ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ । ಸಮಗ್ರ ಚರ್ಚೆ ನಂತರ ಅನುಷ್ಠಾನ: ಡಿಸಿ ವೆಂಕಟೇಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಸಂಚಾರ ದಟ್ಟಣೆ ಹಾಗೂ ಸಮಸ್ಯೆ ಕುರಿತು ಸಂಚಾರ ಠಾಣೆ ಪೊಲೀಸರು ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಸೂಕ್ತ ವರದಿ ಸಿದ್ದಪಡಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಅವಲೋಕಿಸಿ ಅನುಷ್ಠಾನ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುರುವನೂರು ರಸ್ತೆಯಿಂದ ಜಿಲ್ಲಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಜಿಲ್ಲಾ ಆಸ್ಪತ್ರೆ ಮುಂಭಾಗ ಬಿ.ಡಿ. ರಸ್ತೆಯಲ್ಲಿನ ಡಿವೈಡರ್ ತೆರವುಗೊಳಿಸಿ ಆಸ್ಪತ್ರೆಗೆ ಹೋಗಲು ಅನುಕೂಲ ಮಾಡಿಕೊಡಬೇಕು. ಮೆದೆಹಳ್ಳಿ ಅಂಡರ್ ಪಾಸ್ ಬಳಿ ರಸ್ತೆಯ ಮಧ್ಯದಲ್ಲಿ ಒಳಚರಂಡಿ ದುರಸ್ಥಿಯಲ್ಲಿ ಇದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ನಗರ ರಸ್ತೆಗಳಲ್ಲಿ ಬಿಡಾಡಿ ದನಗಳ ಸಂಚಾರ ಅಧಿಕವಾಗಿದೆ. ಗೂಡಂಗಡಿಗಳು ಸಹ ಹೆಚ್ಚಾಗಿವೆ ಇದರಿಂದ ಲಘು ಅಪಘಾತಗಳು ಉಂಟಾಗುವ ಸಂಭವವಿದೆ ಎಂದು ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಟಿ. ರಾಜು ಸಭೆಯಲ್ಲಿ ವಿವರಿಸಿದರು.
*ಪಾರ್ಕಿಂಗ್ ಮಾರ್ಕಿಂಗ್ ಟೆಂಡರ್: ನಗರದ ಪಾರ್ಕಿಂಗ್ ಸ್ಥಳಗಳಲ್ಲಿ ಮಾರ್ಕಿಂಗ್ ಮಾಡಲು ₹14.63 ಲಕ್ಷ ಅಂದಾಜು ಪಟ್ಟಿ ತಯಾರಿಸಲಾಗಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ನಗರ ಸಭೆ ಆಯುಕ್ತೆ ಎಂ.ರೇಣುಕಾ ಸಭೆಯಲ್ಲಿ ಮಾಹಿತಿ ನೀಡಿದರು.
ಹಿರಿಯೂರು ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಇರುವುದರಿಂದ, ಹೆದ್ದಾರಿ ಪಕ್ಕದಲ್ಲಿಯೇ ವಾಹನ ನಿಲ್ಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದಲೂ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಇಲ್ಲಿನ ರಸ್ತೆ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸದಂತೆ ಹಿರಿಯೂರು ಬಳಿ 20 ಎಕೆರೆ ವಿಸ್ತೀರ್ಣದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಹಿರಿಯೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿರುವ ಎಲ್ಲಾ ಗೂಡಂಗಡಿ, ಹೋಟೆಲ್ ಹಾಗೂ ಡಾಬಾಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಹೆದ್ದಾರಿ ಪ್ರಾಧಿಕಾರ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 20 ವರ್ಷ ಪೂರೈಸಿದ ವಾಹನಗಳ ನೊಂದಣಿ ರದ್ದು :ಕಡ್ಲೆಗುದ್ದು ಹಾಗೂ ಸಾಸಲು ರಸ್ತೆಗಳಲ್ಲಿ ಅದಿರು ತುಂಬಿರುವ ಬೃಹತ್ ವಾಹನಗಳು ಸಂಚಾರ ಮಾಡುತ್ತಿವೆ. ಈ ವಾಹನಗಳಿಂದ ರಸ್ತೆ ಹಾಳಾಗುವುದರ ಜೊತೆ ಪರಿಸರ ಮಾಲಿನ್ಯವು ಉಂಟಾಗುತ್ತಿದೆ. ಈ ವಾಹನಗಳ ಪೈಕಿ 20 ವರ್ಷ ಪೂರೈಸಿದ ವಾಹನಗಳ ನೊಂದಣಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರದ್ದು ಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯುವುದು ಕಂಡುಬರುತ್ತಿದೆ ಇದಕ್ಕೆ ಕಡಿವಾಣ ಹಾಕುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ಷ