ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬುಧವಾರ ಸತ್ಯಾಗ್ರಹ ಸ್ಥಳಕ್ಕೆ ಭೆಟ್ಟಿ ನೀಡಿ ನಂತರ ರಬಕವಿ-ಮಹಿಷವಾಡಗಿ ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಸೇರಿ ಇತರೆ ಕಾಮಗಾರಿ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ತಂಡ ಸರ್ಕಾರದಿಂದ ಆದೇಶವಾದ ಕಾರಣ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದರು.
ರಸ್ತೆ ಅಭಿವೃದ್ಧಿ ನಿಗಮದ ಅಭಿಯಂತರ ಪ್ರವೀಣ ಹಲಜಿ, ಸಿ.ವಿ. ಹರ್ಲಾಪುರ ಸೇರಿದಂತೆ ಅಧಿಕಾರಿಗಳ ತಂಡ ರಬಕವಿಯ ಕೆಲ ಮುಖಂಡರೊಂದಿಗೆ ಸೇತುವೆ ಕಾಮಗಾರಿ ಸ್ಥಳಕ್ಕೆ ತೆರಳಿ ಬೆಳಗಾವಿ ಅಧಿವೇಶನದಲ್ಲಿ ಚರ್ಚಿತ ವಿಷಯದಡಿ ಮತ್ತು ಉನ್ನತ ಆದೇಶದ ಹಿನ್ನೆಲೆ ಕಾಮಗಾರಿಗೆ ಒತ್ತು ನೀಡಲು ನಿರ್ಧಾರವಾಗಿದೆ. ಸತ್ಯಾಗ್ರಹ ಕೈ ಬಿಟ್ಟು, ಕಾಮಗಾರಿ ನಡೆಸುವಲ್ಲಿ ಸಹಕಾರ ನೀಡಿ ಸಾರ್ವಜನಿಕರು ಶಾಂತಿಯಿಂದ ದೈನಂದಿನ ಕಾರ್ಯದಲ್ಲಿ ತೊಡಗಬೇಕು. ಈ ಕಾಮಗಾರಿ ಕುರಿತಾಗಿ ವ್ಯವಸ್ಥಾಪಕ ನಿರ್ದೇಶಕರು ಆಗಮಿಸಿ ಪೂರ್ಣ ಕಾಮಗಾರಿ ಇತ್ಯರ್ಥವಾಗುವಂತಹ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆಂದರು.ಇದಕ್ಕೆ ಒಪ್ಪದ ಧುರೀಣರು ಕಾಮಗಾರಿ ಆರಂಭವಾಗುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಗಣಪತರಾವ ಹಜಾರೆ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಶಿವಾನಂದ ಬಾಗಲಕೋಟಮಠ, ಸುರೇಶ ಪಟ್ಟಣಶೆಟ್ಟಿ, ಚಂದ್ರು ಮಿರ್ಜಿ, ಮಹಾದೇವ ಧೂಪದಾಳ, ಭೀಮಶಿ ಪಾಟೀಲ, ನೀಲಕಂಠ ಮುತ್ತೂರ, ಮಲ್ಲಿಕಾರ್ಜುನ ಸಾಬೋಜಿ, ಮುರುಗೇಶ ಮುತ್ತೂರ, ವಜ್ರಕಾಂತ ಕಮತಗಿ, ಸುಧಾಕರ ಅಮ್ಮಣಗಿಮಠ ಸೇರಿದಂತೆ ಅನೇಕರಿದ್ದರು. ಬೆಳಗಾವಿ ಅಧಿವೇಶನದಲ್ಲಿ ಮೂರು ದಿನಗಳ ಹಿಂದೆ ಮಾಜಿ ಸಚಿವೆ, ಶಾಸಕಿ ಡಾ.ಉಮಾಶ್ರೀ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಭಾಧ್ಯಕ್ಷರು ಖುದ್ದಾಗಿ ಹಿರಿಯ ಅಧಿಕಾರಿಗಳ ತಂಡಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ತಕ್ಷಣ ಕಾಮಗಾರಿ ಕಾರ್ಯಾರಂಭಗೊಳಿಸಲು ಆದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.