲ್ಲ. ಅದೀಗ ಅಧೀಕೃತವೆಂಬಂತಾಗಿದೆ.

ಇದಲ್ಲದೆ ಚಿತ್ರದುರ್ಗದಿಂದ ಹೊಳಲ್ಕೆರೆಗೆ ತೆರಳುವ ಮಾರ್ಗದಲ್ಲಿ ಮಂಗಳೂರು-ಸೊಲ್ಲಾಪುರ ಹೆದ್ದಾರಿ ಕೂಡುವ ಮಾರ್ಗದಲ್ಲಿ ತ್ರಿಕೋನಾಕಾರದ ಭೂಮಿ ಖಾಲಿ ಉಳಿದಿತ್ತು. ಆರು ತಿಂಗಳ ಹಿಂದೆ ರಾತ್ರೋ ರಾತ್ರಿ ಇಲ್ಲಿ ಶ್ರೀಕೃಷ್ಣನ ಪ್ರತಿಮೆ ನಿಲ್ಲಿಸಲಾಗಿದೆ. ಯಾರ ಅನುಮತಿಯನ್ನು ಪಡೆಯಲಾಗಿಲ್ಲ. 4 ದಿನದ ಹಿಂದೆ ನಡೆದ ಶ್ರೀೃಷ್ಣ ಜಯಂತಿಯನ್ನುಇದೇ ವೃತ್ತದಲ್ಲಿ ಆಚರಿಸಲಾಗಿತ್ತು. ಹೆಚ್ಚು ಕಡಿಮೆ ಇದು ಅಧೀಕೃತವಾದಂತಾಗಿದೆ.

ಇನ್ನೂ ಹಿರಿಯೂರು ಪಟ್ಟಣದಲ್ಲಿ ಆರು ತಿಂಗಳ ಹಿಂದೆ ರಾಷ್ಟ್ರಕವಿ ಕುವೆಂಪು ಹಾಗೂ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಪುತ್ಥಳಿಗಳ ರಾತ್ರೋರಾತ್ರಿ ಎರಡು ಕಡೆ ಪ್ರತಿಷ್ಠಾಪನೆ ಮಾಡಲಾಯಿತು. ಆದರೆ ಅಲ್ಲಿನ ಸ್ಥಳೀಯ ಆಡಳಿತ ಈ ಅಕ್ರಮಕ್ಕೆ ಅವಕಾಶ ಮಾಡಿಕೊಡಲಿಲ್ಲ. ಎರಡೂ ಪುತ್ಥಳಿಗಳ ತೆರವುಗೊಳಿಸಿತ್ತು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ