ಕನ್ನಡಕ್ಕೆ 96 ಅಂಕ ಪಡೆದ ವಿದ್ಯಾರ್ಥಿನಿಗೆ ಕೊಟ್ಟಿದ್ದು 37!

KannadaprabhaNewsNetwork |  
Published : Apr 28, 2026, 02:00 AM IST
27ಕೆಪಿಎಲ್21,  ಕೇವಲ  37 ಅಂಕ ನೀಡಿರುವ ಅಂಕಪಟ್ಟಿ 27ಕೆಪಿಎಲ್22  ಉತ್ತರ ಪತ್ರಿಕೆಯಲ್ಲಿ 96 ಅಂಕ ಬಂದಿರುವುದು. | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಸಂಜನಾ ಮಂಜುನಾಥ ಮಡಿವಾಳರ ಎನ್ನುವ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 96 ಅಂಕ ಪಡೆದಿದ್ದರೂ ಅಂಕಪಟ್ಟಿಲಲ್ಲಿ 37 ಅಂಕಗಳನ್ನು ನೀಡಿ, ಫೇಲ್ ಎಂದು ನಮೂದಿಸಲಾಗಿತ್ತು. ಉತ್ತರ ಪತ್ರಿಕೆ ತರಿಸಿ ನೋಡಿದಾಗ ನಿಜಅಂಶ ತಿಳಿಯಿತು.

ಕೊಪ್ಪಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 96 ಅಂಕ ಪಡೆದಿದ್ದರೂ ಕೇವಲ 37 ಅಂಕಗಳನ್ನು ನೀಡಿ, ಫೇಲ್ ಮಾಡಿದ್ದರಿಂದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿದೆ.

ಅದೃಷ್ಟವಶಾತ್ ಅದೇ ವೇಳೆಗೆ ಮನೆಗೆ ಬಂದ ಶಾಲೆಯ ಶಿಕ್ಷಕರು ಆಕೆಗೆ ಬುದ್ಧಿಹೇಳಿ, ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆದಾಗ ಬಂದ ಅಂಕ ಬರೋಬ್ಬರಿ 96!

ತಾಲೂಕಿನ ಕಾತರಕಿ ಗ್ರಾಮದ ಸಂಜನಾ ಮಂಜುನಾಥ ಮಡಿವಾಳರ ಎನ್ನುವ ವಿದ್ಯಾರ್ಥಿನಿ ಫಲಿತಾಂಶ ನೋಡಿ ಆಘಾತಕ್ಕೆ ಒಳಗಾಗಿದ್ದಳು. ಕನ್ನಡ ಪರೀಕ್ಷೆಯನ್ನು ನಾನು ಚೆನ್ನಾಗಿ ಬರೆದಿದ್ದೇನೆ. ಇತರ ವಿಷಯಗಳಿಗಿಂತ ನನಗೆ ಕನ್ನಡವೇ ಅಚ್ಚುಮೆಚ್ಚು. ಆದರೂ ಕನ್ನಡದಲ್ಲಿ ಫೇಲಾಗಿದ್ದು ಯಾಕೆ ಎಂದು ಚಿಂತಿತಳಾದಳು. ತಾನು ಇನ್ನು ಬದುಕಿರಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಳು.

ವಿದ್ಯಾರ್ಥಿನಿ ಮನನೊಂದುಕೊಂಡಿದ್ದಾಳೆ ಎಂಬುದನ್ನು ಅರಿತಿದ್ದ ಶಾಲೆಯ ಶಿಕ್ಷಕರು ಆಕೆಯ ಮನೆಗೆ ಆಗಮಿಸಿದ್ದಾರೆ. ಘಾಸಿಗೊಂಡು ಕೆಟ್ಟ ಯೋಚನೆ ಮಾಡುವಾಗ ಬುದ್ಧಿ ಹೇಳಿದ್ದಾರೆ. ಚೆನ್ನಾಗಿ ಬರೆದಿರುವ ವಿಶ್ವಾಸವಿದ್ದರೆ ಉತ್ತರ ಪತ್ರಿಕೆಯ ಪ್ರತಿ ಪಡೆಯಬಹುದು. ಅದನ್ನು ಪಡೆದರೆ ಎಲ್ಲವೂ ಸ್ಪಷ್ಟವಾಗುತ್ತದೆ ಎಂದು ಹೇಳಿದರು. ಆನಂತರ ತಂದೆ ಮಂಜುನಾಥ ಮಡಿವಾಳರ ಮಗಳೊಂದಿಗೆ ಕೊಪ್ಪಳಕ್ಕೆ ಆಗಮಿಸಿ ₹610 ಪಾವತಿಸಿ, ಸೋಮವಾರ ಉತ್ತರ ಪತ್ರಿಕೆ ಪಡೆದ ಮೇಲೆ ಆಕೆ ಪಡೆದಿರುವುದು 37 ಅಲ್ಲ, 96 ಅಂಕ ಎನ್ನುವುದು ಗೊತ್ತಾಗಿದೆ.

ಮೊದಲು ಎಲ್ಲ ವಿಷಯಗಳು ಸೇರಿ 389 ಅಂಕಗಳನ್ನು ನೀಡಿದ್ದರು. ಆದರೀಗ 59 ಅಂಕಗಳು ಕನ್ನಡಕ್ಕೆ ಹೆಚ್ಚುವರಿಯಾಗಿ ಬಂದಿದ್ದರಿಂದ ಆಕೆಯ ಒಟ್ಟು ಅಂಕ 448 ಆಗಿದ್ದು, ಫಸ್ಟ್‌ಕ್ಲಾಸ್‌ನಲ್ಲಿ ಪಾಸಾಗಿದ್ದಾಳೆ. ಫೇಲಾಗಿದ್ದ ವಿದ್ಯಾರ್ಥಿನಿ ಸಂಜನಾ ಈಗ ಉತ್ತರ ಪತ್ರಿಕೆ ಪಡೆದ ನಂತರ ಫಸ್ಟ್‌ಕ್ಲಾಸ್. ಇದೆಲ್ಲವೂ ಎಸ್‌ಎಸ್‌ಎಲ್‌ಸಿ ಬೋರ್ಡ್‌ನಿಂದ ಆಗಿರುವ ಯಡವಟ್ಟು.

ಕನ್ನಡದಲ್ಲಿಯೇ ಫೇಲಾಗಿದ್ದಕ್ಕೆ ತುಂಬಾ ನೋವಾಗಿತ್ತು. ಹೀಗಾಗಿ, ನಾನು ಮನನೊಂದಿದ್ದೆ, ಅದೃಷ್ಟಕ್ಕೆ ಶಿಕ್ಷಕರು ಮನೆಗೆ ಬಂದಿದ್ದರಿಂದ ಉತ್ತರ ಪತ್ರಿಕೆ ಪಡೆಯುವಂತಾಯಿತು ಎಂದು ವಿದ್ಯಾರ್ಥಿನಿ ಸಂಜನಾ ಮಡಿವಾಳರ ಹೇಳುತ್ತಾಳೆ. ನನ್ನ ಮಗಳು ಕನ್ನಡ ಫೇಲಾಗಿದ್ದಕ್ಕೆ ಮಾನಸಿಕವಾಗಿ ನೊಂದಿದ್ದಳು. ಈ ರೀತಿ ಫಲಿತಾಂಶ ಕೊಡುವವರ ವಿರುದ್ಧ ಕ್ರಮವಾಗಬೇಕು. 96 ಅಂಕ ಪಡೆದವರಿಗೆ 37 ಅಂಕ ಕೊಟ್ಟರೆ ಹೇಗೆ? ಎಂದು ವಿದ್ಯಾರ್ಥಿನಿ ತಂದೆ ಮಂಜುನಾಥ ಮಡಿವಾಳರ ಪ್ರಶ್ನಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಅಂಬೇಡ್ಕರ್‌ ಸಮಾನತೆ ನೀಡಿದ ಮಹಾ ನಾಯಕ: ರಾಘವೇಂದ್ರ ಹಿಟ್ನಾಳ
ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಿವರಾಜ ತಂಗಡಗಿ