ಶಿವಾನಂದ ಗೊಂಬಿ
ರೈತರಿಂದ ಖರೀದಿಸಿ ತಿಂಗಳ ಬಳಿಕ ತಿರಸ್ಕರಿಸಿದ 1000 ಕ್ವಿಂಟಲ್ ಹೆಸರು ಬ್ಯಾಹಟ್ಟಿ ಗೋದಾಮಿನಲ್ಲಿ ಕೊಳೆಯುತ್ತಿದೆ. ಕೆಲವೊಂದಿಷ್ಟು ಚೀಲಗಳೆಲ್ಲ ಹರಿದು ಚೆಲ್ಲಾಪಿಲ್ಲಿಯಾಗಿದ್ದು, ಕೆಲ ಚೀಲಗಳನ್ನು ಇಲಿಗಳು ಕತ್ತರಿಸಿ ಅರ್ಧಂಬರ್ಧ ಹೆಸರು ತಿಂದಿವೆ. ಅತ್ತ ರೈತರಿಗೂ ದುಡ್ಡು ಬರುತ್ತಿಲ್ಲ, ಇತ್ತ ಖರೀದಿಸಿದ ಹೆಸರನ್ನು ಸಂರಕ್ಷಿಸಿಲ್ಲ.
ಬೆಂಬಲ ಬೆಲೆ ಯೋಜನೆಯಡಿ ಬ್ಯಾಹಟ್ಟಿ ಖರೀದಿ ಕೇಂದ್ರದಲ್ಲಿ 95 ರೈತರಿಂದ 2025ರ ಡಿ. 23ರಂದು 990.5 ಕ್ವಿಂಟಲ್ ಹೆಸರು ಖರೀದಿಸಿ ನರಗುಂದ ವೇರ್ ಹೌಸ್‌ಗೆ ಕಳುಹಿಸಲಾಗಿತ್ತು. ಬಳಿಕ 2026ರ ಜ. 14ರಂದು ಗುಣಮಟ್ಟ ಸರಿ ಇಲ್ಲವೆಂದು ತಿರಸ್ಕರಿಸಿ ನರಗುಂದದಿಂದ ಮರಳಿ ಬ್ಯಾಹಟ್ಟಿ ಸೊಸೈಟಿಗೆ ಕಳುಹಿಸಲಾಗದೆ. ಹೀಗೆ ಖರೀದಿಸಿ 21 ದಿನಗಳ ಬಳಿಕ ತಿರಸ್ಕರಿಸಿದ್ದಕ್ಕೆ ರೈತರ ಆಕ್ರೋಶಕ್ಕೆ ಅಧಿಕಾರಿಗಳು ತುತ್ತಾಗಿದ್ದರು. ಗುಣಮಟ್ಟ ಸರಿಯಿಲ್ಲದಿದ್ದರೆ ಸೊಸೈಟಿಯಲ್ಲಿ ಖರೀದಿಸಿದ್ದು ಹೇಗೆ ಎಂದು ಪ್ರಶ್ನಿಸಿದರು. ನಮ್ಮಿಂದ ಖರೀದಿಸಿದ ಹೆಸರಿಗೆ ₹ 87 ಲಕ್ಷ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಪ್ರಾದೇಶಿಕ ಕಚೇರಿ ಎದುರು 5 ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಕೊಳೆಯುತ್ತಿದೆ ಹೆಸರು:
ಆಹಾರ ಸಾಮಗ್ರಿ ಸುರಕ್ಷಿತವಾಗಿಡುವ (ಶಿಥಿಲೀಕರಣ ಘಟಕ) ಎಲ್ಲ ವ್ಯವಸ್ಥೆಯ ಸಂಗ್ರಹಾಕಾರವಾದರೆ ಓಕೆ. ಆದರೆ, ಬ್ಯಾಹಟ್ಟಿ ಗೋದಾಮಿನಲ್ಲಿ ಸರಿಯಾಗಿ ಗಾಳಿ, ಬೆಳಕು ಇಲ್ಲ. ಹೀಗಾಗಿ ಅಲ್ಲಿ ಇಟ್ಟಿರುವ ಹೆಸರು ಹಾಳಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಉಂಟಾಗಿರುವ ಸಮಸ್ಯೆ ನಿವಾರಣೆ ಆದರೆ ಮಾತ್ರ ಹೆಸರನ್ನು ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಹೀಗೇ ದಿನದೂಡಿದರೆ ಹೆಸರನ್ನು ಜಾನುವಾರುಗಳ ಆಹಾರಕ್ಕೆ ಮಾತ್ರ ಬಳಸಲು ಬರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎಂಟು ತಿಂಗಳಿಂದ ಗೋದಾಮಿನಲ್ಲಿ ಹೆಸರು ದಾಸ್ತಾನು ಮಾಡಲಾಗಿದೆ. ಹಾಳಾಗದಂತೆ ಗುಳಿಗೆ ಹಾಕಿಡಲಾಗಿದೆ. ಆದರೂ ಇಲಿಗಳು ಚೀಲಗಳನ್ನು ಹರಿದಿದ್ದು ಹೆಸರು ಹಾಳಾಗಿವೆಯೋ ಇಲ್ಲವೋ ಗೊತ್ತಿಲ್ಲ.