ನೀರಕಟ್ಟೆ- ಬಾರಿಕೆ ಸಂಪರ್ಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

KannadaprabhaNewsNetwork | Published : Jul 12, 2024 1:34 AM

ಸಾರಾಂಶ

ವರದಿಗೆ ತುರ್ತು ಸ್ಪಂದನೆ ನೀಡಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ , ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ರಾ.ಹೆ. ೭೫ರ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಬಜತ್ತೂರು ಗ್ರಾಮದ ನೀರಕಟ್ಟೆ - ಬಾರಿಕೆ ಸಂಪರ್ಕ ಬೆಸೆಯುತ್ತಿದ್ದ ಕಾಲು ಸಂಕ (ಕಿರು ಸೇತುವೆ)ವನ್ನು ತೆರವುಗೊಳಿಸಿದ್ದರಿಂದ ನಿವಾಸಿಗಳಿಗೆ ಆಗುತ್ತಿದ್ದ ಸಮಸ್ಯೆಗೆ ಸ್ಪಂದಿಸಿರುವದ ಇಲಾಖಾಧಿಕಾರಿಗಳು, ತೋಡಿಗೆ ಮೋರಿ ಅಳವಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ನೀರಕಟ್ಟೆ- ಬಾರಿಕೆ ಸಂಪರ್ಕ ಕಾಲುಸಂಕ ತೆರವಿನಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯ ಬಳಿಕ ಎಚ್ಚೆತ್ತು, ಸಮಸ್ಯೆಗೆ ಸ್ಪಂದಿಸಿ ತಾತ್ಕಾಲಿಕ ಪರಿಹಾರ ಕಲ್ಪಿಸಿದೆ. ನೀರಕಟ್ಟೆಯಿಂದ ಬಾರಿಕೆಗೆ ಹೋಗುವ ರಸ್ತೆಗೆ ಹೆದ್ದಾರಿ ಬದಿಯ ತೋಡಿನಿಂದ ಸಂಪರ್ಕ ಸಾಧಿಸಲು ಈ ಹಿಂದೆ ಕಿರು ಸೇತುವೆ ನಿರ್ಮಿಸಲಾಗಿತ್ತು. ಇಲ್ಲಿನ ನಿವಾಸಿಗಳು ತಮ್ಮ ದಿನನಿತ್ಯದ ಸಂಚಾರಕ್ಕೆ ಇದನ್ನೇ ಬಳಸುತ್ತಿದ್ದರು. ಹೆದ್ದಾರಿ ಅಗಲೀಕರಣಕ್ಕೆ ಈ ಸೇತುವೆ ಇದ್ದ ಸ್ಥಳವೂ ಒಳಪಟ್ಟಿದ್ದರಿಂದ ಸೇತುವೆಯನ್ನು ಕಿತ್ತು ಹಾಕಲಾಗಿತ್ತು. ಆದರೆ ಬಳಿಕ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಪರಿಸರದ ನಿವಾಸಿಗರು ಸಮಸ್ಯೆಗೀಡಾಗಿದ್ದರು. ಈ ಬಗ್ಗೆ ಪತ್ರಿಕೆಯು ಸಚಿತ್ರ ವರದಿಯನ್ನು ಪ್ರಕಟಿಸಿತ್ತು.

ವರದಿಗೆ ತುರ್ತು ಸ್ಪಂದನೆ ನೀಡಿದ ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ , ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದರಂತೆ ಕಾರ್ಯಪ್ರವೃತರಾದ ಹೆದ್ದಾರಿ ಇಲಾಖಾಧಿಕಾರಿಗಳು ಗುತ್ತಿಗೆದಾರರ ಮೂಲಕ ತೋಡಿಗೆ ಮೋರಿಗಳನ್ನು ಅಳವಡಿಸಿ , ಮೇಲ್ಮೈಗೆ ಡಾಮರು ಮಿಶ್ರಿತ ಜಲ್ಲಿ ಹಾಕಿ ಸಂಚಾರ ಯೋಗ್ಯವನ್ನಾಗಿಸಿದರು. ಸತತ ಮನವಿ ಬಳಿಕ ಪರಿಹಾರ ಸಿಕ್ಕಿದೆ: ಮೊದಲಿದ್ದ ಕಾಲು ಸಂಕವನ್ನು ತೆರವುಗೊಳಿಸಿದ್ದರಿಂದ ಪರ್ಯಾಯ ಸಂಪರ್ಕ ವ್ಯವಸ್ಥೆಯನ್ನು ಮಾಡಬೇಕೆಂದು ಸತತ ಮನವಿ ಸಲ್ಲಿಸಿದ್ದೆವು. ಆದರೆ ನಮ್ಮ ಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ. ಇದೀಗ ವಿಳಂಬವಾದರೂ ನಮಗೆ ನ್ಯಾಯ ದೊರಕಿದೆ. ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿದ ಪತ್ರಿಕೆ, ಪೂರಕ ಸ್ಪಂದನೆ ತೋರಿದ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಸ್ಥಳೀಯ ನಿವಾಸಿ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಕಿಶೋರ್ ಹೇಳಿದರು.

Share this article