ಮಂಗಳೂರು ಸಚಿವ ಸಂಪುಟ ಸಭೆಗೆ ಬಿಜೆಪಿ ದ.ಕ.ದ 44 ಬೇಡಿಕೆಗಳ ಪಟ್ಟಿ ಸಲ್ಲಿಕೆ

KannadaprabhaNewsNetwork |  
Published : Sep 14, 2026, 03:00 AM IST
ಮುಖ್ಯಮಂತ್ರಿ ಡಿಕೆಶಿ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ಬೆಂಗಳೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ದ.ಕ.ದ ಶಾಸಕರು | Kannada Prabha

ಸಾರಾಂಶ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಸೆ.18 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಮಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿ ಸೆ.18 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಲವು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಶನಿವಾರ ಸಂಜೆ ಬೆಂಗಳೂರಿನಲ್ಲಿ ಸಿಎಂ ಡಿಕೆಶಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಶಾಸಕರು ಈ ಕುರಿತು ಮನವಿ ಸಲ್ಲಿಸಿದ್ದಾರೆ.

ತುಳು ಭಾಷೆಗೆ ಕರ್ನಾಟಕದಲ್ಲಿ ಎರಡನೇ ಭಾಷೆಯ ಮಾನ್ಯತೆ, ಕರಾವಳಿ ಜಿಲ್ಲೆಗೆ ವಿಶೇಷ ಟಾಸ್ಕ್‌ಫೋರ್ಸ್ ರಚನೆ, ಪ್ರವಾಸೋದ್ಯಮ ಅಭಿವೃದ್ಧಿ, ಕಸ್ತೂರಿರಂಗನ್ ವರದಿ ಸೇರಿದಂತೆ ಒಟ್ಟು 44 ಬೇಡಿಕೆಗಳನ್ನು ಈ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ತುಳುನಾಡಿನ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ ಶ್ರೀಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ, ಕಾಪು ಮಾರಿಯಮ್ಮ, ಪೊಳಲಿ ರಾಜರಾಜೇಶ್ವರಿ, ಕಟೀಲು ದುರ್ಗಾಪರಮೇಶ್ವರಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಉಳ್ಳಾಲ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ, ಉಳ್ಳಾಲದಲ್ಲಿ ಮೀನುಗಾರಿಕಾ ಜೆಟ್ಟಿ ಹಾಗೂ ನೇತ್ರಾವತಿ ನದಿಗೆ ಡಾಕ್ ನಿರ್ಮಾಣ, ಮಂಗಳೂರು ಅಳಿವೆ ಬಾಗಿಲು-ನೇತ್ರಾವತಿ-ಗುರುಪುರ ನದಿಯಲ್ಲಿ ಡ್ರೆಜ್ಜಿಂಗ್, ಮೀನುಗಾರರಿಗೆ ಸೀಮೆಎಣ್ಣೆ ಸಬ್ಸಿಡಿ ಹಾಗೂ ಮಹಿಳಾ ಮೀನುಗಾರರಿಗೆ ಸಾಲ ಸೌಲಭ್ಯ ಕಲ್ಪಿಸುವಂತೆಯೂ ಮನವಿಯಲ್ಲಿ ಆಗ್ರಹಿಸಲಾಗಿದೆ.

ದಕ್ಷಿಣ ಕನ್ನಡದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ರಸ್ತೆ, ಸೇತುವೆ, ಒಳಚರಂಡಿ ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ತಲಾ ₹1,000 ಕೋಟಿ ವಿಶೇಷ ಅನುದಾನ ನೀಡಬೇಕು ಎಂಬ ಬೇಡಿಕೆಯೂ ಪ್ರಮುಖವಾಗಿದೆ.

ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೂ ವಿಶೇಷ ಬೇಡಿಕೆ:

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ವಿಭಾಗೀಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ ಕನಿಷ್ಠ 250 ಐಸಿಯು ಹಾಸಿಗೆಗಳನ್ನು ನಿರ್ಮಿಸಬೇಕು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ಮೂಲಸೌಕರ್ಯ ಒದಗಿಸಿ, ಅಗತ್ಯ ಸಿಬ್ಬಂದಿ ನೇಮಕ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಂಬಳ, ಯಕ್ಷಗಾನ, ತುಳು ಸಂಸ್ಕೃತಿಗೆ ವಿಶೇಷ ಪ್ಯಾಕೇಜ್:

ತುಳುನಾಡಿನ ಜನಪದ ಕ್ರೀಡೆಯಾದ ಕಂಬಳಕ್ಕೆ ಪ್ರತಿ ಕಂಬಳಕ್ಕೆ ₹10 ಲಕ್ಷ ಅನುದಾನ ನೀಡಬೇಕು. ಯಕ್ಷಗಾನಕ್ಕೆ ಹೆಚ್ಚಿನ ಅನುದಾನ ಹಾಗೂ ಪ್ರೋತ್ಸಾಹ ನೀಡುವುದರ ಜತೆಗೆ, ನಡೆಯುತ್ತಿರುವ ಯಕ್ಷಗಾನ ಪ್ರದರ್ಶನಗಳಿಗೆ ಬೆಳಗಿನವರೆಗೂ ಪ್ರದರ್ಶನ ನಡೆಸಲು ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ತುಳು ನಾಟಕ ಹಾಗೂ ತುಳು ಚಲನಚಿತ್ರಗಳಿಗೆ ವಿಶೇಷ ಪ್ರೋತ್ಸಾಹಧನ, ಯಕ್ಷಗಾನ ಮೇಳಗಳು ಮತ್ತು ತುಳು ನಾಟಕ ತಂಡಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಪೋರ್ಚುಗೀಸರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕಳ ಉತ್ಸವಕ್ಕೆ ಕನಿಷ್ಠ ₹1 ಕೋಟಿ ಅನುದಾನ ನೀಡಬೇಕು ಎಂಬ ಬೇಡಿಕೆಯೂ ಇದೆ.

ಐಟಿ ಪಾರ್ಕ್, ಕೈಗಾರಿಕೆ ಮತ್ತು ಕ್ರೀಡಾ ಕ್ಷೇತ್ರಕ್ಕೂ ಒತ್ತು: ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಐಟಿ ಪಾರ್ಕ್ ಸ್ಥಾಪನೆ ಹಾಗೂ ಐಟಿಬಿಟಿ, ಗ್ರಾಮೋದ್ಯೋಗ ಸೇರಿದಂತೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುವ ಯೋಜನೆಗಳನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ.

ಇನ್ನಷ್ಟು ಪ್ರಮುಖ ಬೇಡಿಕೆಗಳು: ಮನೆ ಇಲ್ಲದ ಕುಟುಂಬಗಳಿಗೆ ವಸತಿ ಯೋಜನೆಯಡಿ ನಿವೇಶನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿಶೇಷ ಅನುದಾನ, ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ ಏಕ ನಿವೇಶನ ಸಡಿಲಿಕೆ, ಸರ್ಕಾರಿ ಹಾಗೂ ದೇವಸ್ಥಾನಗಳ ಭೂಮಿಯನ್ನು ಅಕ್ರಮ-ಸಕ್ರಮದಡಿ ಸಕ್ರಮಗೊಳಿಸುವುದು, ಮರಳು ಮತ್ತು ಕೆಂಪುಕಲ್ಲಿನ ದರ ಹಾಗೂ ಪರವಾನಗಿ ವ್ಯವಸ್ಥೆ ಸರಳೀಕರಣ, ಕುಮ್ಕಿ ಜಮೀನು ಸಕ್ರಮಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.

ಮಂಗಳೂರು ರಾಜ್ಯದ ಎರಡನೇ ಪ್ರಮುಖ ನಗರವೆಂದು ಘೋಷಿಸಲು ಕ್ರಮ ಕೈಗೊಳ್ಳಬೇಕು, ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ತಡೆಗೆ ಟಾಸ್ಕ್‌ಫೋರ್ಸ್ ರಚಿಸಬೇಕು ಹಾಗೂ ಸ್ವದೇಶಿ ಗೋವುಗಳ ಉತ್ಪನ್ನ ಉತ್ತೇಜನಕ್ಕಾಗಿ ಗೋವು ನಿಗಮ ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನೂ ಪ್ರಸ್ತಾಪಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನತೆಗೆ ಪ್ರಜಾ ಸೇವೆಯಡಿ ನ್ಯಾಯ ದೊರೆಯಲು ಅವಕಾಶ: ಅಶೋಕ್ ರೈ
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಒತ್ತು: ದರ್ಶನ್