ಈರುಳ್ಳಿಗೆ ₹2500 ಬೆಂಬಲ ಬೆಲೆ ಘೋಷಿಸಬೇಕು

KannadaprabhaNewsNetwork |  
Published : Aug 27, 2026, 01:45 AM IST
26ಕೆಡಿವಿಜಿ6-ದಾವಣಗೆರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ, ಪದಾಧಿಕಾರಿಗಳು ಕೊರಳಲ್ಲಿ ಈರುಳ್ಳಿ ಹಾರವನ್ನು ಹಾಕಿಕೊಂಡು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮಳೆ ಕೊರತೆಯಿಂದಾಗಿ ಇಳುವರಿ ಕುಂಠಿತವಾಗಿ ಸಂಕಷ್ಟಕ್ಕೆ ಈಡಾಗಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ಜೊತೆಗೆ, ಈರುಳ್ಳಿಗೆ ₹2500 ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳ ಮೂಲಕ ಈರುಳ್ಳಿ ಬೆಳೆ ಖರೀದಿಗೆ ಮುಂದಾಗಲಿ ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಒತ್ತಾಯಿಸಿದ್ದಾರೆ.

- ರಾಜ್ಯದಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ಈರುಳ್ಳಿ ಬೆಳೆಗಾರರ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಳೆ ಕೊರತೆಯಿಂದಾಗಿ ಇಳುವರಿ ಕುಂಠಿತವಾಗಿ ಸಂಕಷ್ಟಕ್ಕೆ ಈಡಾಗಿರುವ ಈರುಳ್ಳಿ ಬೆಳೆಗಾರರ ನೆರವಿಗೆ ಸರ್ಕಾರ ಧಾವಿಸಬೇಕು. ಜೊತೆಗೆ, ಈರುಳ್ಳಿಗೆ ₹2500 ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳ ಮೂಲಕ ಈರುಳ್ಳಿ ಬೆಳೆ ಖರೀದಿಗೆ ಮುಂದಾಗಲಿ ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ ಒತ್ತಾಯಿಸಿದ್ದಾರೆ.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಬರಗಾಲದಲ್ಲೂ ರೈತರು ಪ್ರತಿ ಎಕರೆಗೆ ₹70-₹80 ಸಾವಿರ ಖರ್ಚು ಮಾಡಿ, ಅಲ್ಲಲ್ಲಿ ಅಲ್ಪಸ್ಪಲ್ಪ ಈರುಳ್ಳಿ ಬೆಳೆದಿದ್ದರೂ ಅದಕ್ಕೆ ಬೆಲೆಯೇ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ₹2500 ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ಸ್ಥಾಪಿಸುವ ಮೂಲಕ ಈರುಳ್ಳಿ ಖರೀದಿಸಲಿ ಎಂದರು.

ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆ ಬಾಂಗ್ಲಾ ದೇಶದಿಂದ ಈರುಳ್ಳಿಯನ್ನು ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿದೆ. ಇದರಿಂದಾಗಿ ಸ್ಥಳೀಯ ಈರುಳ್ಳಿ ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈರುಳ್ಳಿ ಖರೀದಿ ಕೇಂದ್ರ ಸ್ಥಾಪಿಸಲಾಗಿತ್ತು. ಈಗಲೂ ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಿ, ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲಿ ಎಂದು ಮನವಿ ಮಾಡಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರ ಆವರಿಸಿದೆ. ಸರ್ಕಾರವು ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ, ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಬರ ಪರಿಹಾರದ ಹಣವನ್ನು ನೀಡಬೇಕು. ರೈತರು, ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಬೇಕು. ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯು ಹಾನಿಗೆ ಈಡಾಗಿರುವ ಹಿನ್ನೆಲೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರವನ್ನು ಸರ್ಕಾರ ನೀಡಬೇಕು. ಯಾವುದೇ ಕಾರಣಕ್ಕೂ ಈರುಳ್ಳಿ ಬೆಳೆಗಾರರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಬಾರದು ಎಂದು ಬಸವಲಿಂಗಪ್ಪ ಮನವಿ ಮಾಡಿದರು.

ಸಂಘದ ಮುಖಂಡರಾದ ಜಿ.ರಾಮನಗೌಡ, ಕೆ.ವಸಂತಕುಮಾರ, ನಾಗರಾಜ, ಬಸವಲಿಂಗಪ್ಪ ಇತರರು ಇದ್ದರು.

- - -

(ಬಾಕ್ಸ್‌)

* ಈರುಳ್ಳಿ ಹಾರ ಧರಿಸಿ ಪತ್ರಿಕಾಗೋಷ್ಠಿ

ಪ್ರಸ್ತುತ ಈರುಳ್ಳಿ ಬೆಳೆಗಾರರ ಪರಿಸ್ಥಿತಿ ಹೇಗಿದೆಯೆಂಬುದನ್ನು ಸರ್ಕಾರದ ಗಮನ ಸೆಳೆಯಲು, ಆಳುವವರ ಕಣ್ಣು ತೆರೆಸಲು ಸಂಘದ ಪದಾಧಿಕಾರಿಗಳು, ಸದಸ್ಯರು ತಾವು ಬೆಳೆದ ಈರುಳ್ಳಿಯನ್ನು ಸರದಂತೆ ಕೊರಳಲ್ಲಿ ಮಾಲೆ ಮಾಡಿಕೊಂಡು ಹಾಕಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದು ಗಮನ ಸೆಳೆಯಿತು. ಈರುಳ್ಳಿ ಬೆಳೆದವನ ಕಣ್ಣಲ್ಲಿ ಈಗ ನೀರಲ್ಲ, ರಕ್ತ ಬರುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಇನ್ನಾದರೂ ಈರುಳ್ಳಿ ಬೆಳೆಗಾರರ ಕಣ್ಣೀರೊರೆಸಲಿ ಎಂಬ ನಿರೀಕ್ಷೆಯಲ್ಲಿ ಈರುಳ್ಳಿ ಬೆಳೆಗಾರರಿದ್ದಾರೆ.

- - -

-26ಕೆಡಿವಿಜಿ6: ದಾವಣಗೆರೆಯಲ್ಲಿ ಬುಧವಾರ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ, ಪದಾಧಿಕಾರಿಗಳು ಕೊರಳಲ್ಲಿ ಈರುಳ್ಳಿ ಹಾರ ಧರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಬಿಗಡಾಯಿಸಿದ ಸರ್ವರ್ ಸಮಸ್ಯೆ
ಮಠಗಳು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದು: ಸುತ್ತೂರು ಶ್ರೀಗಳು