ದೊಡ್ಡಬಳ್ಳಾಪುರ: ಭೀಮಾ ಕೋರೆಗಾಂವ್ ವಿಜಯ ದಿನವು ಈ ದೇಶದಲ್ಲಿ ಧಮನಿತರ ಕುರಿತ ಚರಿತ್ರೆಯ ವಂಚನೆ ಮತ್ತು ದಬ್ಬಾಳಿಕೆಯನ್ನು ಬಯಲು ಮಾಡುತ್ತದೆ ಎಂದು ಡಾ.ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯದ ಸವಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾನತೆ, ಸ್ವಾತಂತ್ರ್ಯ ಹಾಗೂ ಭ್ರಾತೃತ್ವದ ಪ್ರತೀಕವಾಗಿ ಈ ವಿಜಯೋತ್ಸವವನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಅಸ್ಪೃಶ್ಯ ಜಾತಿಗಳು ಚರಿತ್ರೆಯಲ್ಲಿ ಶೋಷಿತರ ವಿರೋಧಿ ಹಾಗೂ ಜಾತಿ ತಾರತಮ್ಯದ ಭಾಗವಾಗಿದ್ದ ಬ್ರಾಹ್ಮಣ್ಯದ ಪೇಶ್ವೆಗಳ ವಿರುದ್ಧ ಸ್ವಾಭಿಮಾನಕ್ಕಾಗಿ ನಡೆಸಿದ ಹೋರಾಟವಾಗಿದೆ. ಇದು ಎಲ್ಲ ಗುಲಾಮಗಿರಿಯ ವಿರುದ್ದ ಮಹಾರ್ ಸೈನಿಕರು ನಡೆಸಿದ ಯುದ್ಧವಾಗಿದೆ. ಈ ಚರಿತ್ರೆ ಬಚ್ಚಿಟ್ಟ ನೆನಪುಗಳು ಧಮನಿತರ ಸಾಹಸಗಾಥೆಯಾಗಿದೆ. ಈ ಕಾರಣದಿಂದಲೇ ಬಾಬಾ ಸಾಹೇಬರು ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರೆಂದು ಹೇಳಿರುವುದು ಎಂದು ತಿಳಿಸಿದರು.ಕನ್ನಡ ಪ್ರಾಧ್ಯಾಪಕ ಡಾ.ಪ್ರಕಾಶ್ ಮಂಟೇದ ಮಾತನಾಡಿ, ಚರಿತ್ರೆಯಲ್ಲಿ ಸತ್ಯಗಳನ್ನು ಬಚ್ಚಿಟ್ಟು ಈ ಸಮಾಜದ ಮೇಲ್ಪದರ ಜನರ ಅನುಕೂಲಕ್ಕೆ ತಕ್ಕಂತೆ ತಿರುಚಲಾಗಿದೆ. ದಲಿತರು, ಶೋಷಿತರು ಚರಿತ್ರೆಯಲ್ಲಿ ಸದಾ ಅಧೀನರಾಗಿರಲಿಲ್ಲ. ಇದನ್ನು ಕೋರೆಗಾಂವ್ ವಿಜಯವೋತ್ಸವೇ ಹೇಳುತ್ತದೆ. ಬಾಬಾ ಸಾಹೇಬರು ಇಂಡಿಯಾದ ಚರಿತ್ರೆಯನ್ನು ಹೇಗೆ ಗ್ರಹಿಸಬೇಕೆಂದೂ ಸಹ ಹೇಳಿಕೊಟ್ಟಿದ್ದಾರೆ. ಸ್ವದೇಶಿ ಜನವಿರೋಧೀ ಶಕ್ತಿಗಳ ಗುಲಾಮಗಿರಿಯ ವಿರುದ್ಧ ಸ್ವಾತಂತ್ರ್ಯ ಸಾಧಿಸದೆ ಕೇವಲ ರಾಜಕೀಯವಾಗಿ ಸ್ವಾತಂತ್ರ್ಯ ಪಡೆಯುವುದು ಅಗತ್ಯವಿರಲಿಲ್ಲ ಎಂಬುದು ಬಾಬಾ ಸಾಹೇಬರಿಗೆ ಅರಿವಿತ್ತು.
ಹಾಗಾಗಿ ಕೋರೆಗಾಂವ್ ವಿಜಯದ ನೆನಪು ಭಾರತದ ಗುಲಾಮಗಿರಿಯ ಎಲ್ಲ ಸಂಕೋಲೆಗಳಿಂದ ಮುಕ್ತರಾಗುವ ಚರಿತ್ರೆಯನ್ನು ಹೇಳುತ್ತದೆ. ಈ ದೃಷ್ಟಿಯಿಂದ ಕೋರೆಗಾಂವ್ ನ ವಿಜಯವನ್ನು ಶೂದ್ರಾತಿಶೂದ್ರರು, ಎಲ್ಲ ದಮನಿತರು ನೆನೆಯಬೇಕಾಗುತ್ತದೆ ಎಂದರು.ಕಾಲೇಜಿನ ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ರಂಗಸ್ವಾಮಿ, ಪ್ರಾಂಶುಪಾಲ ಸದಾಶಿವ ರಾಮಚಂದ್ರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹೇಮಂತ್ ಕುಮಾರ್ ಬಾಬಾ ಸಾಹೇಬರ ಗೀತೆಗಳನ್ನು ಹಾಡಿದರು. ಡಾ. ಬಿ ಆರ್ .ಗಂಗಾಧರಯ್ಯ, ಪ್ರೊ.ಉಮೇಶ್ ಸೇರಿದಂತೆ ಎಲ್ಲ ಅಧ್ಯಾಪಕರು ಪಾಲ್ಗೊಂಡಿದ್ದರು.
1ಕೆಡಿಬಿಪಿ3-ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೀಮಾ-ಕೋರೆಗಾಂವ್ ವಿಜಯ ದಿನಾಚರಣೆ ನಡೆಯಿತು.