ಬಸವರಾಜ ನಂದಿಹಾಳ
ಬಸವನಬಾಗೇವಾಡಿ ತಾಲೂಕಿನ ಬುದ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಸವರಾಜೇಶ್ವರಿ ಎಸ್. ಚಿಮ್ಮಲಗಿ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ತೀವ್ರ ಆಸಕ್ತಿ ಮೂಡಿಸಲು, ಸಂತಸದ ಕಲಿಕೆ ಸಾಕಾರಗೊಳಿಸಲು ಹಾಗೂ ಶಿಕ್ಷಣದಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.ವಿದ್ಯಾರ್ಥಿಗಳನ್ನು ಪರಿಸರದೊಂದಿಗೆ ನೇರವಾಗಿ ತೊಡಗಿಸಲು ಬುದ್ನಿಯ ಪ್ರಾಣಿ ವೈವಿಧ್ಯತೆಯ ಅಧ್ಯಯನ ಯೋಜನೆ ಕೈಗೊಂಡಿದ್ದಾರೆ. ಈ ಯೋಜನೆಯಲ್ಲಿ ವಿದ್ಯಾರ್ಥಿಗಳೇ ವಿಜ್ಞಾನಿಗಳಾಗಿ ಬದಲಾದರು. ಶಾಲೆಯ ಸುತ್ತಮುತ್ತಲಿನ ಹಾಗೂ ಗ್ರಾಮದ ವಿವಿಧ ಪ್ರಾಣಿ, ಕೀಟ ಹಾಗೂ ಪಕ್ಷಿಗಳ ಛಾಯಾಚಿತ್ರಗಳನ್ನು ಮಕ್ಕಳು ಸ್ವತಃ ತೆಗೆದು, ಅವುಗಳ ಗುರುತಿಸುವಿಕೆ ಮತ್ತು ದತ್ತಾಂಶ ಸಂಗ್ರಹ ಮಾಡಿದರು. ಈ ಎಲ್ಲಾ ಮಾಹಿತಿಯನ್ನು ಡಿಜಿಟಲ್ ಆ್ಯಪ್‌ನಲ್ಲಿ ಯಶಸ್ವಿಯಾಗಿ ದಾಖಲಿಸಿದ್ದಾರೆ.
ಶಾಲೆಯಲ್ಲಿ ಒಲಿಯಾಂಡರ್ ಹಾಕ್ ಪತಂಗದ ಸಂಪೂರ್ಣ ಜೀವನಚಕ್ರವನ್ನು ವಿದ್ಯಾರ್ಥಿಗಳೊಂದಿಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದು, ಮೊಟ್ಟೆಯಿಂದ ಹಿಡಿದು ಕಂಬಳಿಹುಳು, ಕೋಶಾವಸ್ಥೆ ಹಾಗೂ ಚಿಟ್ಟೆಯಾಗಿ ಹೊರಬರುವವರೆಗಿನ ಪ್ರತಿಯೊಂದು ಹಂತವನ್ನು ಮಕ್ಕಳು ಕಣ್ಣಾರೆ ಕಂಡು, ಪ್ರಕೃತಿಯ ವಿಸ್ಮಯ ಅನುಭವಿಸಿ ತಿಳಿಯುವಂತೆ ಶಿಕ್ಷಕಿ ಬಸವರಾಜೇಶ್ವರಿ ಮಾಡಿದ್ದಾರೆ.ವಿಜಯಪುರ ಜಿಲ್ಲೆಯ ಡಿ.ಎಸ್.ಇ.ಆರ್.ಟಿ ಉಸ್ತುವಾರಿಯಲ್ಲಿ ತರಗತಿ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿಶೇಷ ಶೈಕ್ಷಣಿಕ ವಿಡಿಯೋಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಈ ವೀಡಿಯೊಗಳನ್ನು ರಾಜ್ಯಮಟ್ಟದ ಡಿಕ್ಷಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದು ಈ ಶಾಲೆಯ ಮಕ್ಕಳಿಗೆ ಮಾತ್ರವಲ್ಲದೆ ಇಡೀ ರಾಜ್ಯದ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೀಕ್ಷಿಸಿ ಕಲಿಯಲು ಸಹಕಾರಿಯಾಗಿದೆ.
ತರಬೇತಿಗಳಲ್ಲಿ ಕಲಿತ ನೂತನ ವಿಷಯಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳುತ್ತ, ತರಗತಿಯನ್ನು ಡಿಜಿಟಲ್ ಸ್ನೇಹಿಯಾಗಿಸಲಾಗಿದೆ. ಕಠಿಣವಾದ ವೈಜ್ಞಾನಿಕ ಪ್ರಯೋಗಗಳು ಮತ್ತು ಸಿದ್ಧಾಂತಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥೈಸಲು ವಿವಿಧ ಎಐ (AI) ಉಪಕರಣಗಳು ಹಾಗೂ ಸಿಮ್ಯುಲೇಶನ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಈ ಶಿಕ್ಷಕಿ.
-ಸಿ.ಆರ್.ಗಿರಗಾಂವಿ, ಮುಖ್ಯ ಗುರುಗಳು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬುದ್ನಿ
-ಬಸವರಾಜೇಶ್ವರಿ ಚಿಮ್ಮಲಗಿ. ಶಿಕ್ಷಕಿ
=ರೇಣುಕಾ ಕಲಬುರ್ಗಿ, ಕ್ಷೇತ್ರಶಿಕ್ಷಣಾಧಿಕಾರಿಗಳು, ಬಸವನಬಾಗೇವಾಡಿ