ಕನ್ನಡಪ್ರಭ ವಾರ್ತೆ ವಿಜಯಪುರಕಲೆ ಎಂದೆಂದಿಗೂ ಶಾಶ್ವತ. ಅಮರಶಿಲ್ಪಿ ಜಕಣಾಚಾರಿಯಂತಹ ಮಹನೀಯರ ಕುರಿತು ತಿಳಿದುಕೊಂಡು ಅವರ ಕಲೆಯ ಕುರಿತು ಸ್ಫೂರ್ತಿ ಪಡೆದು, ಶಿಲ್ಪಕಲೆಯಲ್ಲಿ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ನಂತರ ಉಪನ್ಯಾಸ ನೀಡಿದ ಡಾ. ಮಾಧವ ಎಚ್. ಗುಡಿ ಮಾತನಾಡಿ, ಕಲ್ಲಿನಲ್ಲಿ ಹೂ ಅರಳಿಸಿದವರು ಜಕಣಾಚಾರಿ. ಸತತ 26 ವರ್ಷಗಳ ಕಾಲ ಕೆತ್ತನೆಯ ಕಾಯಕ ಎಂದು ಬದುಕಿದ ಮಹನೀಯರು. ವಿಶ್ವ ಪ್ರಸಿದ್ಧ ಬೇಲೂರು ಹಾಗೂ ಹಳೇಬೀಡು ದೇವಾಲಯಗಳನ್ನು ದ್ರಾವಿಡ ಶೈಲಿಯಲ್ಲಿ ಕಟ್ಟಿ ಮರೆಯಲಾಗದ ಕಾಣಿಕೆ ನೀಡಿದ್ದಾರೆ. ಅವರ ಶಿಲ್ಪ ಕಲೆಯ ಗಮನಿಸಿದ ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಅವರಿಗೆ ಬೇಲೂರಿನ ಚನ್ನಕೇಶವ ದೇವಸ್ಥಾನ ಕಟ್ಟಲು ಅನುಮತಿ ಕೊಟ್ಟರು. ಅದನ್ನು ಜಕಣಾಚಾರಿ ಅವರು ನಿರ್ಮಿಸಿ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಥಗಳನ್ನು ನಿರ್ಮಿಸುವಲ್ಲಿ ಪರಿಣಿತರಾದ ಪಾಂಡುರಂಗ ಬಡಿಗೇರ ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಪೂಜ್ಯ ಮೂರುಜಾವ ಮಠದ ಮಹೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ ಉಪಸ್ಥಿತರಿದ್ದರು. ಸಂಗೀತ ಕಾರ್ಯಕ್ರಮವನ್ನು ಪ್ರಜ್ಞಾ ಮೇತ್ರಿ ಪಾಟೀಲ ಪ್ರಸ್ತುತ ಪಡಿಸಿದರು.
ಅದ್ಧೂರಿ ಮೆರವಣಿಗೆ: ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹಮ್ಮಿಕೊಂಡ ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಾಹಾದೇವ ಮುರಗಿ ಚಾಲನೆ ನೀಡಿದರು. ಮೆರವಣಿಗೆ ವಿವಿಧ ಕಲಾ ತಂಡಗಳೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತದಿಂದ ನಗರದ ಶ್ರೀ ಕಂದಗಲ ಹನುಮಂತರಾಯ ರಂಗಮಂದಿರವರೆಗೆ ನಡೆಯಿತು.